ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾಧನೆಗೆ ಬಡತನವೆಂಬ ಸೋಗು ಅಡ್ಡಿಯಾಗದೇ, ಉನ್ನತ ಸಾಧನೆಗೆ ಅದೇ ಬಡತನವೇ ಪ್ರೇರಣೆಯಾಗಿ, ಸಾಧನೆಯೆಂಬುದಕ್ಕೆ ಮೆಟ್ಟಿಲಾಗಬೇಕು ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ಪ್ರತಿಭಾ ಅಕಾಡೆಮಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಶೇಷ ಚೇತನರು, ಕಿತ್ತು ತಿನ್ನುವ ಬಡತನ ಇದ್ದವರೂ ಸೇರಿದಂತೆ ಅನೇಕ ವಿಶೇಷ ವ್ಯಕ್ತಿಗಳು, ಜೀವನದಲ್ಲಿ ಸಾಧಿಸುವ ಸಂಕಲ್ಪ ಮಾಡಿದವರು ಸಾಧನೆ ಮಾಡುತ್ತಿರುವುದು ಬಡತನದ ನೆಪ ಹೇಳುವವರಿಗೆ ಪ್ರೇರಣೆಯಾಗಬೇಕು ಎಂದರು.
ಅಣ್ಣಾ ಹಜಾರೆ ಬಾಲ್ಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದವರು. ಆದರೆ, ಪುಸ್ತಕವೊಂದರಿಂದ ಪ್ರೇರಿತರಾದಿ ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಹೋರಾಡಿದರು. ಕಷ್ಟದಲ್ಲೇ ಬೆಳೆದ ಹಿರಿಯ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಇಡೀ ದೇಶದ ಗಮನ ಸೆಳೆಯುವಂತಹ ಸಾಧನೆ ಮೆರೆದು, ಮಹಿಳೆಯರಿಗೆ ಪ್ರೇರಣೆಯಾದರು. ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ. ಅದನ್ನು ಕುಡಿದವರು ಸಿಂಹದಂತೆಯೇ ಘರ್ಜಿಸಬಹುದು ಎಂದು ಹೇಳಿದರು.ಶಿಕ್ಷಣವಿರುವುದು ಉದ್ಯೋಗ ಪಡೆಯಲು, ದುಡಿಮೆ ಮಾಡುವುದಕ್ಕಾಗಿ ಅಲ್ಲ. ಜ್ಞಾನಕ್ಕಾಗಿ ಎಂಬುದನ್ನು ಅರಿಯಬೇಕು. ಹಾಲಿಗೆ ಸಂಸ್ಕಾರ ನೀಡಿದಾಗ ಅದು ಮೊಸರು, ಬೆಣ್ಣೆ, ತುಪ್ಪ ಹೀಗೆ ಉಪ ಉತ್ಪನ್ನಗಳ ರೂಪ ಪಡೆದು, ಉಪಯೋಗಿಯಾಗುತ್ತದೆ. ಹಾಗಾಗಿ ಶಿಕ್ಷಣದ ಜೊತೆಗೆ ಸಂಸ್ಕಾರ ಬೆರೆತರೆ ಸಮಾಜದಲ್ಲಿ ಸ್ಥಾನಮನ, ಜೀವನದಲ್ಲಿ ಸುಖ, ಶಾಂತಿ ಹೊಂದಲು ಸಾಧ್ಯ. ಸಂಸ್ಕಾರವಿಲ್ಲದ ಶಿಕ್ಷಣ ಬಲ್ಬ್ ಇಲ್ಲದ ವಿದ್ಯುತ್ ಕಂಬ ಇದ್ದಂತೆ ಎಂದು ಹೇಳಿದರು.
ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್, ಟೀವಿ, ವಾಟ್ಸಪ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಿಂದಾಗಿ ಮನುಷ್ಯ ತನ್ನ ಸುಖ, ಶಾಂತಿ, ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಪಾಲಕರು ಪಾರ್ಟಿ, ಬಾರ್, ಧಾರಾವಾಹಿಗಳಲ್ಲಿ ಮುಳುಗಿದ್ದಾರೆ. ಮಕ್ಕಳು, ವಿದ್ಯಾರ್ಥಿ, ಯುವ ಜನರು ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಯಥೇಚ್ಛವಾಗಿ ಬಳಸುವ ಮೂಲಕ ಅವುಗಳ ದಾಸರಾಗುತ್ತಿದ್ದಾ ರೆ. ಮನೆಗಳ ಮುಂದೆ ರಂಗೋಲಿ ಹಾಕುವ, ತುಳಸಿ ಗಿಡಕ್ಕೆ ನೀರೆರೆದು, ಪೂಜಿಸುವ ಸಂಸ್ಕೃತಿಯೇ ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆ, ಅಂಕ ಗಳಿಕೆ ಜೊತೆಗೆ ಮಾನವೀಯತೆ ಮೈಗೂಡಿಸಿಕೊಳ್ಳಿ. ನೂರಕ್ಕೆ ನೂರು ಅಂಕ ಪಡೆದರಷ್ಟೇ ಪ್ರತಿಭಾವಂತರು, ಪರಿಪೂರ್ಣರು ಅಂತಾ ಅಲ್ಲ. ನೆರೆಹೊರೆಯವರು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣವಂತರೂ ಆದಾಗ ಮಾತ್ರ ವಿದ್ಯೆಗೆ ಮತ್ತಷ್ಟು ಮಹತ್ವ ಬರುತ್ತದೆ. ಅವಿದ್ಯಾವಂತರು ತಮ್ಮ ಪಾಲಕರನ್ನು ಗೌರವದಿಂದ ಕಾಣುತ್ತಿದ್ದರೆ, ವಿದ್ಯಾವಂತರು, ಪ್ರಜ್ಞಾವಂತರೆನಿಸಿಕೊಂಡವರೆ ಹೆತ್ತವರನ್ನು ವೃದ್ಧಾಶ್ರಮದ ಪಾಲು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಎಸ್‌ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ, ಹರಿಹರ ಕ್ಷೇತ್ರದ ಕಾಂಗ್ರೆಸ್ ಮುಖಂಡ, ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶ್ರೀನಿವಾಸ ನಂದಿಗಾವಿ, ಕಾಂಗ್ರೆಸ್ ಮುಖಂಡರಾದ ಹೊದಿಗೆರೆ ರಮೇಶ, ಕೆನರಾ ಬ್ಯಾಂಕ್ ನಿವೃತ್ತ ಪ್ರಬಂಧಕ, ಹಿರಿಯ ಲೇಖಕ ಎನ್.ಟಿ.ಎರ್ರಿಸ್ವಾಮಿ, ಮಾರಣ್ಣ, ಅಂಜಿನಪ್ಪ, ವಿಜಯಕುಮಾರ, ಟಿ.ಬಸವರಾಜ ಇತರರು ಇದ್ದರು.----
ಬಡತನದಲ್ಲಿ ಅರಳುವಂತಹ ಪ್ರತಿಭೆಯು ಅರಮನೆಯಲ್ಲಿ ಅಂತ್ಯಗೊಳ್ಳುತ್ತದೆ. ನಾಟಕಗಳನ್ನು ನೋಡಿ ಪ್ರಭಾವಿತರಾದ ಕರಮಚಂದ ಗಾಂಧಿ ಮುಂದೆ ರಾಷ್ಟ್ರಪಿತ ಎನಿಸಿಕೊಂಡರು. ಕೂಲಿ ಕೆಲಸದಲ್ಲಿದ್ದ ನಾನು ಮತ್ತು ಪೌರ ಕಾರ್ಮಿಕರಾಗಿದ್ದ ಕೆ.ಎಸ್.ಬಸವಂತಪ್ಪ ಇಬ್ಬರೂ ಶಾಸಕರಾಗುತ್ತೇವೆಂದು ಕನಸು, ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಅಧಿಕಾರದತ್ತ ಇಂದೂ ಸಹ ವಿಧಾನಸೌಧ ಸುತ್ತ ಆತ್ಮಗಳು ಸುತ್ತಾಡುತ್ತಿವೆ.ಬಿ.ದೇವೇಂದ್ರಪ್ಪ ಜಗಳೂರು ಶಾಸಕ .