ಸಾರಾಂಶ
ಶ್ರೀರಂಗಪಟ್ಟಣ: ಕ್ಷಯ ರೋಗಕ್ಕೆ ಭಯ ಬೇಡ. ಆಸ್ಪತ್ರೆಗೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ಬೆಳಗೊಳ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಬೆಳಗೋಳ ಆಯುಷ್ಮಾನ್ ಆರೋಗ್ಯ ಮಂದಿರದಿಂದ ಹಮ್ಮಿಕೊಂಡಿದ್ದ 100 ದಿನಗಳ ಕ್ಷಯ ಮುಕ್ತ ಅಭಿಯಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ವಾರಕ್ಕಿಂತಲೂ ಹೆಚ್ಚಿನ ಸಮಯ ಕೆಮ್ಮು, ಕೆಮ್ಮಿದಾಗ ಕಫದಲ್ಲಿ ರಕ್ತ ಕಂಡು ಬರುವುದು, ಹಸಿವು ಆಗದೆ ಇರುವುದು, ರಾತ್ರಿ ವೇಳೆ ಅತಿಯಾದ ಬೆವರು, ಜ್ವರ ಕಾಣಿಸುವುದು, ತೂಕ ಕಡಿಮೆ ಆಗುವುದು ಕ್ಷಯದ ಮುಖ್ಯ ಲಕ್ಷಣಗಳಾಗಿವೆ. ಹಿರಿಯ ನಾಗರಿಕರಿಗೆ, ದೀರ್ಘಕಾಲಿನ ಕಾಯಿಲೆಯಿಂದ ಬಳಲುತ್ತಿರುವವರು, ಮಧುಮೇಹ ಕಾಯಿಲೆ ಇರುವವರು, ಧೂಮಪಾನ ಹಾಗೂ ಮದ್ಯ ವ್ಯಸನಿಗಳು ರಕ್ತ ಹೀನತೆಯಿಂದ ಬಳಲುತ್ತಿರುವವರಲ್ಲಿ ಕ್ಷಯ ರೋಗ ಕಾಣಿಸಿಕೊಳ್ಳುವ ಸಂಭವ ಇದೆ. ನಿಯಮಿತವಾಗಿ ಸಮೀಪದ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಕಡ್ಡಾಯವಾಗಿ ಕ್ಷಯ ರೋಗದ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗಬಹುದು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಪ್ರಸಾದ್ ಮಾತನಾಡಿ, ಕ್ಷಯ ಒಂದು ಸಾಂಕ್ರಾಮಿಕ ರೋಗವಾಗಿದೆ. ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಕ್ಷಯ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದಲ್ಲಿ ತಾಲೂಕನ್ನು ಕ್ಷಯ ಮುಕ್ತವನ್ನಾಗಿ ಮಾಡಬಹುದು ಎಂದರು.ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ.ಟಿ.ಜ್ಯೋತಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕರಾದ ಎ.ಆರ್.ಹರೀಶ್, ಮೋಹನ್ ಆರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಬಿ ಹೇಮಣ್ಣ, ಶುಶ್ರೂಷಕ ಅಧಿಕಾರಿ ರವಿಪ್ರಕಾಶ್ ಎಸ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೋತಿ, ಆಶಾ ಕಾರ್ಯಕರ್ತೆ ಜಯಂತಿ, ಸಾವಿತ್ರಿ ಹಾಗೂ ವಸತಿ ಶಾಲೆಯ ಉಪನ್ಯಾಸಕರು ಉಪಸ್ಥಿತರಿದ್ದರು.