ಹೆಣ್ಣನ್ನು ಕೇವಲ ದೇಹ ಸೌಂದರ್ಯಕ್ಕೆ ಸೀಮಿತಗೊಳಿಸಿ ನೋಡಬೇಡಿ: ಡಾ.ಕೆ.ಬಿ.ಪ್ರತಿಮಾ

| Published : Mar 20 2025, 01:18 AM IST

ಹೆಣ್ಣನ್ನು ಕೇವಲ ದೇಹ ಸೌಂದರ್ಯಕ್ಕೆ ಸೀಮಿತಗೊಳಿಸಿ ನೋಡಬೇಡಿ: ಡಾ.ಕೆ.ಬಿ.ಪ್ರತಿಮಾ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ತಾಯಿ ಮತ್ತು ಸೋದರಿಯರನ್ನು ಗೌರವದಿಂದ ಕಾಣುವ ಪುರುಷ ಸಮಾಜ ಇತರೆ ಹೆಣ್ಣುಮಕ್ಕಳ ಬಗೆಗೆ ಏಕೆ ಗೌರವ ಭಾವನೆ ಹೊಂದುತ್ತಿಲ್ಲ. ಹೆಣ್ಣು ಕೂಡಾ ಸಮಾಜದಲ್ಲಿ ಪುರುಷರಷ್ಟೆ ಸಮರ್ಥಳು ಎಂಬುದನ್ನು ಇನ್ನೆಷ್ಟು ಬಾರಿ ನಿರೂಪಿಸಬೇಕು. ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಮಿಂಚುತ್ತಿರುವವಳೆ ಹೆಣ್ಣು. ಆದರೂ ಹೆಣ್ಣಿಗೆ ಸಮಾನತೆ ದೊರಕುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಹಿಳೆಯರ ಬಗ್ಗೆ ಗೌರವ ಹೆಚ್ಚಾದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಬಿ.ಪ್ರತಿಮಾ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾವಿತ್ರಿ ಬಾಯಿಪುಲೆ ಮಹಿಳಾ ಘಟಕದ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ತನ್ನ ತಾಯಿ ಮತ್ತು ಸೋದರಿಯರನ್ನು ಗೌರವದಿಂದ ಕಾಣುವ ಪುರುಷ ಸಮಾಜ ಇತರೆ ಹೆಣ್ಣುಮಕ್ಕಳ ಬಗೆಗೆ ಏಕೆ ಗೌರವ ಭಾವನೆ ಹೊಂದುತ್ತಿಲ್ಲ. ಹೆಣ್ಣನ್ನು ಕೇವಲ ದೇಹ ಸೌಂದರ್ಯಕ್ಕೆ ಸೀಮಿತಗೊಳಿಸಿ ನೋಡಬೇಡಿ. ಹೆಣ್ಣಿನ ಆಂತರಿಕ ಸೌಂದರ್ಯವನ್ನು ನೋಡಬೇಕು ಎಂದು ಸಲಹೆ ನೀಡಿದರು.

ಹೆಣ್ಣು ಕೂಡಾ ಸಮಾಜದಲ್ಲಿ ಪುರುಷರಷ್ಟೆ ಸಮರ್ಥಳು ಎಂಬುದನ್ನು ಇನ್ನೆಷ್ಟು ಬಾರಿ ನಿರೂಪಿಸಬೇಕು. ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಮಿಂಚುತ್ತಿರುವವಳೆ ಹೆಣ್ಣು. ಆದರೂ ಹೆಣ್ಣಿಗೆ ಸಮಾನತೆ ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಧ್ಯಾಪಕಿ ಸರಸ್ವತಿ ಮಾತನಾಡಿ, ಪುರುಷರ ನೆರವಿಲ್ಲದೆ ಸ್ತ್ರೀ ಕೂಡಾ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ. ಹೆಣ್ಣಿನ ಸಾಧನೆ ಬಗೆಗೆ ವ್ಯಾಪಕ ಪ್ರಚಾರವಾಗಬೇಕು. ಮಾಧ್ಯಮ ಜಗತ್ತು ಸ್ತ್ರೀಪರ ಕಾರ್ಯಕ್ರಮಗಳನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯ ತೋರಿಸಬೇಕು ಎಂದರು.

