ಸಾರಾಂಶ
ಕನಕಪುರ: ಯಾರದ್ದೋ ಒತ್ತಡಕ್ಕೆ ಮಣಿದು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಬಾಕಿ ಉಳಿಸಿಕೊಳ್ಳದಂತೆ ಜಿಲ್ಲಾ ಲೋಕಾಯುಕ್ತ ಎಸ್ಪಿ ಸ್ನೇಹಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ತಪ್ಪು ಮಾಡಬೇಡಿ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಿಮ್ಮ ಹಂತದಲ್ಲೇ ಸಮಸ್ಯೆ ಗಳನ್ನು ಬಗೆಹರಿಸಿ, ಇಲ್ಲದಿದ್ದರೆ ನಿಮ್ಮ ನಿವೃತ್ತಿ ವೇಳೆ ಪ್ರಕರಣಗಳ ತನಿಖೆ ಬಾಕಿ ಉಳಿದಿದ್ದರೆ ನಿಮಗೆ ತೊಂದರೆ ಆಗಲಿದ್ದು ಆಗ ನಿಮ್ಮ ಸಹಾಯಕ್ಕೆ ಯಾರು ಬರುವುದಿಲ್ಲ. ಇದು ಎಲ್ಲಾ ಅಧಿಕಾರಿಗಳ ಗಮನದಲ್ಲಿರಲಿ ಎಂದು ಸಲಹೆ ನೀಡಿದರು.ಇಂದು ಇಲ್ಲಿ ನಡೆಯುತ್ತಿರುವ ಕುಂದು ಕೊರತೆ ಸಭೆ ನಾಮಕೆವಸ್ಥೆಗೆ ನಡೆಯುತ್ತಿದೆ ಎಂಬ ಭ್ರಮೆ ಬೇಡ. ಜನರ ಕೆಲಸ ಆಗಬೇಕು. ಹಾಗಾಗಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಮಾಡುತ್ತಿದ್ದೇವೆ. ಸಾರ್ವಜನಿಕ ದೂರುಗಳನ್ನು ಬೆಂಗಳೂರು ಕಚೇರಿಗೆ ತಲುಪಿಸಬಹುದು. ಆದರೆ ಇದು ನಿಮ್ಮ ಕೆಲಸ ನಿಮ್ಮ ಗಮನಕ್ಕೆ ಬರದೇ ಇರಬಹುದು ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತರುತ್ತೇವೆ. ನೀವೇ ಬಗೆಹರಿಸಬಹುದು, ನೀವು ನಿರ್ಲಕ್ಷ ಮಾಡಿದರೆ ನಾವು ನಿಮ್ಮ ಕಚೇರಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತೇವೆ. ಅದಕ್ಕೆ ಯಾರೋ ಅವಕಾಶ ಕೊಡಬೇಡಿ, ಸಾರ್ವಜನಿಕರ ಕೆಲಸಗಳು ಆಗಬೇಕು ಎಂಬುದೇ ನಮ್ಮ ಉದ್ದೇಶ ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ವಂಚನೆ ಮಾಡುವವರ ಬಗ್ಗೆ ಎಚ್ಚರದಿಂದಿರಬೇಕು. ವಂಚಕರಿಂದ ನಿಮ್ಮ ಖಾತೆಯಲ್ಲಿ ಹಣ ಕಡಿತವಾಗುವ ಯಾವುದೇ ದೂರುಗಳಿದ್ದರೆ 1930ಕ್ಕೆ ಕರೆ ಮಾಡಿ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಜಗದೀಶ್ ದೂರು ಸಲ್ಲಿಸಿ ಮಾತನಾಡಿ, ಸರ್ವೆ ನಂ. 739ರ ಸರ್ಕಾರಿ ಗೋಮಾಳವನ್ನು ಕಬಳಿಸಲು ಹುನ್ನಾರ ಮಾಡುತ್ತಿದ್ದಾರೆ. ಬೇರೆ ಬೇರೆ ಸರ್ವೇ ನಂಬರ್‌ಗಳಲ್ಲಿ ಕ್ರಯ ಮಾಡಿಕೊಂಡು ಸರ್ಕಾರಿ ಗೋಮಾಳದಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. 30ರಿಂದ 4೦ ಜನರಿಗೆ ಈಗಾಗಲೇ ಪೋಡಿ ಆಗಿದೆ. ಸರ್ಕಾರಿ ಜಾಗವನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.