ಸಾರಾಂಶ
ಗದಗ: ಕಾಂಗ್ರೆಸಿನ ಗ್ಯಾರಂಟಿ ಯೋಜನೆಗಳ ಆಮಿಷಕ್ಕೆ ಬಲಿಯಾಗದೇ ದೇಶದ ಭವಿಷ್ಯ ರೂಪಿಸುವ ಬಿಜೆಪಿಯನ್ನು ಬೆಂಬಲಿಸಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಮನವಿ ಮಾಡಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ೬, ೮, ೯ ಮತ್ತು ೧೦ನೇ ವಾರ್ಡಗಳಲ್ಲಿ ಬಾಗಲಕೋಟೆ ಲೋಕಸಭಾದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಆಮಿಷವೊಡ್ಡಿ ಮತ ಪಡೆದಂತೆ ಲೋಕಸಭಾ ಚುನಾವಣಿಯಲ್ಲಿಯೂ ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿ, ಮಹಿಳೆಯರಿಗೆ ವರ್ಷಕ್ಕೆ ₹೧ ಲಕ್ಷ ನೀಡುವುದಾಗಿ ಮತದಾರರನ್ನು ಸೆಳೆಯುತ್ತಿದೆ. ಇದು ಸುಳ್ಳು ಭರವಸೆಯಾಗಿದ್ದು, ಅವರ ಮೈತ್ರಿ ಪಕ್ಷಗಳು ಈ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚುತ್ತಿಲ್ಲ. ಇದು ಕೇವಲ ಕಾಂಗ್ರೆಸ್‌ನ ಯೋಜನೆಯಾಗಿದ್ದು, ದೇಶದ ವರ್ಷದ ಬಜೆಟ್ ಗಾತ್ರಕ್ಕಿಂತ ಗ್ಯಾರಂಟಿಗೆ ನೀಡುವ ಹಣವೇ ದೊಡ್ಡದಾಗಿದೆ ಎಂದರು.
೬೫ ವರ್ಷ ಆಳಿದ ಕಾಂಗ್ರೆಸ್ ಇಂತಹ ಉಚಿತ ಗ್ಯಾರಂಟಿಗಳನ್ನು ಅಧಿಕಾರದಲ್ಲಿ ಇದ್ದಾಗ ಮಾಡದೇ ಈಗ ಸೋಲುವ ಭಯದಿಂದ ಆಮಿಷ ತೋರಿಸುತ್ತಿದೆ. ೧೦ ವರ್ಷ ಆಳಿದ ಮೋದಿ ಸರ್ಕಾರವು ಶಾಶ್ವತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಉಜ್ವಲ, ಜನಧನ್, ಸುಕನ್ಯಾ ಸಮೃದ್ಧಿ, ಆಯುಷ್ಮಾನ್ ಭಾರತ, ಕಿಸಾನ್ ಸಮ್ಮಾನ, ಮನೆ ಮನೆಗೆ ಕುಡಿಯುವ ನೀರು, ನೂತನ ಶಿಕ್ಷಣ ನೀತಿ ಸೇರಿದಂತೆ, ಹೊಸ ರೈಲ್ವೆ ಮತ್ತು ವಿಮಾನ ನಿಲ್ದಾಣ ಸ್ಥಾಪನೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಜತೆಗೆ ವಿಕಸಿತ ಭಾರತವಾಗಿ ಹೊರ ಹೊಮ್ಮಿದೆ. ಇಂದು ಆರ್ಥಿಕತೆಯಲ್ಲಿ 11 ನೇ ಸ್ಥಾನಕ್ಕೆ ಇದ್ದ ದೇಶವು ೪ನೇ ಸ್ಥಾನಕ್ಕೆ ಕಾಲಿಡುತ್ತಿದ್ದು, ಇಡೀ ಜಗತ್ತೇ ಭಾರತದ ಕಡೆ ನೋಡುವಂತಾಗಿದೆ ಎಂದು ಹೇಳಿದರು.ಬಿಜೆಪಿ ಹಿರಿಯ ಮುಖಂಡ ವಸಂತ ಮೇಟಿ ಮಾತನಾಡಿ, ಬಿಟ್ಟಿ ಗ್ಯಾರಂಟಿ ಯೋಜನೆಗಳಿಂದ ವಿದ್ಯುತ್ ದರ, ಮುದ್ರಾಂಕ ಶುಲ್ಕ, ಮದ್ಯ ಹಾಗೂ ದಿನಸಿ ವಸ್ತುಗಳು ದುಬಾರಿಯಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಶೇ. ೫೫ರಷ್ಟು ಆಸ್ತಿ ಸರ್ಕಾರದ ಪಾಲಾಗಲಿದೆ ಎಂದರು.
ಗ್ರಾಪಂ ಮಾಜಿ ಸದಸ್ಯ ಅಂದಪ್ಪ ತಿಮ್ಮಾಪುರ, ಗ್ರಾಪಂ ಮಾಜಿ ಅಧ್ಯಕ್ಷೆ ಲಲಿತಾ ಗೌಡರ, ಯುವ ಮುಖಂಡ ಮಹೇಶ ಮುಸ್ಕಿನಭಾವಿ, ಯುವ ಧುರೀಣ ಮರಿಯಪ್ಪ ವಡ್ಡರ ಇದ್ದರು.
ಗ್ರಾಪಂ ಸದಸ್ಯ ರುದ್ರಪ್ಪ ಮುಸ್ಕಿನಭಾವಿ, ವೀರಣ್ಣ ಚಕ್ರಸಾಲಿ, ಮಹಾಂತೇಶ ಕಮತರ, ಮಂಜುಳಾ ಮೆಣಸಿನಕಾಯಿ, ಶಿವಪ್ಪ ಬಳಿಗೇರ, ವಿರೂಪಾಕ್ಷಿ ಬೆಟಗೇರಿ, ಮಂಜುಳಾ ಪೂಜಾರ, ಎಸ್.ಬಿ. ಕಲಕೇರಿ, ದತ್ತಣ್ಣ ಜೋಶಿ, ಈರಪ್ಪ ಅಜಿನಾಳ, ಕಳಕೇಶ ಟೆಂಗಿನಕಾಯಿ, ಎಂ.ಎಂ. ಹುಬ್ಬಳ್ಳಿ, ಶರಣಯ್ಯ ಮುಳಕೊಂಪಿಮಠ, ಚಂದ್ರಗೌಡ ಪಾಟೀಲ ಇದ್ದರು.
ಮರಿಯಪ್ಪ ವಡ್ಡರ ಸ್ವಾಗತಿಸಿದರು. ಬಿಜೆಪಿ ಮುಖಂಡ ಪ್ರಕಾಶ ಅರಹುಣಸಿ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ದೊಂಗಡೆ ವಂದಿಸಿದರು.