ಸಾರಾಂಶ
ಗ್ರಾಮೀಣರ ಸಮಸ್ಯೆಗಳಿಗೆ ಪರಿಹಾರ ಹಾಗೂ ಗ್ರಾಮಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದು ಗ್ರಾಪಂ ಆಡಳಿತ ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಗ್ರಾಮೀಣರ ಸಮಸ್ಯೆಗಳಿಗೆ ಪರಿಹಾರ ಹಾಗೂ ಗ್ರಾಮಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದು ಗ್ರಾಪಂ ಆಡಳಿತ ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದರು.ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ನಗರನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಗ್ರಾಮಸ್ಥರ ಸಮಸ್ಯೆ ಆಲಿಸಿ, ಮಾತನಾಡಿ, ಇ-ಸ್ವತ್ತು ಮಾಡಿಕೊಡಲು ಕಚೇರಿಗೆ ಅಲೆದಾಡಿಸಲಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಯಾವುದೇ ಕಾರಣಕ್ಕೂ ಅಲೆದಾಡಿಸುವ ಕೆಲಸ ಮಾಡಬಾರದು. ಅವರು ಅರ್ಜಿ ಸಲ್ಲಿಸಿ ನೀವು ನಿಗದಿಪಡಿಸಿದ ದಿನಗಳೊಳಗೆ ಅರ್ಜಿ ವಿಲೇವಾರಿ ಮಾಡಿ, ಇ-ಸ್ವತ್ತು ಸೇವೆ ಮಾಡಿಕೊಡಬೇಕೆಂದು ತಾಕೀತು ಮಾಡಿದರು.
ಉದ್ಯೋಗ ಖಾತ್ರಿಯಡಿ ಕೈಗೊಂಡ ಯಾವುದೇ ಕಾಮಗಾರಿಗಳು ವಿಳಂಬ ಮಾಡಬಾರದು. ಕೈಗತ್ತಿಕೊಂಡ ಕಾಮಗಾರಿ ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು. ರೈತರನ್ನು ಅಲೆದಾಡಿಸುವುದು ನನ್ನ ಗಮನಕ್ಕೆ ಬಂದರೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಸೂಚಿಸುವುದಾಗಿ ಎಚ್ಚರಿಕೆ ನೀಡಿದರು.ಗ್ರಾಮಗಳಲ್ಲಿ ಸ್ವಚ್ಛತೆ ಇಲ್ಲದ ಪರಿಣಾಮ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿರುವ ಚರಂಡಿ ಸ್ವಚ್ಛತೆಗೊಳಿಸಬೇಕು. ಸಂಜೆ ವೇಳೆ ಸೊಳ್ಳೆಗಳ ನಿರ್ಮೂಲನೆಗೆ ಫಾಂಗಿಂಗ್ ಮಾಡಬೇಕು. ಜೊತೆಗೆ ಗ್ರಾಮಗಳ ಸ್ವಚ್ಛತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪಿಡಿಒಗೆ ಸೂಚನೆ ನೀಡಿದರು.
ಗ್ರಾಪಂ ಪಿಡಿಒ ಹೇಮಂತ್ ರಾಜ್, ಗುಮ್ಮನೂರು ಶಂಭಣ್ಣ, ಮೈಲಪ್ಪ, ರುದ್ರೇಶ್, ಜಯಪ್ಪ, ಅಣ್ಣೇಶ್, ಮಾರುತಿ, ದೇವೇಂದ್ರಪ್ಪ, ನಸ್ರುಲ್ಲಾ, ಶಿವಣ್ಞ, ಕರಿಬಸಪ್ಪ, ಬಸಣ್ಣ ಹಾಗೂ ಸಿಬ್ಬಂದಿ ಹಾಜರಿದ್ದರು.