ಶ್ರೀರಾಮ ಸೇನೆ ನಾಗಾರ್ಜುನಗೌಡ ಮಾತನಾಡಿ, ಸರ್ಕಾರಿ ಕಚೇರಿಗಳಿಗೆ ಯಾರೇ ದೂರು ಸಲ್ಲಿಸಿದರೂ ಈ ಕಚೇರಿಯಲ್ಲಿ ಅಪ್ಲೋಡ್ ಮಾಡಿ ಪುರಾವೆ ರಸೀದಿ ಕೊಡಬೇಕು. ಆದರೆ ಯಾವುದೇ ಸರ್ಕಾರಿ ಕಚೇರಿಗಳನ್ನು ಈ ವ್ಯವಸ್ಥೆ ಸಮರ್ಪಕವಾಗಿ ಜಾರಿಯಲ್ಲಿಲ್ಲ. ದೂರು ಅರ್ಜಿಗಳ ಮೇಲೆ ಸೀಲ್ ಹಾಕಿ ಕೊಟ್ಟು ಅರ್ಜಿಗಳನ್ನು ಮೂಲೆ ಗುಂಪು ಮಾಡುತ್ತಾರೆ. ಇ ಕಚೇರಿ ವ್ಯವಸ್ಥೆ ಸಮರ್ಪಕವಾಗಿ ಜಾರಿ ಮಾಡುವಂತೆ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿ ದ ಲೋಕಾಯುಕ್ತ ಅಧಿಕಾರಿಗಳು, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಈ ಕಚೇರಿ ವ್ಯವಸ್ಥೆ ಸಮರ್ಪಕವಾಗಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ನೋಟಿಸ್ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸ್ಲಂ ಬೋರ್ಡ್ ವತಿಯಿಂದ ಮನೆ ನಿರ್ಮಾಣ ಕಾಮಗಾರಿಗಳು ಪ್ರಾರಂಭವಾಗಿ 6 ವರ್ಷ ಕಳೆದಿದೆ. ಆದರೆ ಇನ್ನೂ ಪೂರ್ಣಗೊಂಡಿಲ್ಲ ಮನೆಗಳ ಗುಣಮಟ್ಟ ಕಳಪೆಯಾಗಿದೆ. ಅಜೀಜ್ ನಗರದಲ್ಲಿ ಅರ್ಧಂಬರ್ಧ ಮನೆಗಳನ್ನು ನಿರ್ಮಾಣ ಮಾಡಿ ಸ್ಥಗಿತಗೊಳಿಸಿದ್ದಾರೆ. ವಿಧಿ ಇಲ್ಲದೆ ಅದೇ ಮನೆಯಲ್ಲಿ ಕೆಲವರು ಕಾಡು ಪ್ರಾಣಿಗಳಿಗಿಂತಲೂ ಕಡೆಯಾಗಿ ಜೀವಿಸುತ್ತಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ವಹಿಸಬೇಕು ಎಂದು ಶೇಖರ್ ದೂರು ಸಲ್ಲಿಸಿದರು.ರೈತ ಮುಖಂಡ ಚೀಲೂರು ಮುನಿರಾಜು ಮಾತನಾಡಿ, ತಾಲೂಕಿನಲ್ಲಿ ಬಹುತೇಕ ಆಹಾರ ಸರಬರಾಜು ವಿತರಣಾ ಕೇಂದ್ರಗಳಲ್ಲಿ ಪ್ರತಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡಿಗೆ 10ರಿಂದ 2೦ ರು. ಲಂಚ ಪಡೆಯುತ್ತಿದ್ದಾರೆ ತಾಲೂಕಿನಲ್ಲಿ 75,೦೦೦ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ಗಳಿದ್ದು, ಪ್ರತಿ ತಿಂಗಳು ಬಡವರಿಂದ ಹಣ ಲೂಟಿ ಮಾಡುತ್ತಿದ್ದಾರೆ. ತಾಲೂಕು ಆಡಳಿತದ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ತಾಲೂಕು ಕಚೇರಿಯಲ್ಲಿ ಲಂಚ ಕೊಡದೆ ಯಾವುದೆ ಕೆಲಸಗಳು ಆಗೋದಿಲ್ಲ. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಲೋಕಾಯುಕ್ತ ಡಿಎಸ್‌ಪಿ ಸುಧೀರ್, ಇನ್ಸ್‌ಪೆಕ್ಟರ್ ಅನಂತರಾಮ್, ಸಂದೀಪ್, ಹನುಮಂತ ಕುಮಾರ್, ತಹಸೀಲ್ದಾರ್ ಮಂಜುನಾಥ್, ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್, ಇಒ ಬೈರಪ್ಪ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒಗಳು, ಸಾರ್ವಜನಿಕರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 02:
ಕನಕಪುರ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಕುಂದು ಕೊರತೆ ಅಹವಾಲು ಸ್ವೀಕರಿಸಿದರು.