ಸಮಸ್ತ ಆ್ಯಪ್‌ನ್ನು ಆಶಾ ಪ್ರೋತ್ಸಾಹಧನಕ್ಕೆ ಲಿಂಕ್ ಮಾಡುವುದನ್ನು ಕೈಬಿಡಬೇಕು, ಸಮಸ್ತ ಆ್ಯಪ್ ಹಾಗೂ ಇತರೆ ಮೊಬೈಲ್ ಆ್ಯಪ್‌ಗಳ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಎದುರಾಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ಸಂಯೋಜಿತ ಜಿಲ್ಲಾ ಘಟಕದಿಂದ ನಗರದಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಮನವಿ ಅರ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಮಸ್ತ ಆ್ಯಪ್‌ನ್ನು ಆಶಾ ಪ್ರೋತ್ಸಾಹಧನಕ್ಕೆ ಲಿಂಕ್ ಮಾಡುವುದನ್ನು ಕೈಬಿಡಬೇಕು, ಸಮಸ್ತ ಆ್ಯಪ್ ಹಾಗೂ ಇತರೆ ಮೊಬೈಲ್ ಆ್ಯಪ್‌ಗಳ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಎದುರಾಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ಸಂಯೋಜಿತ ಜಿಲ್ಲಾ ಘಟಕದಿಂದ ನಗರದಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಮನವಿ ಅರ್ಪಿಸಲಾಯಿತು.ನಗರದಲ್ಲಿ ಬುಧವಾರ ಸಂಘದ ಪದಾಧಿಕಾರಿಗಳ ನಿಯೋಗವು ಜಿಲ್ಲಾಡಳಿತ ಭವನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಗೆ ತೆರಳಿ, ಆಶಾ ಕಾರ್ಯಕರ್ತೆಯರಿಗೆ ಸಮಸ್ತ ಆ್ಯಪ್ ನಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಸಂಘದ ಪದಾಧಿಕಾರಿಗಳು. ಆಶಾ ಕಾರ್ಯಕರ್ತೆಯರಿಗೆ ಸಮಸ್ತ ಆ್ಯಪ್ ಮೂಲಕ ಕಾರ್ಯ ನಿರ್ವಹಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ, ಈ ಆ್ಯಪ್ ಬಳಕೆ ಮಾಡುವಲ್ಲಿ ಜಿಲ್ಲೆಯ ಬಹುತೇಕ ಆಶಾ ಕಾರ್ಯಕರ್ತೆಯರು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಆಶಾ ಸಾಫ್ಟ್ ಹಾಗೂ ಆರ್‌ಸಿಎಚ್ ಪೋರ್ಟಲ್ ಲಿಂಕ್ ಆಗಿದ್ದು ಸುಮಾರು 10 ವರ್ಷಕ್ಕೂ ಮೇಲ್ಪಟ್ಟು ಡಾಟಾ ಎಂಟ್ರಿಯಲ್ಲಿ ಆಡಳಿತಾತ್ಮಕ ಹಾಗೂ ತಾಂತ್ರಿಕ ದೋಷಗಳಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಪ್ರೋತ್ಸಾಹಧನ ಬಾರದೇ ಆರ್ಥಿಕ ನಷ್ಟವಾಗಿದೆ ಎಂದರು.ಸಮಸ್ತ ಆ್ಯಪ್ ನಿಂದ ಆರ್ಥಿಕ ನಷ್ಟ ಮುಂದುವರೆಯಲಿದೆ. ಹಾಗಾಗಿ ಸಮಸ್ತ ಆ್ಯಪ್ ನ್ನು ಆಶಾ ಪ್ರೋತ್ಸಾಹಧನಕ್ಕೆ ಲಿಂಕ್ ಮಾಡುವುದನ್ನು ಕೈಬಿಡಬೇಕು. ಗುಣಮಟ್ಟದ ಮೊಬೈಲ್ ಇಲ್ಲದಿರುವುದರಿಂದ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಆಶಾ ಕಾರ್ಯಕರ್ತೆಯರ ಬಳಿ ಇಲಾಖೆ ಕೆಲಸಕ್ಕೆ ಪೂರಕ ಹೆಚ್ಚಿನ ಸಾಮರ್ಥ್ಯದ ಸ್ಮಾರ್ಟ್ ಫೋನ್ ಇಲ್ಲ. ಹಳೆ, ಕಡಿಮೆ ಸಾಮರ್ಥ್ಯದ ಮೊಬೈಲ್ ಗಳಲ್ಲಿ ''''''''ಸಮಸ್ತ'''''''' ಆ್ಯಪ್ ಸರಿಯಾಗಿ ಇನ್‌ಸ್ಟಾಲ್ ಆಗುತ್ತಿಲ್ಲ. ಫೋನ್ ಪದೇ ಪದೇ ಹ್ಯಾಂಗ್ ಆಗುತ್ತಿವೆ. ಡಿಜಿಟಲ್ ಕೆಲಸ ಕಡ್ಡಾಯವಾದರೂ, ಅಗತ್ಯವಾದ ಅಧಿಕೃತ ಟ್ಯಾಬ್ ಅಥವಾ ಮೊಬೈಲ್ ಸಾಧನ ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ನೀಡಿಲ್ಲ ಎಂದು ದೂರಿದರು.
