ಹಾಡಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ಅಡ್ಡಿಪಡಿಸದಿರಿ:ಪೊನ್ನಣ್ಣ ಸೂಚನೆ

| Published : Dec 27 2024, 12:46 AM IST

ಸಾರಾಂಶ

ಈಗಾಗಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆದಿದೆ. ಆದಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ತೊಂದರೆ ನೀಡಬಾರದು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕಿನ ತಟ್ಟಳ್ಳಿ, ದಿಡ್ಡಳ್ಳಿ, ಕೊಲ್ಲಿಹಾಡಿ, ಬೊಮ್ಮಾಡು, ನಾಗರಹೊಳೆ, ಬಾಳೆಕೋವು, ಗೋಣಿಗದ್ದೆ, ಬೊಂಬುಕಾಡು, ಜಂಗಲ್ ಹಾಡಿ, ಚೀನಿಹಡ್ಲಿ, ಐಯಿರಸುಳಿ ಈ ಹಾಡಿಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಇರುವ ರಸ್ತೆ ಅಭಿವೃದ್ಧಿ ಪಡಿಸುವುದು ಮತ್ತಿತರ ಮೂಲಸೌಲಭ್ಯಕ್ಕೆ ಯಾವುದೇ ಅಡ್ಡಿ ಮಾಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಎ.ಎಸ್.ಪೊನ್ನಣ್ಣ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪೊನ್ನಂಪೇಟೆಯ ಸಾಮರ್ಥ್ಯ ಸೌಧದಲ್ಲಿ ಗುರುವಾರ ನಡೆದ ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಆದಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ತೊಂದರೆ ನೀಡಬಾರದು ಎಂದು ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದ್ದಾರೆ. ತೊಂದರೆ ನೀಡುವುದು ಅಥವಾ ಸತಾಯಿಸುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ಎಚ್ಚರಿಸಿದರು.

ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ 20 ಕಡೆಗಳಲ್ಲಿ ಸಮುದಾಯ ಹಕ್ಕು ನೀಡಲು ಬಾಕಿ ಇದ್ದು, ಯಾವುದೇ ಕಾರಣಕ್ಕೂ ವಿಳಂಬಮಾಡಬಾರದು ಎಂದು ಸೂಚಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿ ವೈಯಕ್ತಿಕ ಹಕ್ಕುಗಳು ಬಾಕಿ ಇರುವುದನ್ನು ಪರಿಹರಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಜೇನು ಕುರುಬ, ಕಾಡುಕುರುಬ, ಬೆಟ್ಟಕುರುಬ, ಕುಡಿಯ, ಮಲೆಕುಡಿಯ, ಯರವ, ಪಣಿಯ, ಸೋಲಿಗ ಇತರ ಮೂಲ ಆದಿವಾಸಿಗಳಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತಿತರ ಮೂಲ ಸೌಲಭ್ಯವನ್ನು ಕಾಲಮಿತಿಯಲ್ಲಿ ಕಲ್ಪಿಸುವಂತೆ ತಿಳಿಸಿದರು.

ಐಟಿಡಿಪಿ ಇಲಾಖೆ ತಾಲೂಕು ಅಧಿಕಾರಿ ನವೀನ್, 8 ಪ್ರಕರಣಗಳಿಗೆ ಸಮುದಾಯ ಹಕ್ಕು ನೀಡಲಾಗಿದೆ. ಉಳಿದಂತೆ 20 ಸಮುದಾಯ ಅರಣ್ಯ ಹಕ್ಕು ನೀಡಲು ಬಾಕಿ ಇದೆ. ಅರಣ್ಯ ಹಕ್ಕು ಕಾಯ್ದೆಯಡಿ ವೈಯಕ್ತಿಕ ಹಕ್ಕುಗಳನ್ನು ಕಲ್ಪಿಸಲಾಗುವುದು. ಆದಿವಾಸಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ತಳಮಟ್ಟದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿಸಲು ಮುಂದಾಗಬೇಕು ಎಂದರು.

ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ರಸ್ತೆ ಬದಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಬಾರದು. ವಿದ್ಯಾರ್ಥಿ ನಿಲಯಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ಪಠ್ಯಪುಸ್ತಕ, ಊಟೋಪಾಚಾರ ನೀಡಬೇಕು. ಮನೆಗಳ ಬೇಡಿಕೆ ಹೆಚ್ಚು ಇದ್ದು, ಆದ್ಯತೆ ಮೇಲೆ ವಸತಿ ಕಲ್ಪಿಸುವಂತೆ ಸಂಬಂಧಪಟ್ಟ ಪಿಡಿಒಗಳಿಗೆ ಸೂಚಿಸಿದರು. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಎ.ಎಸ್.ಪೊನ್ನಣ್ಣ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ಹಾಡಿಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗಬಾರದು. ಹಾಗೆಯೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಆದಿವಾಸಿಗಳು ಹಿಂದಿನಿಂದ ಕಾಡು ಉಳಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಮೂಲ ಸೌಲಭ್ಯ ಕಲ್ಪಿಸಲು ಒತ್ತು ನೀಡಬೇಕು ಎಂದರು.

ಗ್ರಾಮ ಪಂಚಾಯಿತಿವಾರು ಬಡವರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪಿಡಿಒಗಳು ಗಮನಹರಿಸಬೇಕು. ಆ ನಿಟ್ಟಿನಲ್ಲಿ ಪಟ್ಟಿ ಮಾಡಿಕೊಂಡು 10 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳು ಸರ್ಕಾರದ ಆದ್ಯತಾ ಕಾರ್ಯಕ್ರಮವಾಗಿದ್ದು, ಸರ್ಕಾರದ ಆಶಯ ಅರ್ಥಮಾಡಿಕೊಂಡು ಪ್ರತಿಯೊಬ್ಬರಿಗೂ ಸೌಲಭ್ಯಗಳು ತಲುಪಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್, ತಾ.ಪಂ. ಇಒ ಅಪ್ಪಣ್ಣ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕಾಳೇಮಾಡ ಪ್ರಶಾಂತ್ ಅಪ್ಪಯ್ಯ, ಜಾನ್ಸನ್ ಮತ್ತಿತರರಿದ್ದರು.