ಸಾರಾಂಶ
ಸಾಗರ : ಸಾಹಿತ್ಯ ಎಂದೂ ಸಂಗೀತದಲ್ಲಿ ಮುಳುಗಿ ಹೋಗದೆ ಅದು ಸಂಗೀತದ ಮೇಲೆ ತೇಲುವಂತಿರಬೇಕು ಎಂದು ಹಿಂದೂಸ್ತಾನಿ ಗಾಯಕ ರಾಜೇಂದ್ರ ಬಾಳೆಹಳ್ಳಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀನಗರದ ನೃತ್ಯಭಾಸ್ಕರ ಸಭಾ ಭವನದಲ್ಲಿ ಶ್ರೀ ರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷ ಮೇಳ ಗುಂಡೂಮನೆಯವರಿಂದ ಸಂಯೋಜಿಸಲ್ಪಟ್ಟ ಪಾಕ್ಷಿಕ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಕ್ಷಗಾನವಿರಲಿ ಅಥವಾ ಬೇರೆ ಯಾವುದೇ ತೆರನಾದ ಸಂಗೀತವಿರಲಿ ಸಾಹಿತ್ಯದ ಸ್ಪಷ್ಟತೆ ಅತ್ಯಂತ ಮುಖ್ಯ ಎಂದು ತಿಳಿಸಿದರು.
ಸಂಗೀತದ ಮೂಲಕ ಸಾಹಿತ್ಯ ಸಹೃದಯನಿಗೆ ತಲುಪಿದಾಗ ಮಾತ್ರ ಹಾಡುಗಾರ ಧನ್ಯತೆ ಪಡೆಯಲು ಸಾಧ್ಯ. ವಂಶವಾಹಿನಿಯಲ್ಲಿ ಸಾಹಿತ್ಯ ಪ್ರಜ್ಞೆಯೊಂದಿಗೆ ಗಾನ ನಡೆಯುತ್ತಿರುವುದು ಸಂತೋಷದ ಸಂಗತಿ. ಮಹಾ ಕಾವ್ಯವಿರಲಿ, ಪುರಾಣವಿರಲಿ ಅಲ್ಲಿ ಕೆಲವೇ ಕೆಲ ಪಾತ್ರಗಳು ಮಾತ್ರ ವಿಜೃಂಭಿಸುತ್ತದೆ. ಆದರೆ ಅದರೊಳಗಿನ ಅನೇಕ ಪಾತ್ರಗಳ ಮಹತ್ವವನ್ನು ತಿಳಿಸುವ ಇಲ್ಲಿಯ ಪ್ರಸಂಗಕರ್ತರ ನಡೆ ಕೂಡ ಒಳ್ಳೆಯ ಕೊಡುಗೆ ಎಂದು ಹೇಳಿದರು.
ಈ ವೇಳೆ ನಿವೃತ್ತ ಕೆಪಿಸಿಯ ಕೃಷ್ಣಮೂರ್ತಿ ಬಣ್ಣೂಮನೆ, ಗಂಗಾಧರ, ಮಹಿಳಾ ಕಲಾವಿದರಾದ ಸಾಧ್ವಿ, ಶಾರದ ಮತ್ತಿತರರು ಇದ್ದರು.
ನಂತರ ರಮೇಶ್ ಹೆಗಡೆ ಗುಂಡೂಮನೆ ರಚಿಸಿ ನಿರ್ದೇಶಿಸಿರುವ ವಿನಾಯಕ ಮಹಿಮೆ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಸೂರ್ಯನಾರಾಯಣ ಹೆಗಡೆ ಗುಂಡೂಮನೆ, ಸೃಜನ್ಗಣೇಶ್ ಹೆಗಡೆ ಗುಂಡೂಮನೆಯವರ ಹಾಡುಗಾರಿಕೆಗೆ ಶರತ್ ಜಾನಕೈ ಮದ್ದಲೆ ಸಾಥ್ ನೀಡಿದರು. ಈಶ್ವರನಾಗಿ ಅರುಣ ಬೆಂಕಟವಳ್ಳಿ, ಮೈದುಲಾಸುರನಾಗಿ ರವಿಶಂಕರ್ ಭಟ್, ಗಿರಿಜೆಯಾಗಿ ಅಶೋಕಕುಮಾರ್ ಹೆಗಡೆ, ಗಣಪತಿ ಪಾತ್ರದಲ್ಲಿ ರಮೇಶ್ ಹೆಗಡೆ ಗುಂಡೂಮನೆ ಮತ್ತು ಷಣ್ಮುಖನಾಗಿ ಪ್ರತೀಕ ಬೆಂಕಟವಳ್ಳಿ ನಿರ್ವಹಿಸಿದರು.