ಕುಟುಂಬದವರು ಬಳಸುವ ವೈಯಕ್ತಿಕ ಮೊಬೈಲ್‌ಗಳಲ್ಲಿ ಇಲಾಖೆ ಆ್ಯಪ್ ಹಾಕಿ ಇಡೀ ದಿನ ಕೆಲಸ ಮಾಡುವುದರಿಂದ ಫೋನ್ ಮೆಮೋರಿ ಭರ್ತಿಯಾಗುತ್ತಿದ್ದು, ಆಶಾಗಳ ವೈಯಕ್ತಿಕ ಗೋಪ್ಯತೆ ಹಾಗೂ ಫೋನ್ ಬಾಳಿಕೆಗೆ ಧಕ್ಕೆಯಾಗುತ್ತಿದೆ. ಮೊಬೈಲ್ ಬದಲಾಗಿ ಆಶಾ ಕಾರ್ಯಕರ್ತೆಯರ ಸ್ವಂತ ಮೊಬೈಲ್ ಬಳಕೆಗಾಗಿ ಮಾಸಿಕ 280 ರು. ಬಾಡಿಗೆ ನೀಡುತ್ತಿದ್ದುದನ್ನು ಸಹ ಈಗ ನಿಲ್ಲಿಸಲಾಗಿದೆ. ಹಲವಾರು ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ಬಳಕೆ ಬಗ್ಗೆ ಸೂಕ್ತ ತಾಂತ್ರಿಕ ತರಬೇತಿ ನೀಡದ ಕಾರಣ ಮೊಬೈಲ್ ಅಪ್ಲಿಕೇಶನ್ ನಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.ಆ್ಯಪ್ ಸಮಸ್ಯೆ ಬಗ್ಗೆ ದೂರು ಸಲ್ಲಿಸಿದರೂ ಸಕಾಲಿಕ ತಾಂತ್ರಿಕ ಪರಿಹಾರ ಒದಗಿಸುವ ವ್ಯವಸ್ಥೆ ಇಲ್ಲದ್ದ ಸಮಸ್ಯೆ ಮುಂದುವರಿಯಲು ಕಾರಣವಾಗಿದೆ. ಸಮಸ್ತ ಆ್ಯಪ್ ನಿರ್ವಹಣೆಗೆ ಪ್ರೋತ್ಸಾಹ ಧನ ನಿಗದಿಯಾಗಿರುವುದಿಲ್ಲ ಎಂದು ಅವರು ಅಳಲು ತೋಡಿಕೊಂಡರು.
ಸಂಘದ ಮುಖಂಡರಾದ ತಿಪ್ಪೇಸ್ವಾಮಿ ಅಣಬೇರು, ಜಿಲ್ಲಾಧ್ಯಕ್ಷೆ ಲಲಿತಮ್ಮ, ಕಾರ್ಯದರ್ಶಿ ನಾಗವೇಣಿ, ಜ್ಯೋತಿ, ಜಯಮ್ಮ ಇತರರು ಇದ್ದರು.ಡಿಜಿಟಲ್ ದಾಖಲಾತಿಯಿಂದ ಆಶಾಗಳಿಗೆ ತೊಂದರೆ
ಆಶಾ ಕಾರ್ಯಕರ್ತೆಯರು ತಂತ್ರಜ್ಞಾನ ವಿರೋಧಿಗಳಲ್ಲ. ಆದರೆ, ಮೂಲ ಸೌಕರ್ಯಗಳೇ ಇಲ್ಲದೆ ಕೇವಲ ಆ್ಯಪ್ ಮೂಲಕ ಕೆಲಸ ಮಾಡುವಂತೆ ಒತ್ತಡ ಹೇರುವುದು ಎಷ್ಟು ಸರಿ? ಡಿಜಿಟಲ್ ದಾಖಲಾತಿ ಪ್ರಕ್ರಿಯೆಯಿಂದಾಗಿ ಆಶಾಗಳು ಜನರ ಆರೋಗ್ಯ ಸೇವೆ ಕಡೆಗೆ ಗಮನ ಹರಿಸುವುದಕ್ಕಿಂತ, ಮೊಬೈಲ್ ದಾಖಲೆಗೆ ಸಮಯ ವ್ಯರ್ಥ ಮಾಡುವಂತಾಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ನೀಡಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಒತ್ತಾಯಿಸಿದೆ.