ಲೈಂಗಿಕ ದೌರ್ಜನ್ಯವನ್ನು ಸಿನಿಮಾ ಕ್ಷೇತ್ರಕ್ಕಷ್ಟೇ ಸೀಮಿತ ಮಾಡಬೇಡಿ: ರಮೇಶ್‌

| Published : Sep 07 2024, 01:35 AM IST

ಲೈಂಗಿಕ ದೌರ್ಜನ್ಯವನ್ನು ಸಿನಿಮಾ ಕ್ಷೇತ್ರಕ್ಕಷ್ಟೇ ಸೀಮಿತ ಮಾಡಬೇಡಿ: ರಮೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಲೈಂಗಿಕ ಕಿರುಕುಳವನ್ನು ಕೇವಲ ಸಿನಿಮಾ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಬೇಡಿ ಎಂದು ನಟ ರಮೇಶ್‌ ಅರವಿಂದ್‌ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಹೆಣ್ಣಿನ ಆತ್ಮಗೌರವಕ್ಕೆ ಧಕ್ಕೆಯಾಗುವಂಥಾ ಅನ್ಯಾಯದ ವಿರುದ್ಧ ಯಾರೇ ದನಿ ಎತ್ತಿದರೂ ಅವರಿಗೆ ಬೆಂಬಲ ನೀಡಿಯೇ ನೀಡುತ್ತೇವೆ. ಆದರೆ ಲೈಂಗಿಕ ಕಿರುಕುಳದಂಥಾ ಕೃತ್ಯಕ್ಕೆ ಸಿನಿಮಾ ರಂಗವನ್ನಷ್ಟೇ ಹೊಣೆ ಮಾಡಬೇಡಿ. ಕ್ರಿಯೇಟಿವಿಟಿಯ ಸಮುದ್ರದಂತಿರುವ ಈ ಕ್ಷೇತ್ರದ ಘನತೆಗೆ ಧಕ್ಕೆ ತರಬೇಡಿ’ ಎಂದು ನಟ ರಮೇಶ್‌ ಅರವಿಂದ್‌ ಕಳಕಳಿಯ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಫೈರ್‌ ಸಂಸ್ಥೆ ಕನ್ನಡ ಚಿತ್ರರಂಗದಲ್ಲಿನ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಕುರಿತ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಲಿಖಿತ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಮೇಶ್‌, ‘ನಾನು ಹೋರಾಟಗಾರನಲ್ಲ, ಹೀಗಾಗಿ ಫೈರ್‌ ಸಂಸ್ಥೆಯ ಹೋರಾಟಗಳಲ್ಲಿ ಭಾಗಿಯಾಗಲಾರೆ’ ಎಂದು ಹೇಳಿದ್ದಾರೆ.

‘ಸಿನಿಮಾ ರಂಗದ ಕೆಲವರಿಂದ ತಪ್ಪಾಗಿದ್ದರೆ ಅವರಿಗೆ ಯಾವ ಶಿಕ್ಷೆ ಬೇಕಾದರೂ ನೀಡಲಿ. ಅದನ್ನು ಬಿಟ್ಟು ಲೈಂಗಿಕ ಕಿರುಕುಳದಂಥಾ ವಿಷಯವನ್ನು ಜನರಲೈಸ್ ಮಾಡಬೇಡಿ. ಕಳೆದ ಮೂವತ್ತೈದು ವರ್ಷಗಳಿಂದ ಇಲ್ಲಿ ಅಕ್ಷರಶಃ ಬೆವರು ಸುರಿಸಿ ದುಡಿಯುತ್ತಿದ್ದೇನೆ. ನನ್ನಂಥವರು ಇಲ್ಲಿ ಬಹಳ ಜನ ಇದ್ದಾರೆ. ಈ ಅದ್ಭುತ ರಂಗದ ಭಾಗವಾಗಿದ್ದಾರೆ. ನಮ್ಮ ಮನಸ್ಸಿನ ಭಾಗದಂತಿರುವ ಈ ಕ್ಷೇತ್ರದ ಘನತೆ ಧಕ್ಕೆ ತರುವುದು ಸರಿಯಲ್ಲ’ ಎಂದಿದ್ದಾರೆ.

‘ಲೈಂಗಿಕ ಹಿಂಸೆ ನೀಡುವವರು ಎಲ್ಲಾ ಕಡೆ ಇರುತ್ತಾರೆ. ನಮ್ಮ ಅಕ್ಕ ಪಕ್ಕದ‌ ಮನೆಯಲ್ಲೂ ಇರುತ್ತಾರೆ. ಲೈಂಗಿಕ ಕಿರುಕುಳ ಅನ್ನುವುದನ್ನು ಸಿನಿಮಾದ ಮೇಲೆ ಹಾಕಬೇಡಿ. ಗಂಡು ಹೆಣ್ಣಿನ ಮಧ್ಯೆ ಆಕರ್ಷಣೆ ಇರೋದು ಬಹಳ ಸ್ವಾಭಾವಿಕ ಅಂಶ. ಲೈಂಗಿಕ ಸಂಬಂಧದ ಬಗ್ಗೆ ಇಲ್ಲಿ ಭಿನ್ನಾಭಿಪ್ರಾಯವಿಲ್ಲ. ಕಿರುಕುಳದ ಬಗ್ಗೆ ಮಾತಾಡ್ತಿದ್ದಾರೆ. ಲೈಂಗಿಕ ಕಿರುಕುಳ ಎಲ್ಲಿ ನಡೆದರೂ ತಪ್ಪು. ಸಿನಿಮಾದಲ್ಲಿ ನಡೆದರೂ ತಪ್ಪು. ಬೇರೆ ಕ್ಷೇತ್ರದಲ್ಲಿ ನಡೆದರೂ ತಪ್ಪು. ಆದರೆ ಸಿನಿಮಾ ಅನ್ನೋದು ದೊಡ್ಡ ಸಾಗರ. ಇಲ್ಲಿ ನಮ್ಮ ಗಮನ ಇರುವುದು ಕ್ರಿಯೇಟಿವಿಟಿ ಕಡೆಗೆ. ಹೀಗಾಗಿ ಈ ರಂಗದ ಹೆಸರು ಕೆಡಿಸುವಂಥಾ ಧೋರಣೆ ಬೇಡ’ ಎಂದೂ ರಮೇಶ್‌ ಹೇಳಿದ್ದಾರೆ.