ರೈತರ ಅಸಹಾಯಕತೆ ದುರ್ಬಳಕೆ ಮಾಡಿಕೊಳ್ಳದಿರಿ: ಡಾ.ಮಂಜುನಾಥ್‌

| Published : Mar 23 2024, 01:04 AM IST

ರೈತರ ಅಸಹಾಯಕತೆ ದುರ್ಬಳಕೆ ಮಾಡಿಕೊಳ್ಳದಿರಿ: ಡಾ.ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಬೋರ್‌ವೆಲ್‌ ಕೊರೆಯಲು ದರ ನಿಗದಿ ಪಡಿಸುವ ಕುರಿತು ತಾಲೂಕು ಮಟ್ಟದ ಸಮಿತಿಯ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಜಿಲ್ಲೆಯ ರೈತರು ಬರದ ಸಂಕಷ್ಟದಲ್ಲಿದ್ದು, ರೈತರ ಅಸಹಾಯಕತೆ ಮತ್ತು ಅನಿವಾರ್ಯತೆಯನ್ನು ದುರ್ಬಳಕೆ ಮಾಡಿಕೊಳ್ಳುವ ಬೋರ್‌ವೆಲ್‌ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಮಂಜುನಾಥ್‌ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೋರ್‌ವೆಲ್‌ ಕೊರೆಯಲು ದರ ನಿಗದಿ ಪಡಿಸುವ ಕುರಿತು ತಾಲೂಕು ಮಟ್ಟದ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೋರ್‌ವೆಲ್‌ ಮಾಲೀಕರು ಬರ ಪರಿಸ್ಥಿತಿ ಲಾಭವನ್ನು ಪಡೆಯಲು ಹೆಚ್ಚುವರಿ ದರ ನಿಗದಿ ಮಾಡಿದ್ದು, ಈ ಬಗ್ಗೆ ರೈತರಿಂದ ಬಂದ ದೂರಿನ ಮೇರೆಗೆ ಜಿಲ್ಲಾಡಳಿತ ರೈತ ಮುಖಂಡರು ಹಾಗೂ ಬೋರ್‌ವೆಲ್‌ ಏಜೆನ್ಸಿಯವರ ಸಭೆ ನಡೆಸಿ ಜಿಲ್ಲೆಯಾದ್ಯಂತ ಏಕರೂಪದ ದರ ನಿಗದಿ ಮಾಡಿದೆ, ಅದರಂತೆಯೇ ಏಜೆನ್ಸಿಯವರು ಹಣ ಪಡೆಯಬೇಕು. ಹೆಚ್ಚುವರಿ ಹಣ ಪಡದರೆ ಈ ಬಗ್ಗೆ ರೈತರು ತಹಸೀಲ್ದಾರ್‌ ಅವರ ಗಮನಕ್ಕೆ ತಂದರೆ ಅಂತಹ ಏಜೆನ್ಸಿ ಅವರ ಮೇಲೆ ಕಾನೂನು ಕ್ರಮಕೈಗೊಳ್ಳುವುದರ ಜೊತೆಗೆ ಲಾರಿಯನ್ನು ವಶ ಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ರೈತರು ನಾವೇ ಕೇಸಿಂಗ್‌ ಪೈಪ್‌ ತಂದರೂ ಅದನ್ನು ಕೊಳವೆ ಬಾವಿಗೆ ಇಳಿಸಲು ಅಡಿಗೆ 20-25 ರು. ಪಡೆಯುತ್ತಾರೆ. ಅವರು ತರುವ ಕೇಸಿಂಗ್‌ ಗುಣಮಟ್ಟ ಚೆನ್ನಾಗಿರುವುದಿಲ್ಲ. ಕಡಿಮೆ ಬೆಲೆ ಕೇಸಿಂಗ್‌ ಪೈಪ್‌ಗೆ ಹೆಚ್ಚುವರಿ ದರ ಪಡೆಯುತ್ತಾರೆ ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿದ ಜಂಟಿ ನಿರ್ದೇಶಕರು ಈ ವಿಷಯ ಜಿಲ್ಲಾ ಮಟ್ಟದ ಸಭೆಯಲ್ಲಿ ಪ್ರಸ್ತಾಪವಾಗಲಿಲ್ಲ. ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ರೈತರನ್ನು ಯಾರೂ ಶೋಷಣೆ ಮಾಡಬಾರದು, ಬರದ ಸಂಕಷ್ಟದಲ್ಲಿ ರೈತರಿಗೆ ನೀರಿನ ಅವಶ್ಯಕತೆ ಇದೆ. ಇದರ ಲಾಭವನ್ನು ಪಡೆದುಕೊಳ್ಳಲು ಯಾರೂ ಪ್ರಯತ್ನಿಸಬಾರದು. ಒಂದು ವೇಳೆ ಹೆಚ್ಚುವರಿ ದರ ಪಡೆದರೆ ಜಿಲ್ಲಾಡಳಿತ ರೈತರ ನೆರವಿಗೆ ಬರಲಿದೆ ಎಂದರು.

ಸಭೆಯಲ್ಲಿ ತಹಸೀಲ್ದಾರ್‌ ತಿರುಪತಿ ಪಾಟೀಲ್‌, ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್‌.ಈಶ, ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್‌, ರೈತ ಮುಖಂಡರು, ರಿಗ್‌ ಏಜೆನ್ಸಿಯವರು ಭಾಗವಹಿಸಿದ್ದರು.