ಹುಸಿ, ಪೊಳ್ಳು ಭರವಸೆಯ ಬಾಗಿನ ಸಮರ್ಪಣೆ ಬೇಡ

| Published : Jan 23 2025, 12:48 AM IST

ಹುಸಿ, ಪೊಳ್ಳು ಭರವಸೆಯ ಬಾಗಿನ ಸಮರ್ಪಣೆ ಬೇಡ
Share this Article
  • FB
  • TW
  • Linkdin
  • Email

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಮುಖಂಡ ಜೆ.ಯಾದವರೆಡ್ಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬರುತ್ತಿರುವ ಸಿಎಂ ಸಿದ್ದರಾಮಯ್ಯ ಮೊರದಲ್ಲಿ ಹೆಚ್ಚು ಅನುದಾನ ಪೂರೈಕೆ ಹಾಗೂ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ನಿಜದನಿಯ ಇಚ್ಚಾಶಕ್ತಿಯನ್ನಿಟ್ಟು ಜಲಾರ್ಪಣೆ ಮಾಡಲಿ. ನಮ್ಮನ್ನು ಪೊರೆವ ತಾಯಿ ತುಂಗೆ, ಭದ್ರೆ, ವೇದಾವತಿ ಮಡಿಲಲ್ಲಿ ನಿಂತು ಪೊಳ್ಳುತನ, ಹುಸಿ ಭರವಸೆ ಬಾಗಿನ ಬಿಡುವ ಪ್ರದರ್ಶನ ಮಾಡಬಾರದೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸಿದೆ.

ಇಲ್ಲಿನ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡ ಜೆ.ಯಾದವರೆಡ್ಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿಸ್ಸೀಮ ನಿರ್ಲಕ್ಷ್ಯದಿಂದಾಗಿ ಭದ್ರಾ ಮೇಲ್ದಂಡೆ ಕಾಮಗಾರಿ ಆಮೆ ವೇಗ ಪಡೆದಿದೆ. ತುಮಕೂರು ಬ್ರಾಂಚ್ ಕಾಲುವೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದ್ದು ಮೆಷನರಿ ಸಮೇತ ಗುತ್ತಿಗೆದಾರರು ಕಾಲ್ಕಿತ್ತಿದ್ದಾರೆ. 2300 ಕೋಟಿಯಷ್ಟು ಬೃಹತ್ ಮೊತ್ತದ ಕಾಮಗಾರಿ ಬಿಲ್ ಬಾಕಿ ಇದೆ. ಅನುದಾನ ಅಲಭ್ಯತೆ ಕಾರಣಕ್ಕೆ ಯೋಜನೆಯ ಎಂಜಿನಿಯರ್‌ಗಳು ನಿತ್ಯ ಕಚೇರಿಗೆ ಬಂದು ಕೈ ಕಟ್ಟಿ ಕುಳಿತು ಮನೆಗಳಿಗೆ ವಾಪಾಸ್ಸಾಗುತ್ತಿದ್ದಾರೆ. ಒಂದರ್ಥದಲ್ಲಿ ಕಚೇರಿ ಕಾಯುವ ವಾಚ್ ಮನ್ ಕೆಲಸ ಅವರದ್ದಾಗಿದೆ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯ ಅವರು ವಿವಿ ಸಾಗರ ಜಲಾಶಯ 3ನೇ ಬಾರಿಗೆ ಭರ್ತಿಯಾದ ಹಿನ್ನಲೆಯಲ್ಲಿ ಬಾಗಿನ ಬಿಡಲು ಶುಕ್ರವಾರ ಹಿರಿಯೂರಿಗೆ ಆಗಮಿಸುತ್ತಿದ್ದಾರೆ. ರಾಜ್ಯದ ಬಹುತೇಕ ಜಲಾಶಯಗಳು ಮಳೆಗಾಲದಲ್ಲಿ ತುಂಬಿದರೆ , ವಿವಿ ಸಾಗರ ಮಳೆ ಬಾರದ ವೇಳೆಯಲ್ಲಿ ತುಂಬಿರುವುದರ ಹಿಂದೆ ಭದ್ರಾ ಜಲಾಶಯದ ನೀರನ್ನು ಲಿಫ್ಟ್ ಮಾಡಿರುವುದೇ ಮುಖ್ಯ ಕಾರಣ. ರಾಜ್ಯ ಸರ್ಕಾರ ಸಕಾಲದಲ್ಲಿ ಹಣ ಒದಗಿಸಿದ್ದರೆ ಇಷ್ಟೊತ್ತಿಗೆ ವಿವಿ ಸಾಗರದ ಜೊತೆಗೆ ಜಿಲ್ಲೆಯ ನೂರಾರು ಕೆರೆಗಳು ಭರ್ತಿಯಾಗುವ ಭಾಗ್ಯ ಪಡೆದುಕೊಳ್ಳುತ್ತಿದ್ದವು.

ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಮೂರು ಪರಿಶಿಷ್ಟ ಪಂಗಡದ, ಎರಡು ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಸಾಲದೆಂಬಂತೆ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಕೂಡಾ ಪರಿಶಿಷ್ಟ ಜಾತಿಗೆ ಮೀಸಲು ಆಗಿದೆ. ಶೋಷಿತ ಸಮುದಾಯ ಹಾಗೂ ಅಹಿಂದ ವರ್ಗ ಪ್ರತಿನಿಧಿಸುವುದಾಗಿ ಹೇಳುವ ಸಿಎಂ ಸಿದ್ದರಾಮಯ್ಯ ಶೋಷಿತರೇ ಹೆಚ್ಚು ಒಳಗೊಂಡಿರುವ ಮಧ್ಯ ಕರ್ನಾಟಕ ಪ್ರದೇಶದ ನೀರಾವರಿ ಯೋಜನೆ ನಿರ್ಲಕ್ಷ್ಯ ಮಾಡಿರುವುದು ನೋವು ತಂದಿದೆ. ಸಿದ್ದರಾಮಯ್ಯ ಅವರ ಬದ್ಧತೆ ಪ್ರಶ್ನಿಸುವಂತಾಗಿದೆ.

ಕೇಂದ್ರ ಸರ್ಕಾರ ಘೋಷಿತ 5300 ಕೋಟಿ ರು. ಅನುದಾನ ನೀಡಿಲ್ಲವೆಂಬ ಸಂಗತಿಯ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆಗೆ ಅನುದಾನ ವ್ಯಯ ಮಾಡಲು ಮುಂದಾಗುತ್ತಿಲ್ಲ. ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳಿಕೊಂಡು ಯೋಜನೆ ಸೊರಗಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಈ ಜನ ದ್ರೋಹದ ನಡೆಯನ್ನು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಖಂಡಿಸುತ್ತದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಶಾಸಕರ ಬಹುದೊಡ್ಡ ದಂಡೇ ಇದೆ. ಎಲ್ಲರೂ ಕಾಮಗಾರಿ ವಿಷಯದಲ್ಲಿ ಇಚ್ಚಾಶಕ್ತಿ ತೋರದೆ ಅಸಹಾಯಕರಾಗಿ ಪಲಾಯನವಾದ ಅನುಸರಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ಬದ್ಧತೆ ಪ್ರದರ್ಶಿಸಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಭದ್ರಾ ನೀರನ್ನು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯ ಭರ್ತಿ ಮಾಡುವ ಹಾಗೂ ಮುಖ್ಯಮಂತ್ರಿಗಳ ಕರೆಯಿಸಿ ಬಾಗಿನ ಬಿಡುವ ಸಂಭ್ರಮದಲ್ಲಿ ಮುಳುಗಿರುವುದು ಪ್ರಜಾಪ್ರಭುತ್ವದ ದೊಡ್ಡ ಅಣಕವಾಗಿದೆ.

ಗ್ಯಾರಂಟಿ ಯೋಜನೆಗಳ ಮೂಲಕ ಅಹಿಂದ ವರ್ಗಗಳಲ್ಲಿ ಅಶಾಕಿರಣವಾಗಿರುವ ಸಿಎಂ ಸಿದ್ದರಾಮಯ್ಯ 7ನೇ ಗ್ಯಾರಂಟಿಯಾಗಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸುವ ಶಪಥ ಮಾಡಲಿ. 22 ಸಾವಿರ ಕೋಟಿ ರು. ವೆಚ್ಚದ ಭದ್ರಾ ಮೇಲ್ದಂಡೆಗೆ ರಾಜ್ಯ ಸರ್ಕಾರ ಇದುವರೆಗೂ 10300 ಕೋಟಿ ರು. ವ್ಯಯ ಮಾಡಿದೆ. ಇನ್ನೂ 12 ಸಾವಿರ ಕೋಟಿ ರುಪಾಯಿಯಷ್ಟು ಅನುದಾನ ಕಾಮಗಾರಿ ಪೂರ್ಣಗೊಳಿಸಲು ಬೇಕಾಗಿದ್ದು ಮಂಬರುವ ಬಜೆಟ್ ನಲ್ಲಿ ಅನುದಾನ ಕಾಯ್ದಿರಿಸಲಿ ಎಂದು ಯಾದವರೆಡ್ಡಿ ಆಗ್ರಹಿಸಿದರು.

ಈ ವೇಳೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಿಪಿಐನ ಸುರೇಶ್ ಬಾಬು, ರೈತ ಸಂಘದ ಮುಖಂಡರಾದ ಬಸ್ತಿಹಳ್ಳಿ ಸುರೇಶ್ ಬಾಬು, ಹಂಪಯ್ಯನಮಾಳಿಗೆ ಧನಂಜಯ, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.