ಇಂದು ಪುರುಷ ಪರ ಕ್ರೀಡಾ ಜಗತ್ತಿನಲ್ಲಿ ಸ್ತ್ರೀಯರು ಎಷ್ಟೆ ಸಾಧನೆ ಮಾಡಿದರೂ ಕೂಡಾ ಸಾಧಕರಿಗೆ ಪುರುಷ ಸಾಧಕರಿಗೆ ಸಿಗುವಷ್ಟು ಗೌರವ ದೊರಕುತ್ತಿಲ್ಲ. ಇಂತಹ ವಿಷಯಗಳ ಬಗೆಗೆ ಗಂಭೀರ ಚರ್ಚೆಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ವಿ.ವಿ.ಜಗಧೀಶ್ ಮಾತನಾಡಿ, ಸ್ತ್ರೀಯರ ಜಾಗೃತಿಗೆ ಶಿಕ್ಷಣದ ಕೊಡುಗೆ ಅಪಾರವಾಗಿದೆ. ಉದ್ಯೋಕ್ಕಾಗಿ ಓದುವ ಬದಲಿಗೆ ಜ್ಞಾನದ ಹಸಿವಿಗೆ ಓದಬೇಕು ಎಂದರು.

ಸುಶಿಕ್ಷಿತ ಹೆಣ್ಣುಮಕ್ಕಳು ಮಾತ್ರ ಹೋರಾಟದ ಹಾದಿಯನ್ನು ತೆರೆದಿಟ್ಟುಕೊಳ್ಳಬಲ್ಲರು. ಗಂಡು ಹೆಣ್ಣು ಎಂಬ ಬೇಧ ಬರದಂತೆ ಶಿಕ್ಷಣವು ಜ್ಞಾನವನ್ನು ನೀಡುತ್ತದೆ. ಸ್ತ್ರೀಯರೆ ಸ್ತ್ರೀ ಪೀಡಕರಾಗುತ್ತಿರುವ ಬಗೆಗೆ ಸ್ತ್ರೀ ಸಮಾಜವು ಎಚ್ಚರದಿಂದಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಇತಿಹಾಸ ವಿಭಾಗ ಮತ್ತು ರಾಜ್ಯಶಾಸ್ತ್ರ ವಿಭಾಗವು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಹಿರಿಯ ಸಹ ಪ್ರಾಧ್ಯಾಪಕ ಡಾ.ಸಿ.ರಮೇಶ್ ಬಹುಮಾನಗಳನ್ನು ವಿತರಿಸಿದರು.

ವೇದಿಕೆಯಲ್ಲಿ ಪ್ರಾಧ್ಯಾಪಕಿ ಜಿ.ಸವಿತಾ, ಮಹಿಳಾ ಘಟಕದ ಸಂಚಾಲಕಿ ರೂಪಾ, ಐಕ್ಯೂಎಸಿ ಸಂಚಾಲಕ ಉಮೇಶ್, ಪತ್ರಾಂಕಿತ ವ್ಯವಸ್ಥಾಪಕರಾದ ಬಿ.ಎ.ಮಂಜುನಾಥ್, ಜೆ.ಭುವನೇಶ್ವರಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪುಷ್ಪಲತಾ, ಪ್ರಾಧ್ಯಾಪಕರಾದ ಡಿ.ಎನ್.ಸರಸ್ವತಿ, ಬೋರೇಗೌಡ, ಸುರೇಶ್, ಹೊನ್ನೇಗೌಡ, ಶಿಲ್ಪ, ನಾಗವೇಣಿ, ಸಿದ್ದಯ್ಯ, ನಾಗರಾಜೇಗೌಡ, ಡಿಇಒ ನಂದಿನಿ, ಅಭಿಲಾಷ್ ಕೂಡಲಕುಪ್ಪೆ ಮತ್ತಿತರರು ಇದ್ದರು.