ಕಸ್ತೂರಿರಂಗನ್ ವರದಿ ನೆಪದಲ್ಲಿ ತೊಂದರೆ ನೀಡಬೇಡಿ: ಶಾಸಕ ಭೀಮಣ್ಣ ನಾಯ್ಕ

| Published : Oct 09 2024, 01:31 AM IST

ಸಾರಾಂಶ

ಉತ್ತರ ಕನ್ನಡ ದೇಶದ ಅಭಿವೃದ್ಧಿಗಾಗಿಯೂ ತ್ಯಾಗ ಮಾಡಿದೆ. ಜಲ ವಿದ್ಯುತ್ ಯೋಜನೆಗಳು, ಕೈಗಾ ಅಣು ಸ್ಥಾವರದಂತಹ ಯೋಜನೆಗಳಿಗೆ ಜಾಗ ನೀಡಿದ್ದೇವೆ. ಹೀಗಿರುವಾಗ ಈ ವರದಿಯಿಂದ ಜಿಲ್ಲೆಗೆ ವಿನಾಯಿತಿ ನೀಡಬೇಕು.

ಶಿರಸಿ: ಕಸ್ತೂರಿರಂಗನ್ ವರದಿ ರಾಜ್ಯ ಸರ್ಕಾರ ಈಗಾಗಲೇ ತಿರಸ್ಕರಿಸಿದ್ದು, ಈ ವರದಿ ನೆಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಭೀಮಣ್ಣ ನಾಯ್ಕ ಸೂಚಿಸಿದರು.

ಸೋಮವಾರ ನಗರದ ಝೂ ವೃತ್ತದಲ್ಲಿ ಕರ್ನಾಟಕ ಸರ್ಕಾರ, ಅರಣ್ಯ ಇಲಾಖೆ, ಕೆನರಾ ವೃತ್ತ, ಶಿರಸಿ ಅರಣ್ಯ ಉಪವಿಭಾಗದ ಆಶ್ರಯದಲ್ಲಿ ೭೦ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಮಾತನಾಡಿದರು.

ಉತ್ತರಕನ್ನಡದ ಅರಣ್ಯ ರಕ್ಷಣೆಗೆ ಕಸ್ತೂರಿರಂಗನ್ ವರದಿಯೇ ಬೇಕಾಗಿಲ್ಲ. ಸದನದಲ್ಲಿ ಈ ವಿಷಯ ಚರ್ಚಿಸಿ ಕಸ್ತೂರಿರಂಗನ್ ವರದಿ ಜಿಲ್ಲೆಗೆ, ಶಿರಸಿ- ಸಿದ್ದಾಪುರ ಕ್ಷೇತ್ರಕ್ಕೆ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ. ಉತ್ತರ ಕನ್ನಡ ದೇಶದ ಅಭಿವೃದ್ಧಿಗಾಗಿಯೂ ತ್ಯಾಗ ಮಾಡಿದೆ. ಜಲ ವಿದ್ಯುತ್ ಯೋಜನೆಗಳು, ಕೈಗಾ ಅಣು ಸ್ಥಾವರದಂತಹ ಯೋಜನೆಗಳಿಗೆ ಜಾಗ ನೀಡಿದ್ದೇವೆ. ಹೀಗಿರುವಾಗ ಈ ವರದಿಯಿಂದ ಜಿಲ್ಲೆಗೆ ವಿನಾಯಿತಿ ನೀಡಬೇಕು ಎಂದರು.

ಕಾಡಿನಲ್ಲಿ ಹಸಿರು ಕಾಣುತ್ತಿದೆ. ಕಾಡುಪ್ರಾಣಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ರೈತರ ಹೊಲಗಳಿಗೆ ಕಾಡುಪ್ರಾಣಿಗಳು ಬಾರದಂತೆ ನೋಡಿಕೊಳ್ಳಬೇಕಿದೆ. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಸಂಪದ್ಭರಿತವಾಗಿದೆ. ಉತ್ತಮ ಹಸಿರು ವಾತಾವರಣ ಕಾಣುತ್ತಿದ್ದೇವೆ. ಗ್ಯಾಸ್ ಸೌಲಭ್ಯದಿಂದ ಉರುವಲಿಗಾಗಿ ಈಗ ಕಟ್ಟಿಗೆ ಬಳಸುವುದು ಕಡಿಮೆಯಾಗಿದೆ. ಇದರಿಂದ ಮರ ಕಡಿಯುವ ಪ್ರಮಾಣವೂ ಇಳಿಮುಖವಾಗಿದೆ ಎಂದರು.

ಉಪಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್. ಮಾತನಾಡಿ, ಉತ್ತರಕನ್ನಡ ಜಿಲ್ಲೆ ಪಶ್ಚಿಮ ಘಟ್ಟದ ಮಧ್ಯಭಾಗದಲ್ಲಿದೆ. ಕಳೆದ ಹತ್ತು ವರ್ಷದಲ್ಲಿ ಅರಣ್ಯ ಪ್ರದೇಶದಲ್ಲಿ ಖಾಲಿಯಾಗಿದ್ದ ೨೦ ಸಾವಿರ ಹೆಕ್ಟೇರ್‌ನಲ್ಲಿ ಪುನಃ ಮರಗಿಡಗಳು ಬೆಳೆದಿವೆ ಎಂಬುದನ್ನು ಫಾರೆಸ್ಟ್ ಸರ್ವೆ ಆಫ್ ಇಂಡಿಯಾದವರ ಮಾಹಿತಿಯಿದೆ. ಇನ್ನು ಗ್ರಿನ್ ಇಂಡಿಯಾ ಮಿಷನ್‌ಅನ್ನು ಸಿದ್ದಾಪುರ ಮಂಡ್ಲಿಕೊಪ್ಪದಲ್ಲಿ ಅನುಷ್ಠಾನ ಮಾಡಿದ್ದು, ೧೮೦೦ ಹೆಕ್ಟೇರ್‌ನಷ್ಟು ಜಾಸ್ತಿಯಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಕಾಡು ಉಳಿದರೆ ನಾವು ಉಳಿಯುತ್ತೇವೆ ಎಂಬ ಜಾಗೃತಿ ಸಾರ್ವಜನಿಕರಿಗೂ ಬೇಕು. ಹೀಗಿದ್ದರೂ ಕಾಡು ಕಡಿಯುವುದು ಕಡಿಮೆಯಾಗಿಲ್ಲ. ಇದರಿಂದ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಮಕ್ಕಳಿಗೂ ಪರಿಸರ ಪಾಠ ಹೇಳಬೇಕು ಎಂದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್.ಎಸ್. ನಿಂಗಾಣಿ, ಪವಿತ್ರಾ ಉಪಸ್ಥಿತರಿದ್ದರು.

ಈ ವೇಳೆ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡೊಳ್ಳು ವಾದ್ಯಗಳೊಂದಿಗೆ ನಗರದಲ್ಲಿ ಜಾಥಾ ನಡೆಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ, ಅರಣ್ಯ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡರು. ಉಷಾ ನಿರೂಪಿಸಿದರು.