8ಕೆಎಂಎನ್ ಡಿ29ಹಲಗೂರಿನಲ್ಲಿ ನಡೆದ ವಿಶ್ವಕರ್ಮ ಸಮಾಜದ ಮಕ್ಕಳಿಗೆ ಪಠ್ಯ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha
Image Credit: KP
ವಿಶ್ವಕರ್ಮ ಸಮಾಜಕ್ಕೆ ಅವಮಾನ ಮಾಡಬೇಡಿ: ಸ್ವಾಮೀಜಿ
ವಿಶ್ವಕರ್ಮ ಸಮಾವೇಶದ ಖರ್ಚಿನ ಹಣದಿಂದ ಜಿಲ್ಲೆಗೆ ಒಂದು ಎಂಜಿನಿಯರಿಂಗ್ ಕಾಲೇಜು - ಸೂರ್ಯನಾರಾಯಣ ಸ್ವಾಮೀಜಿ ಕನ್ನಡಪ್ರಭ ವಾರ್ತೆ ಹಲಗೂರು ಸಮುದಾಯ ಆಚರಿಸಿರುವ ವಿಶ್ವಕರ್ಮ ಸಮಾವೇಶಗಳಿಗೆ 178 ಕೋಟಿ ರು. ಖರ್ಚು ಮಾಡಿ ಸಮಾಜ ಗಟ್ಟಿ ಮಾಡಿದ್ದೇವೆ. ಈ ಹಣವನ್ನು ಹಾಗೆ ಇಟ್ಟಿದ್ದರೆ ಜಿಲ್ಲೆಗೊಂದು ಸಮುದಾಯದ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಬಹುದಿತ್ತು ಎಂದು ಆನೆಗುಂದಿ ಮಹಾಸಂಸ್ಥಾನ ವಿಶ್ವಕರ್ಮದ ಮಠದ ಸೂರ್ಯನಾರಾಯಣ ಸ್ವಾಮೀಜಿ ಹೇಳಿದರು. ಕೆಪಿಎಸ್ ಶಾಲಾ ಆವರಣದ ಶಿಕ್ಷಕರ ಸಮುದಾಯ ಭವನದಲ್ಲಿ ತಾಲೂಕಿನ ವಿಶ್ವಕರ್ಮ ಸಮಾಜದ ಮಕ್ಕಳಿಗೆ ಪಠ್ಯ ಪರಿಕರಗಳ ವಿತರಣೆ ಹಾಗೂ ಸಮಾಜದ ಚಿಂತನ ಮಂಥನ ಸಭೆ ಮತ್ತು ಪಿಎಂ ವಿಶ್ವಕರ್ಮ ಸಮ್ಮಾನ್ ಯೋಜನೆ ಕುರಿತು ತಾಲೂಕು ಮಟ್ಟದ ಶಿಬಿರದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ವಿಶ್ವಕರ್ಮ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಬೆವರಿನಿಂದ ನೀವು ಅಧಿಕಾರ ಪಡೆದಿದ್ದೀರಿ. ಆ ಸಮಾಜಕ್ಕೆ ಅವಮಾನ ಮಾಡಬೇಡಿ. ಸಮಾಜದ ಮಠ ಮಾನ್ಯಗಳಿಗೆ ಅನ್ಯಾಯ ಮಾಡಬೇಡಿ. ಅನ್ಯಾಯ ಮಾಡಿದರೆ ಮುಂದೊಂದು ದಿನ ಅದರ ಫಲ ಅನುಭವಿಸಬೇಕಾಗುತ್ತದೆ. ಈ ಸತ್ಯವನ್ನು ತಿಳಿದರೆ ನಿಮ್ಮ ಬಾಳು ಹಸನಾಗುತ್ತದೆ ಎಂದರು. ಸದೃಢ ಸಮಾಜ ನಿರ್ಮಾಣವಾಗಬೇಕು. ರಾಜ್ಯದೆಲ್ಲೆಡೆ ನೂರಾರು ವಿಶ್ವಕರ್ಮ ಹೋರಾಟ ಮತ್ತು ಸಮಾವೇಶ ಮಾಡಿದ್ದೇವೆ. ಸಮಾಜದಿಂದ ಎಲ್ಲವನ್ನೂ ಪಡೆದು ಸಮಾಜಕ್ಕೆ ಅನ್ಯಾಯ, ಮೋಸ , ವಂಚನೆ ಮಾಡಬಾರದು. ಸಮಾಜ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಶೀರ್ವಚನ ನೀಡಿದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಜಾತಿ ಧರ್ಮಗಳ ಸಂಘರ್ಷಕ್ಕೆ ಒತ್ತುಕೊಟ್ಟು ರಾಜಕೀಯ ಲಾಭ ಪಡೆಯುವುದು ಒಳ್ಳೆಯದಲ್ಲ. ಈ ದೇಶದಲ್ಲಿ ಎಲ್ಲಾ ಭಾಷೆಯ ಎಲ್ಲಾ ವರ್ಗದ ಎಲ್ಲ ರಾಜ್ಯದ ಜನರು ಕಾಯಕ ಸಮಾಜಕ್ಕೆ ಒಳಪಟ್ಟಿದ್ದೇವೆ. ಕೆಲವರು ಕಾಯಕದ ಆಧಾರದ ಮೇಲೆ ಅಭಿವೃದ್ಧಿ ಹೊಂದಿದ್ದರೆ ಕೆಲವರು ಗುಲಾಮಗಿರಿಯಲ್ಲಿದ್ದಾರೆ ಎಂದರು. ದೇಶದಲ್ಲಿ ಎಲ್ಲ ಜನರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮಬಾಳು ಹೊಂದಬೇಕು. ಎಲ್ಲರಿಗೂ ಹಕ್ಕುಗಳಿವೆ. ಅವುಗಳನ್ನು ಪಡೆಯಬೇಕು. ಸಮಾಜದಲ್ಲಿ ಅಸಮಾನತೆ ಇರಬಾರದು ಎಂದರು. ಮಳವಳ್ಳಿಯ ಶ್ರೀನಿವಾಸ್ ಮಾತನಾಡಿ, 23 ವರ್ಷಗಳಿಂದ ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಮಕ್ಕಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕವಾಗಿ ಮುಂದುವರೆದರೆ ಮಾತ್ರ ನಮ್ಮ ಸಮಾಜದ ಉನ್ನತಿ ಸಾಧ್ಯ ಎಂದರು. ಶಿಕ್ಷಣದಲ್ಲಿ ಹಿಂದುಳಿದ ಸಮಾಜದ ಮಕ್ಕಳಿಗೆ ನೆರವಾಗಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಶಿಕ್ಷಣಕ್ಕೆ ಒತ್ತು ನೀಡಿ ಅಳಿಲು ಸೇವೆ ಎಂಬಂತೆ ಈ ದಿನ ಸುಮಾರು ಮುನ್ನೂರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ, ಕುಂಭಮೇಳ ಹೊತ್ತು ಬಂದ 55 ಗೃಹಿಣಿಯರಿಗೆ ಸೀರೆಗಳನ್ನು ನೀಡಿದ್ದೇವೆ ಎಂದರು. ತಾಲೂಕು ಕೇಂದ್ರದಲ್ಲಿ ವಿಶ್ವಕರ್ಮ ಭವನಕ್ಕೆ ನಿವೇಶನ ಮತ್ತು ಭವನ ನಿರ್ಮಾಣ ಮಾಡಲು ಶಾಸಕರು ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಡಾ.ಪವಿತ್ರ ಆಚಾರ್ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಸಮಾಜದ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಣಬೇಕು ಎಂದರು. ವೇದಿಕೆಯಲ್ಲಿ ವಸಂತ ಮುರುಳಿ ವಿಶ್ವಕರ್ಮ, ಟಿ.ಕೆ.ಪುರುಷೋತ್ತಮ, ಆನಂದ್, ದೇವರಾಜಚಾರ್, ಯೋಗೇಶ್, ಎಚ್ .ಎಸ್. ಶ್ರೀ ನಿವಾಸ ಚಾರಿ, ಚಾಮಚಾರ್, ಮಹೇಶ್, ಪ್ರಕಾಶ್, ಕುಮಾರ್, ಎಲ್.ಪಿ.ರಮೇಶ್, ಎಸ್.ಎಸ್.ಸೋಮಶೇಖರ್, ಭಾಮ ಸೋಮಣ್ಣಚಾರ್, ಶಿವಮೂರ್ತಿ, ಗುರುಸ್ವಾಮಿ, ಜಾಕಿರ್ ಹುಸೇನ್ ಹಾಗೂ ಇತರರು ಇದ್ದರು. 8ಕೆಎಂಎನ್ ಡಿ29 ಹಲಗೂರಿನಲ್ಲಿ ನಡೆದ ವಿಶ್ವಕರ್ಮ ಸಮಾಜದ ಮಕ್ಕಳಿಗೆ ಪಠ್ಯ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.