ಸಾರಾಂಶ
ಚನ್ನಪಟ್ಟಣ: ವಸತಿರಹಿತರಿಗೆ ನಿವೇಶನ ನೀಡುವ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲಾಗುವುದು, ಅರ್ಹ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಈ ವಿಚಾರದಲ್ಲಿ ಜನರು ಮಧ್ಯವರ್ತಿಗಳ ಮಾತಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು.
ನಗರದ ನಗರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನಗರದ ಹೊನ್ನಿಗಾನಹಳ್ಳಿಯಲ್ಲಿ ಐಡಿಎಸ್‌ಎಂಟಿ ಯೋಜನೆಯಡಿ ಬಡವರಿಗೆ ನಿವೇಶನ ನೀಡಲು ನಿವೇಶನಗಳನ್ನು ವಿಂಗಡಿಸಿ ಅಭಿವೃದ್ಧಿಪಡಿಸಲು ಸಮಕ್ಷ ಪ್ರಾಧಿಕಾರಕ್ಕೆ ಪ್ರಸ್ತಾಪನೆ ಸಲ್ಲಿಸುವ ಚರ್ಚೆಯಲ್ಲಿ ಮಾತನಾಡಿದರು.ನಗರಸಭೆ ಜೆಡಿಎಸ್ ಸದಸ್ಯ ಮಂಜುನಾಥ್ ಮಾತನಾಡಿ, ಈ ಹಿಂದೆ ವಿತರಿಸಲಾದ ನಿವೇಶನಗಳ ಕುರಿತು ಸಾಕಷ್ಟು ದೂರುಗಳು ಬಂದು ಸಮಸ್ಯೆಗಳುಂಟಾಗಿವೆ. ಅಭಿವೃದ್ಧಿಯಲ್ಲೂ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ನಿವೇಶನ ಹಂಚಿಕೆಗೆ ಮುಂದಾಗಬಾರದು. ಇನ್ನೇನು ಕೆಲವೇ ದಿನಗಳಲ್ಲಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಚುನಾವಣೆ ಎದುರಾಗಲಿದೆ. ನೂತನ ಶಾಸಕರು ಚುನಾಯಿತರಾದ ನಂತರ ವಿಸ್ತೃತವಾಗಿ ಚರ್ಚಿಸಿ ನಗರಸಭೆಯ ಅನುಮೋದನೆ ಪಡೆದು ನಿವೇಶನ ಹಂಚಿಕೆಗೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ನಿವೇಶನ ಹಂಚಿಕೆ ಮೀಸಲಾತಿ ಮತ್ತಿತರ ನಿಯಮಗಳು ಆಶ್ರಯ ಸಮಿತಿಯ ಮಾನದಂಡದಂತೆ ನಿರ್ವಹಿಸಲಾಗುವುದು. ಬಡವರಿಗೆ ಅನುಕೂಲ ಕಲ್ಪಿಸುವ ಯೋಜನೆಯಲ್ಲಿ ವಿಳಂಬ ಬೇಡ. ಯಾರಾದರೂ ನಕಲಿ ದಾಖಲಿ ಸಲ್ಲಿಸಿ ನಿವೇಶನ ಪಡೆದಿದ್ದಲ್ಲಿ ಅದನ್ನು ವಾಪಸ್ ಪಡೆಯುವ ಅವಕಾಶವೂ ಇರುವುದರಿಂದ ಇದನ್ನು ಮುಂದೂಡುವುದು ಬೇಡ ಎಂದರು.ಇದಕ್ಕೆ ಕೆಲ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಸದಸ್ಯರು ಕೈಎತ್ತುವ ನಿರ್ಣಯಕ್ಕೆ ಬೆಂಬಲ ಪಡೆದುಕೊಂಡರು.
ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ ಕ್ರಮ ವಹಿಸುವಂತೆ ನಗರಸಭಾ ಮಹಿಳಾ ಸದಸ್ಯರು ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಡಿಸಿ, ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ, ಬೀದಿ ನಾಯಿ ಕಾಟದಿಂದ ಏನಾದರೂ ಅಚಾತುರ್ಯವಾದಲ್ಲಿ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು. ಈ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಸೂಚಿಸಿದರು.
ನಗರ ವ್ಯಾಪ್ತಿಯ ಪ್ರತಿ ವಾರ್ಡ್‌ಗೂ ಪೌರಾಯುಕ್ತರು ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ, ಅದೇ ರೀತಿ ಆಗಿರುವ ಹಾಗೂ ಆಗಬೇಕಾಗಿರುವ ಕಾಮಗಾರಿಗಳನ್ನು ಪರಿಶೀಲಿಸಿ ಎಂದು ಸೂಚಿಸಿದರು.ಈ ಸಂದರ್ಭದಲ್ಲಿ ಪೌರಾಯುಕ್ತ ಮಹೇಂದ್ರ, ನಗರಸಭೆ ಮಾಜಿ ಅಧ್ಯಕ್ಷ ಪ್ರಶಾಂತ್, ಸದಸ್ಯರಾದ ವಾಸಿಲ್ ಅಲಿಖಾನ್, ಲಿಯಾಕತ್, ಸತೀಶ್, ಕೋಟೆ ಚಂದ್ರು, ಸುಮಾ ರವೀಶ್ ಇತರರಿದ್ದರು.
ಬಾಕ್ಸ್...ಎಲ್ಲೆಂದರಲ್ಲಿ ಕಸ ಎಸೆದರೆ ಎಫ್‌ಐಆರ್ ದಾಖಲಿಸಿ
ನಗರ ಪ್ರದೇಶದಲ್ಲಿ ಆಯ್ದ ಐದಾರು ಕಡೆ ರಸ್ತೆ ಬದಿ ಸಿಸಿ ಕ್ಯಾಮೆರಾ ಅಳವಡಿಸಿ, ರಸ್ತೆ ಬದಿಯಲ್ಲಿ ಕಸ ಹಾಕುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಖಡಕ್ ಸೂಚನೆ ನೀಡಿದರು.ನಗರ ಪ್ರದೇಶದಲ್ಲಿ ಕೋಳಿ ತಾಜ್ಯ ಸೇರಿದಂತೆ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಸ ತಂದು ಸುರಿಯುವ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಕಸ ಹಾಕುವವರು ವಿರುದ್ಧ ಪ್ರಕರಣ ದಾಖಲಿಸುವಂತೆ ತಾಕೀತು ಮಾಡಿದರು.
ಕಸದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಾಲೂಕಿನ ವಂದಾರಗುಪ್ಪೆ ಬಳಿ ವಿಲೇವಾರಿ ಘಟಕಕ್ಕೆ ಸ್ಥಳ ಗುರುತಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗ ಕ್ರಿಯಾಯೋಜನೆ ಸಿದ್ಧಪಡಿಸಿ. ಅದೇ ರೀತಿ ಕೆಲಸ ನಿರ್ವಹಿಸದ ಪೌರಕಾರ್ಮಿಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.ಪೊಟೋ19ಸಿಪಿಟಿ2:
ಚನ್ನಪಟ್ಟಣದಲ್ಲಿ ನಗರಸಭೆ ಸಭಾಂಗಣದಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು.