ಸಾರಾಂಶ
- ಸಾಹಿತಿ ಶಿವಪ್ರಸಾದ ಕರ್ಜಗಿ ರಚಿತ "ಪ್ರಸಾದ ವಾಣಿ " ಕೃತಿ ಬಿಡುಗಡೆ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ದುರ್ಬುದ್ಧಿಯಿಂದ ದುಷ್ಕೃತ್ಯಗಳಾಗುತ್ತವೆ ಎಂಬುದಕ್ಕೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆಗಳೇ ಸಾಕ್ಷಿಯಾಗಿವೆ. ಈ ಹಿನ್ನೆಲೆ ಪ್ರತಿಯೊಬ್ಬರೂ ಸದ್ಭುದ್ಧಿಯಿಂದ ಜೀವನ ನಡೆಸಬೇಕು. ದುರ್ಬುದ್ಧಿಗೆ ಎಂದಿಗೂ ಮನಸ್ಸು ಕೊಡಬಾರದು ಎಂದು ಚಿತ್ರದುರ್ಗ ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.ನಗರದ ದೇವರಾಜ ಅರಸು ಬಡಾವಣೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ಸಿಹಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಸಾಹಿತಿ ಶಿವಪ್ರಸಾದ ಕರ್ಜಗಿ ರಚಿತ "ಪ್ರಸಾದ ವಾಣಿ " ಕೃತಿ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬುದ್ಧ, ಬಸವಣ್ಣ, ಅಕ್ಕ ಮಹಾದೇವಿಯಂತಹ ಮಹನೀಯರಂತೆ ಪ್ರತಿಯೊಬ್ಬರೂ ಸಾತ್ವಿಕತೆಯಿಂದ ಸಾಧನೆ ಮಾಡಬೇಕು. ದೈಹಿಕ ಸ್ವಚ್ಛತೆ ಜೊತೆ ಮನಸ್ಸು ಮತ್ತು ಬುದ್ಧಿಯನ್ನೂ ಶುದ್ಧವಾಗಿಟ್ಟುಕೊಳ್ಳಬೇಕು. ಸಾತ್ವಿಕತೆ ಶುದ್ಧಿಯಿಂದ ವಿಶ್ವ ಮಾನವರಾಗುತ್ತಾರೆ. ಸಾತ್ವಿಕತೆ, ಚಿಂತನೆಗಳ ಮೂಲಕ ಆಧ್ಯಾತ್ಮಿಕತೆಗೆ ಬರುವಂತಾಗಬೇಕು. ಆಧ್ಯಾತ್ಮಿಗಳೆಂದ ಮಾತ್ರಕ್ಕೆ ಸಂಸಾರವನ್ನೇ ತ್ಯಜಿಸುವಂತಹದ್ದಲ್ಲ. ತನ್ನನ್ನು ತಾನು ತಿಳಿದುಕೊಳ್ಳುವ ಪರಮಜ್ಞಾನವೇ ಅಧ್ಯಾತ್ಮ ಎಂದರು.ದೂರದರ್ಶನದ "ಥಟ್ ಅಂತ ಹೇಳಿ " ಕಾರ್ಯಕ್ರಮ ಖ್ಯಾತಿಯ ಕ್ವಿಝ್ ಮಾಸ್ಟರ್ ಡಾ. ನಾ.ಸೋಮೇಶ್ವರ ಮಾತನಾಡಿ, ಕಣ್ಣು, ಕಿವಿ, ನಾಲಿಗೆ ಮತ್ತಿತರೆ ಇಂದ್ರಿಯಗಳು ಶಕ್ತಿಶಾಲಿಯಾದಂಥವು. ಅವುಗಳನ್ನು ಲಘುವಾಗಿ ಪರಿಗಣಿಸದೇ, ನಮ್ಮ ಅಧೀನದಲ್ಲಿ ಇಟ್ಟುಕೊಳ್ಳಬೇಕು. ನಾವು ಹೇಳಿದಂತೆ ಅವುಗಳು ಕೇಳುವಂತೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಸ್ವಚ್ಛತೆಯೆಂದರೆ ಮೂರು ಆಯಾಮದಲ್ಲಿ ನಾವು ಅದನ್ನು ನೋಡಬೇಕು. ಭಗವಂತ ವಾಸಿಸುವ ದೇಹವು ಸದಾ ಸ್ವಚ್ಛವಾಗಿರಬೇಕು. ದೈಹಿಕ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಸಹಜವಾಗಿಯೇ ಮಾನಸಿಕ ಸ್ವಚ್ಛತೆ ತನ್ನಿಂದ ತಾನೇ ಆಗುತ್ತದೆ. ಮನೆ ಮನೆಗಳಲ್ಲೂ ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಸದ್ಗುಣಗಳನ್ನು ಕಲಿಸುವ ಮೂಲಕ ಬದಕನ್ನು ಉತ್ಕೃಷ್ಟವಾಗಿ ರೂಪಿಸುವ ಕೆಲಸ ಮಾಡಬೇಕಿದೆ. ಆಹಾರ ಸೇವನೆ ಅನ್ನಪೂರ್ಣೇಯ ಆರಾಧನೆಯಾಗಿದೆ. ಹಾಗಾಗಿ, ಆಹಾರವನ್ನು ಪೋಲು ಮಾಡದಂತೆ ಮಕ್ಕಳಿಗೆ ತಿಳಿಹೇಳಬೇಕು. ಸ್ವಚ್ಛತೆಯನ್ನು ಪರಿಪಾಲಿಸುವ ಅದ್ಭುತ ಅಭಿಯಾನವನ್ನು ಪ್ರಜಾಪಿತ ಈಶ್ವರೀಯ ವಿಶ್ವ ವಿದ್ಯಾಲಯ ಪ್ರಾರಂಭಿಸಿದೆ. ಅಭಿಯಾನವು ಯಶಸ್ವಿಯಾಗಿ ಸಾಗಲಿ ಎಂದು ಡಾ.ಸೋಮೇಶ್ವರ ಹಾರೈಸಿದರು.ಈಶ್ವರೀಯ ವಿಶ್ವವಿದ್ಯಾಲಯದ ಶಿವಮೊಗ್ಗ ಶಾಖೆ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಅನುಸೂಯಾಜೀ ಅಧ್ಯಕ್ಷತೆ ವಹಿಸಿದ್ದರು. ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ, ಚನ್ನಗಿರಿ ಕೇದಾರ ಶಾಖಾ ಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀಸ್ವಾಮಿ ನಾರಾಯಣಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಚರಂತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಸಾಹಿತಿ ಶಿವಯೋಗಿ ಹಿರೇಮಠ, ಲೇಖಕ ಶಿವಪ್ರಸಾದ ಕರ್ಜಗಿ, ಪರಮೇಶ್ವರಪ್ಪ ಕರ್ಜಗಿ, ಶಕುಂತಲಮ್ಮ ಇತರರು ಇದ್ದರು. ನಿವೃತ್ತ ಉಪನ್ಯಾಸಕ ಕೆ.ಮಂಜುನಾಥ ಕೃತಿ ಕುರಿತು ಮಾತನಾಡಿದರು.- - -
ಕೋಟ್ ಸಾಹಿತ್ಯ ಲೋಕದಲ್ಲಿ ಯುವ ಲೇಖಕರನ್ನು ಬೆಳೆಸುವ ಕೆಲಸ ಆಗಬೇಕು. ಬಾಯಿ ಮಾತಿನಿಂದಲ್ಲ, ಅವು ಕೃತಿಗಳನ್ನು ಖರೀದಿಸಿ, ಓದುವ ಮೂಲಕ ಪ್ರೋತ್ಸಾಹಿಸುವಂತಾಗಬೇಕು. ಸಭೆ, ಸಮಾರಂಭಗಳಲ್ಲಿ ಉತ್ತಮ ಕೃತಿಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ರೂಢಿಸಿಕೊಳ್ಳಬೇಕು. ಪುಸ್ತಕದ ಸಂಗಮವು ಬದುಕಿನ ಸಾರ್ಥಕತೆಗೆ ಕಾರಣಾಗುತ್ತದೆ- ಶ್ರೀ ಬಸವಪ್ರಭು ಸ್ವಾಮೀಜಿ, ಮುರುಘಾ ಮಠ, ಚಿತ್ರದುರ್ಗ
- - --19ಕೆಡಿವಿಜಿ10, 11: ದಾವಣಗೆರೆಯ ಶಿವಧ್ಯಾನ ಮಂದಿರದಲ್ಲಿ ಸಾಹಿತಿ ಶಿವಪ್ರಸಾದ ಕರ್ಜಗಿ ರಚಿತ "ಪ್ರಸಾದ ವಾಣಿ " ಕೃತಿಯನ್ನು ಬಿಡುಗಡೆಗೊಳಿಸಲಾಯಿತು.