ಸಾಧನೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ವಿದ್ಯಾರ್ಥಿಗಳಿಗೆ ತಂದೆ-ತಾಯಿಯೇ ರೋಲ್‌ಮಾಡೆಲ್. ತಂದೆ-ತಾಯಿಗಳಿಗಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ. ಸಾಧಕರಾಗಿ ಹೊರಹೊಮ್ಮುವ ಜೊತೆಗೆ ಸಂಸ್ಕಾರ, ಉತ್ತಮ ನಡತೆಯನ್ನು ರೂಢಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಧನೆ ಎನ್ನುವುದು ವಿದ್ಯಾರ್ಥಿಗಳ ಬದುಕಿಗೆ ಭೂಷಣ. ಆದರೆ, ಸಾಧನೆಯ ಅಹಂನ್ನು ತಲೆಗೇರಿಸಿಕೊಳ್ಳಬಾರದು. ಜವಾಬ್ದಾರಿಯಿಂದ ಮತ್ತಷ್ಟು ಸಾಧನೆ ಮಾಡುವ ಕಡೆ ದಿಟ್ಟ ಹೆಜ್ಜೆಯನ್ನಿಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಶಾಸಕ ಪಿ.ರವಿಕುಮಾರ್ ಅವರು ಎಸ್ಸೆಸ್ಸಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾಧನೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ವಿದ್ಯಾರ್ಥಿಗಳಿಗೆ ತಂದೆ-ತಾಯಿಯೇ ರೋಲ್‌ಮಾಡೆಲ್. ತಂದೆ-ತಾಯಿಗಳಿಗಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ. ಸಾಧಕರಾಗಿ ಹೊರಹೊಮ್ಮುವ ಜೊತೆಗೆ ಸಂಸ್ಕಾರ, ಉತ್ತಮ ನಡತೆಯನ್ನು ರೂಢಿಸಿಕೊಳ್ಳಬೇಕು. ಮಕ್ಕಳನ್ನು ಯೋಗವಂತರನ್ನಾಗಿ ಮಾಡುವ ಬದಲು ಯೋಗ್ಯವಂತರನ್ನಾಗಿ ಮಾಡುವಂತೆ ತಂದೆ-ತಾಯಿಗಳಿಗೆ ಸಲಹೆ ನೀಡಿದರು.

ತಂತ್ರಜ್ಞಾನವನ್ನು ಕಲಿಕೆಗೆ ಅನುಗುಣವಾಗಿ ಬಳಸಿಕೊಳ್ಳಬೇಕು. ಅದರ ದುರುಪಯೋಗ ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳಾದವರಿಗೆ ಟ್ವೀಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ನಿಮಗೆಷ್ಟು ಮಂದಿ ಫಾಲೋವರ್ಸ್‌ಗಳಿದ್ದಾರೆ ಎನ್ನುವುದು ಮುಖ್ಯವಲ್ಲ, ಜೀವನದಲ್ಲಿ ಎಷ್ಟು ಪುಸ್ತಕಗಳನ್ನು ಓದಿದೆ ಎನ್ನುವುದು ಬಹಳ ಮುಖ್ಯ ಎಂದರು.

ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿಗೆ ತಾವೇ ಬೆಳಕಾಗಬೇಕು. ಅದನ್ನು ಭವಿಷ್ಯದ ಬದುಕಿಗೆ ದಾರಿದೀಪವಾಗಿಸಿಕೊಳ್ಳಬೇಕು ಎಂದರು.

ಫಲವತ್ತಾದ ಮಣ್ಣಿಗೆ ಬೀಜವನ್ನು ಹಾಕಿ ನೀರನ್ನು ಹಾಕದಿದ್ದರೆ ಅದು ಮೊಳಕೆಯೊಡೆಯುವುದೂ ಇಲ್ಲ, ಗಿಡವಾಗಿ ಬೆಳೆಯುವುದೂ ಇಲ್ಲ. ಅದೇ ರೀತಿ ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಾದ ನೀವು ಶೈಕ್ಷಣಿಕವಾಗಿ ಉತ್ತಮ ಬೆಳವಣಿಗೆ ಕಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹಾರೈಸಿದರು.

ಬೆಟ್ಟದ ಮೇಲಿರುವ ದೇವರಿಗೆ ಭಕ್ತರು ಹೆಚ್ಚು ಭಕ್ತಿಯನ್ನು ತೋರುತ್ತಾರೆ. ಸಾಧನೆಯ ಬೆಟ್ಟ ಹತ್ತುತ್ತಿರುವ ನಿಮಗೆ ಬೀಳುವ ಭಯ ಇರಬಾರದು. ಮತ್ತಷ್ಟು ಎತ್ತರಕ್ಕೆ ಏರುವ ಕನಸನ್ನು ಕಾಣಬೇಕು. ಭವಿಷ್ಯದಲ್ಲಿ ಉತ್ತಮ ಸಾಧಕರಾಗಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಬದುಕಿಗೆ ಸಾರ್ಥಕತೆಯನ್ನು ತಂದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಣ್ಣು ಮಕ್ಕಳು ಮೇಲುಗೈ ಸಾಧಿಸುವುದು ಸಾಮಾನ್ಯ. ಅಲ್ಲಿಂದ ಮುಂದಕ್ಕೆ ಹೆಣ್ಣು ಮಕ್ಕಳು ಕಾಣಸಿಗುವುದೇ ಇಲ್ಲ. ಇದು ದುರದೃಷ್ಟಕರ. ಒಂದೆಡೆ ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗುತ್ತಿವೆ. ಬಾಲ್ಯವಿವಾಹದಲ್ಲಿ ಮಂಡ್ಯ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದರೆ ಪೋಕ್ಸೋ ಪ್ರಕರಣಗಳಲ್ಲಿ ಟಾಪ್-೫ನಲ್ಲಿ ಇದೆ. ಇದು ಸಮಾಜಕ್ಕೆ ಮಾರಕ ಎಂದರು.

ಪದವಿಯವರೆಗೆ ಹೆಣ್ಣು ಮಕ್ಕಳು ಶಿಕ್ಷಣ ಕಡೆಗಷ್ಟೇ ಗಮನವಿರಬೇಕು. ಪೋಷಕರೂ ಕೂಡ ಪದವಿ ಪೂರೈಸುವವರೆಗೆ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಮನಸ್ಸು ಮಾಡಬಾರದು. ಶಿಕ್ಷಣ ನಿಂತಲ್ಲಿ ಮುಂದೆಂದೂ ಸಾಧನೆ ಮಾಡಲಾಗುವುದಿಲ್ಲ. ಬಾಲ್ಯ ವಿವಾಹಗಳನ್ನು ವಿರೋಧಿಸುವ ಮನಸ್ಥಿತಿಯನ್ನು ಹೆಣ್ಣುಮಕ್ಕಳು ಬೆಳೆಸಿಕೊಳ್ಳಬೇಕು. ಓದುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಪ್ರೀತಿ-ಪ್ರೇಮ, ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳು ದೂರವಿದ್ದಾಗ ಮಾತ್ರವೇ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕಲಿಕೆ ಎನ್ನುವುದು ಮ್ಯಾರಥಾನ್ ಇದ್ದಂತೆ. ಅದು ನಿರಂತರವಾಗಿರುತ್ತದೆ. ಅದರಲ್ಲಿ ಗೆಲ್ಲುವವರೇ ನಿಜವಾದ ಸಾಧಕರು ಎಂದು ಬಣ್ಣಿಸಿದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ಶಿಕ್ಷಣ ಎನ್ನುವುದು ಹುಲಿಯ ಹಾಲಿನಂತೆ. ಅದನ್ನು ಕುಡಿದವನು ಘರ್ಜಿಸುತ್ತಾನೆ. ವಿದ್ಯಾರ್ಥಿಗಳು ಸಾಧನೆಯ ಮೂಲಕ ಮುಂದಿನ ಮಕ್ಕಳಿಗೆ ಮಾದರಿಯಾಗಬೇಕು. ಸಾಧನೆಗೆ ಸ್ಫೂರ್ತಿಯಾಗಲೆಂದು ಪುರಸ್ಕಾರ ನೀಡಲಾಗುತ್ತಿದೆ. ನಿಮ್ಮ ಸಾಧನೆ ನಿರಂತರವಾಗಿರಬೇಕು ಎಂದು ಸಲಹೆ ನೀಡಿದರು.

ಮಂಡ್ಯ ಬದಲಾಗುತ್ತಿದೆ. ಕಳೆದೆರಡು ವರ್ಷಗಳಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಉದ್ಯಮಗಳು ತೆರೆದುಕೊಳ್ಳುತ್ತಿವೆ. ಅಭಿವೃದ್ಧಿಯಲ್ಲೂ ಪ್ರಗತಿ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಶ್ರಮ ವಹಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕೊಮ್ಮೇರಹಳ್ಳಿ ವಿಶ್ವಮಾನವ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್, ನಗರಸಭೆ ಸದಸ್ಯರಾದ ಶ್ರೀಧರ್, ರಜನಿ, ರವಿ, ಪೂರ್ಣಿಮಾ, ಪವಿತ್ರಾ, ಲಲಿತಾ, ಸೌಭಾಗ್ಯ, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವರಾಮೇಗೌಡ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಲುವಯ್ಯ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಹದೇವು ಇತರರಿದ್ದರು.