ಯಾವುದೆ ಕಾಯಿಲೆಯನ್ನೂ ನಿರ್ಲಕ್ಷಿಸಬೇಡಿ: ಬಾಲಕೃಷ್ಣ

| Published : Apr 13 2025, 02:03 AM IST

ಸಾರಾಂಶ

ಯಾವುದೇ ಕಾರಣಕ್ಕೂ ಸಣ್ಣ ಕಾಯಿಲೆಗಳನ್ನು ಕೂಡ ನಿರ್ಲಕ್ಷಿಸಬಾರದು, ಬಿಪಿ, ಶುಗರ್ ಯಾವತ್ತೂ ವಾಸಿಯಾಗುವುದಿಲ್ಲ, ವೈದ್ಯರ ಸಲಹೆಯಂತೆ ಪ್ರತಿದಿನವೂ ತಪ್ಪದೆ ಮಾತ್ರೆ ತೆಗೆದುಕೊಳ್ಳಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ಯಾವುದೇ ಕಾರಣಕ್ಕೂ ಸಣ್ಣ ಕಾಯಿಲೆಗಳನ್ನು ಕೂಡ ನಿರ್ಲಕ್ಷಿಸಬಾರದು, ಬಿಪಿ, ಶುಗರ್ ಯಾವತ್ತೂ ವಾಸಿಯಾಗುವುದಿಲ್ಲ, ವೈದ್ಯರ ಸಲಹೆಯಂತೆ ಪ್ರತಿದಿನವೂ ತಪ್ಪದೆ ಮಾತ್ರೆ ತೆಗೆದುಕೊಳ್ಳಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದರು.

ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ಎಂ.ಆರ್.ರಾಮಯ್ಯ ಆಸ್ಪತ್ರೆ, ಮಹಾನಾಡು ಕಟ್ಟೆ ಮನೆ ಮತ್ತು ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉಚಿತ ಆರೋಗ್ಯ ಶಿಬಿರಗಳು ಗ್ರಾಮೀಣರಿಗೆ ವರದಾನ. ತಪಾಸಣೆ ಬಳಿಕ ವೈದ್ಯರು ಹೇಳಿದಂತೆ ಸಮಯಕ್ಕೆ ಮಾತ್ರೆ ಸೇವಿಸಬೇಕು. ಬಿಪಿ ಮಾತ್ರೆ ನಿಲ್ಲಿಸಿದರೆ ಮೆದುಳಿಗೆ ಸ್ಟ್ರೋಕ್ ಆಗಿ ಸಾಯುವ ಹಂತ ತಲುಪುವ ಸಾಧ್ಯತೆ ಇದೆ. ಅದಕ್ಕೆ ಸಣ್ಣ ಕಾಯಿಲೆಯನ್ನೂ ನಿರ್ಲಕ್ಷಿಸಬಾರದು ಎಂದು ಬಾಲಕೃಷ್ಣ ಸಲಹೆ ನೀಡಿದರು.

ನಿರಂತರವಾಗಿ ತಪಾಸಣಾ ಶಿಬಿರ: ತಾಲೂಕಾದ್ಯಂತ ನಿರಂತರ ಆರೋಗ್ಯ ಶಿಬಿರಗಳು ನಡೆಯಲಿದ್ದು, ಇದಕ್ಕೆ ಸ್ಥಳೀಯರ ಸಹಕಾರ ಮುಖ್ಯ. ಎಂ.ಎಸ್.ರಾಮಯ್ಯ ಆಸ್ಪತ್ರೆ ಸಹಕಾರದಲ್ಲಿ ಅತ್ಯಾಧುನಿಕ ಯಂತ್ರಗಳಿಂದ ಕಣ್ಣಿನ ತಪಾಸಣೆ, ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ, ಮಂಡಿ ನೋವು ತಪಾಸಣೆ ಮಾಡಿಸಿ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದವರಿಗೆ ಉಚಿತ ಚಿಕಿತ್ಸೆ ಮಾಡಲಾಗುವುದು. ಮಂಡಿ ಚಿಪ್ಪು ಬದಲಾವಣೆ ಕಾಲು ನೋವಿನಿಂದ ಚೇತರಿಸಿಕೊಳ್ಳಬಹುದು. ಕ್ಯಾನ್ಸರ್ ಮೊದಲ ಹಂತದಲ್ಲಿದ್ದರೆ ಶಮನ ಮಾಡಬಹುದು ಬಾಲಕೃಷ್ಣ ಸಲಹೆ ನೀಡಿದರು.

ರಾಜ್ಯ ಸಹಕಾರ ಪತ್ತಿನ ಮಹಾಮಂಡಳಿ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರು ಒತ್ತಡದ ಜೀವನದಲ್ಲಿ ಆರೋಗ್ಯ ಕಾಳಜಿ ವಹಿಸುವುದಿಲ್ಲ. ಜ್ವರ, ಕಾಲು ನೋವು ಬಂದರೆ ಸ್ಥಳೀಯ ಔಷಧಿ ಅಂಗಡಿಯಲ್ಲಿ ಮಾತ್ರೆ ತೆಗೆದುಕೊಳ್ಳುತ್ತಾರೆ. ಸ್ತನ ಕ್ಯಾನ್ಸರ್, ಕಣ್ಣಿನ ತಪಾಸಣೆ, ಮಂಡಿ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು. ಮುಂದಿನ ವಾರ ನೇತೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ನಡೆಯಲಿದೆ ಎಂದು ವಿವರಿಸಿದ್ದರು.

ಮತ್ತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ಎಂ.ಎಸ್.ರಾಜು ನೇತೃತ್ವದಲ್ಲಿ ಆರೋಗ್ಯ ಶಿಬಿರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರಿಗೆ ಉಚಿತ ಸೀರೆ ವಿತರಿಸಿ ಗೌರವಿಸಲಾಯಿತು.