ಆಸೆಗಳಿಗೆ ಬಲಿಯಾಗಿ ಮೋಸಕ್ಕೆ ಒಳಗಾಗಬೇಡಿ: ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

| Published : Dec 29 2023, 01:32 AM IST

ಆಸೆಗಳಿಗೆ ಬಲಿಯಾಗಿ ಮೋಸಕ್ಕೆ ಒಳಗಾಗಬೇಡಿ: ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ, ಕಾನೂನು ಮಾಪನಾಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅರಿವಿನ ಕೊರತೆ, ಆಸೆಗಳಿಗೆ ಬಲಿಯಾಗಿ ಗ್ರಾಹಕರು ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ, ಕಾನೂನು ಮಾಪನಾಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಗ್ರಾಹಕರು ಜಾಗೃತರಾದರೆ ಮೋಸ, ವಂಚನಗಳಿಗೆ ಒಳಗಾಗುವುದು ತಪ್ಪಲಿದೆ. ಪ್ರಸ್ತುತ ದಿನಗಳಲ್ಲಿ ಗ್ರಾಹಕ ಅತಿ ಹೆಚ್ಚು ಆನ್‍ಲೈನ್ ವಂಚನೆಗೆ ಒಳಗಾಗುತ್ತಿದ್ದು, ಪ್ರತಿಯೊಂದು ವಸ್ತುವಿನ ಹಿಂದೆ ನಮ್ಮ ದುಡಿಮೆಯ ಶ್ರಮದ ಫಲವಿರುತ್ತದೆ. ಹಾಗಾಗೀ ಅನಾವಶ್ಯಕವಾಗಿ ವ್ಯರ್ಥ ಮಾಡಲು ಬಿಡಬಾರದು ಎಂದರು.

ಮಾರುಕಟ್ಟೆಗಳಲ್ಲಿ ರೈತರು ತಮ್ಮ ಉತ್ಪನ್ನಗಳಲ್ಲಿ ತೂಕ ಮತ್ತು ಅಳತೆಯಲ್ಲಿ ಮೋಸಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಗಿಂದಾಗ್ಗೆ ಕಾನೂನು ಮಾಪನಾ ಶಾಸ್ತ್ರ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಬೇಕು. ತೂಕ ಮತ್ತು ಅಳತೆಯಲ್ಲಿ ಮೋಸ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ರೈತರು ಕೂಡ ತಮ್ಮ ಬೆಳೆಗಳ ತೂಕ ಸರಿಯಾಗಿ ಮಾಡಲಾಗುತ್ತಿದೆಯೇ ಎಂಬುದನ್ನು ಗಮನಿಸಬೇಕು. ಮೋಸ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಗ್ರಾಹಕರು ತಾವು ಖರೀದಿ ಮಾಡುವ ವಸ್ತುವಿನ ಮೌಲ್ಯ ಮತ್ತು ಅದರ ಮಹತ್ವ ತಿಳಿದುಕೊಳ್ಳಬೇಕು. ಆನ್‍ಲೈನ್ ವಹಿವಾಟುಗಳಲ್ಲಿ ಸಾಕಷ್ಟು ವಂಚಿಸುವ ಪ್ರಸಂಗಳು ಕಂಡುಬರುತ್ತಿವೆ. ಮೋಸಕ್ಕೆ ಒಳಗಾದ ಗ್ರಾಹಕರ ಹಿತರಕ್ಷಣೆಗೆ ಪ್ರತಿ ಜಿಲ್ಲೆಯಲ್ಲಿಯೂ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇದ್ದು, ಮನವಿ ಸಲ್ಲಿಸುವ ಮೂಲಕ ನ್ಯಾಯೋಚಿತ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎಚ್.ಎನ್.ಮೀನಾ ಮಾತನಾಡಿ, ಯಾವುದೇ ಒಂದು ವಸ್ತು ಖರೀದಿ ಮಾಡಿದಾಗ ನಾವು ಗ್ರಾಹಕರು ಆಗುತ್ತೇವೆ. ಆ ವಸ್ತುವಿನ ಸರಿಯಾದ ಬಿಲ್‍ ಪಡೆದಾಗ ಶಾಶ್ವತ ಗ್ರಾಹಕ ರಾಗುತ್ತೇವೆ. ಅಗತ್ಯ ದಾಖಲೆ ಇಟ್ಟುಕೊಂಡಿದ್ದರೆ ಮೋಸ, ವಂಚನೆಯಾದಾಗ ಪರಿಹಾರ ಪಡೆಯಬಹುದು. ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವಿದ್ದು, ಇಲ್ಲಿ 1ರಿಂದ 50ಲಕ್ಷ ರು.ವರೆಗೆ ಪರಿಹಾರ ಪಡೆಯಬಹುದು. ರಾಜ್ಯ ಆಯೋಗದಿಂದ ₹50 ಲಕ್ಷದಿಂದ 2 ಕೋಟಿವರೆಗೂ ಪಡೆಯಬಹುದು. ರಾಷ್ಟ್ರೀಯ ಆಯೋಗದಲ್ಲಿ ₹2ರಿಂದ 10ಕೋಟಿವರೆಗೂ ಮೌಲ್ಯದ ವ್ಯವಹಾರಗಳಿಗೆ ಪರಿಹಾರ ಪಡೆಯಲು ಅವಕಾಶವಿದೆ ಎಂದರು.

ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ಗ್ರಾಹಕರು ಯಾವುದೇ ವಸ್ತು ಖರೀದಿಸಿದರೂ ಕಡ್ಡಾಯವಾಗಿ ರಸೀದಿ ಪಡೆಯಬೇಕು. ನೀವುಗಳು ಏನಾದರೂ ಮೋಸ ಹೋಗಿದ್ದರೆ ಈ ರಸೀದಿ ಉಪಯೋಗಕ್ಕೆ ಬರಲಿದೆ. ಒಂದು ವೇಳೆ ಏನಾದರೂ ಮೋಸಕ್ಕೆ ಒಳಗಾಗಿದ್ದರೆ, ಮೋಸದ ವಿರುದ್ಧ ಆಯೋಗಕ್ಕೆ ಮೊರೆಹೋದರೆ ನ್ಯಾಯ ಸಿಗಲಿದೆ. ಗ್ರಾಹಕರು ಜಾಗೃತರಾದಷ್ಟು ವ್ಯಾಪಾರಸ್ಥರು ಮಾಡುವ ಮೋಸ, ವಂಚನೆ ಕಡಿಮೆಯಾಗಲಿದೆ ಎಂದರು.

ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಕುರಿತು ಉಪನ್ಯಾಸ ನೀಡಿದ ವಕೀಲ ಬಿ.ಕೆ.ರಹಮತ್‍ವುಲ್ಲಾ, ಪ್ರತಿಯೊಬ್ಬರಿಗೂ ಅನ್ನ, ಬಟ್ಟೆ, ವಸತಿ ಕಡ್ಡಾಯವಾಗಿ ಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆಯುವ ಪಡಿತರದಲ್ಲಿ ತೂಕ ಮತ್ತು ಅಳತೆಯಲ್ಲಿ ಮೋಸವಾದರೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದು ನ್ಯಾಯ ಪಡೆದುಕೊಳ್ಳಬಹುದು. ವಸ್ತು ಖರೀದಿಸುವ ಮೊದಲು ಗ್ರಾಹಕರು ಅದರ ಗುಣಮಟ್ಟ ಪರಿಶೀಲಿಸಬೇಕು. ಗ್ರಾಹಕರಿಗೆ ಮೋಸ ಆದಲ್ಲಿ ಗ್ರಾಹಕ ಆಯೋಗದಿಂದ ಪರಿಹಾರ ಪಡೆಯಬಹುದು. ಆಯೋಗದಲ್ಲಿ ಕೇವಲ ಮೂರು ತಿಂಗಳಲ್ಲಿಯೇ ಪರಿಹಾರ ಸಿಗಲಿದೆ ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಬಿ.ಎಚ್.ಯಶೋಧ, ಆಹಾರ ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂಧನ್, ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಕಾನೂನು ಮಾಪನಾ ಶಾಸ್ತ್ರ ಇಲಾಖೆಯ ಹಿರಿಯ ಪರಿವೀಕ್ಷಕ ರಾಘುನಾಯ್ಕ್, ನವೀನ್, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಜಿಲ್ಲಾ ಸಂಯೋಜಕ ತಮಟಕಲ್ಲು ಬಿ.ಹನುಮಂತಪ್ಪ ಇದ್ದರು.