ನಫೆಡ್‌ ಕೊಬ್ಬರಿ ಮಾರುಕಟ್ಟೆಗೆ ಬಿಡಬೇಡಿ

| Published : Jul 18 2024, 01:37 AM IST

ಸಾರಾಂಶ

ನಫೆಡ್ ಮೂಲಕ ಖರೀದಿ ಮಾಡಲಾಗಿರುವ 62.500ಮೆಟ್ರಿಕ್ ಟನ್‌ ಕೊಬ್ಬರಿಯನ್ನು ಮಾರುಕಟ್ಟೆಗೆ ಬಿಟ್ಟರೆ ರೈತರ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಫೆಡ್ ಮೂಲಕ ಖರೀದಿ ಮಾಡಲಾಗಿರುವ 62.500ಮೆಟ್ರಿಕ್ ಟನ್‌ ಕೊಬ್ಬರಿಯನ್ನು ಮಾರುಕಟ್ಟೆಗೆ ಬಿಟ್ಟರೆ ರೈತರ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಕೊಬ್ಬರಿಯನ್ನು ಮಾರುಕಟ್ಟೆಗೆ ಬಿಡಬಾರದು ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಫೆಡ್ ಮೂಲಕ ಕೊಬ್ಬರಿ ಖರೀದಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಫೆಡ್ ನಲ್ಲಿ ಕೆಲವೇ ಕೆಲವು ರೈತರು ಮಾತ್ರ ನೊಂದಾವಣೆ ಮಾಡಿಕೊಂಡು ಕೊಬ್ಬರಿ ಮಾರಾಟ ಮಾಡಿದ್ದಾರೆ. ಇದರಿಂದಾಗಿ ಉಳಿದ ರೈತರು ಕಷ್ಟ ಎದುರಿಸುವಂತಾಗಿದೆ. ಈಗ ನಫೆಡ್ ಗೋದಾಮಿನಲ್ಲಿ 62.500 ಮೆ.ಟನ್ ಕೊಬ್ಬರಿ ದಾಸ್ತಾನು ಇದ್ದು ಅದನ್ನು ಈಗ ಮಾರುಕಟ್ಟೆಗೆ ಬಿಟ್ಟರೆ ಖರೀದಿದಾರರು ಅತ್ಯಂತ ಕಡಿಮೆ ದರಕ್ಕೆ ಟೆಂಡರು ಪಡೆಯುತ್ತಾರೆ. ಇದರಿಂದಾಗಿ ರೈತರಿಗೆ ತೊಂದರೆಯಾಗಲಿದೆ. ಕೊಬ್ಬರಿಯನ್ನೇ ನಂಬಿ ಜೀವನ ಮಾಡುತ್ತಿರುವ ತೆಂಗು ಬೆಳೆಗಾರನ ಬದುಕು ಅತಂತ್ರವಾಗಲಿದೆ. ಆದ್ದರಿಂದ ಕೊಬ್ಬರಿಯನ್ನು ತಕ್ಷಣಕ್ಕೆ ಮಾರುಕಟ್ಟೆಗೆ ಬಿಡದೆ ಶೈತ್ಯಾಗಾರದಲ್ಲಿ ದಾಸ್ತಾನು ಮಾಡಿ ರೈತರ ಬಳಿಯಿರುವ ಕೊಬ್ಬರಿ ಮಾರಾಟವಾದ ನಂತರ ಮುಕ್ತ ಮಾರುಕಟ್ಟೆಗೆ ಬಿಟ್ಟರೆ ಎಲ್ಲರಿಗೂ ಉತ್ತಮ ಬೆಲೆ ಸಿಗಲಿದೆ. ಒಂದು ವೇಳೆ ನಫೆಡ್ ಕೊಬ್ಬರಿ ಮಾರುಕಟ್ಟೆಗೆ ಬಿಟ್ಟಲ್ಲಿ ರೈತರ ಜೊತೆಗೆ ನಿಂತು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.