ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಕಳ್ಳರ ವದಂತಿಗೆ ಜನತೆ ಕಿವಿಗೊಡದೇ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ, ರಾತ್ರಿ ವೇಳೆ ಪ್ರದೇಶದ ಶಂಕಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ. ನಿಮ್ಮೊಂದಿಗೆ ಪೊಲೀಸ್ ಇಲಾಖೆ ಸದಾ ನೆರವಿಗೆ ಇರಲಿದೆ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಳ್ಳರು ಬರುತ್ತಾರೆ ಎಂದು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೆಲವರು ರಾತ್ರಿ ಕಾವಲು ಕಾಯುತ್ತಿರುವುದು ಬಡವಾಣೆ ನಿವಾಸಿಗಳನ್ನು ಆತಂಕಕ್ಕೆ ದೂಡಿದೆ. ಈ ನಿಟ್ಟಿನಲ್ಲಿ ಹಿರಿಯರು ಗಮನ ಹರಿಸಿ ಈ ರೀತಿಯಾಗದಂತೆ ನೋಡಿಕೊಳ್ಳಬೇಕು. ಔಷಧ ಅಂಗಡಿ ಹೊರತು ಪಡಿಸಿ ರಾತ್ರಿ ೧೦ಯೊಳಗೆ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಬೇಕು. ಅನುಮತಿ ಪಡೆಯದಿರುವ ಪಾನ್‌ಶಾಪ್‌ಗಳ ಬಗ್ಗೆ ಮಾಹಿತಿ ನೀಡುವಂತೆ ಪುರಸಭೆಗೆ ಪತ್ರ ಬರೆಯಲಾಗಿದೆ. ಯಾರೂ ಯಾವುದೇ ವದಂತಿ ನಂಬಬಾರದು. ಜನರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು. ರಾತ್ರಿ ವೇಳೆಯಲ್ಲಿ ನಮ್ಮ ಸಿಬ್ಬಂದಿ ಎಲ್ಲ ಬಡಾವಣೆಗಳಲ್ಲಿ ಸಂಚರಿಸುತ್ತಾರೆ. ಕಳ್ಳರ ಬಗ್ಗೆ ಗುಮಾನಿ ಕಂಡು ಬಂದರೆ ತಕ್ಷಣವೇ ಪೊಲೀಸ್‌ರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಇದುವರೆಗೂ ಆಗಿರುವ ಕಳ್ಳತನ ಕುರಿತು ತನಿಖೆ ನಡೆದಿದ್ದು, ಕಳ್ಳತನ ಮಾಡಿದವರನ್ನು ಖಂಡಿತ ಪತ್ತೆ ಮಾಡಲಾಗುವದು ಎಂದು ಹೇಳಿದರು.ಪೊಲೀಸ್ ಇನ್‌ಸ್ಪೆಕ್ಟರ್ ಗುರುಶಾಂತ ದಾಶ್ಯಾಳ ಮಾತನಾಡಿ, ಕಳ್ಳರ ಬಗ್ಗೆ ವದಂತಿ ಹರಡಿ ಜನತೆಯಲ್ಲಿ ಆತಂಕ ಮೂಡಿಸಬಾರದು. ಅಪರಿಚಿತರು ಮನೆ ಸುತ್ತ ಸುಳಿಯುತ್ತಿದ್ದರೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಮನೆಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಮನೆ ಸೇರಿದಂತೆ ಸುತ್ತಮುತ್ತ ವಿಶಾಲ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಅಕ್ಕ-ಪಕ್ಕದ ಮನೆಯವರಿಗೆ ನಿಮ್ಮ ಮೊಬೈಲ್ ಸಂಖ್ಯೆ ಕೊಡಬೇಕು. ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳಬೆಕು. ಕಳ್ಳತನ ನಡೆದರೆ ತಕ್ಷಣವೇ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದರು.ಪುರಸಭೆ ಸದಸ್ಯ ಅಶೋಕ ಹಾರಿವಾಳ ಮಾತನಾಡಿ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸುಸಜ್ಜಿತ ಸಿಸಿ ಕ್ಯಾಮರಾ ಅಳವಡಿಸಿದರೆ ಖಂಡಿತ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ರಾತ್ರಿ ೧೧ ಗಂಟೆಯ ನಂತರ ಕುಡಿದ ಮತ್ತಿನಲ್ಲಿ ಅಲೆದಾಡುವವರ ಮೇಲೆ ನಿಗಾ ವಹಿಸುವಂತೆ ತಿಳಿಸಿದರು.ಬಸವೇಶ್ವರ ಸೇವಾ ಸಮಿತಿಯ ಸದಸ್ಯ ಎಂ.ಜಿ.ಆದಿಗೊಂಡ ಮಾತನಾಡಿ, ರಾತ್ರಿ ೧ ಗಂಟೆಯಿಂದ ಬೆಳಗಿನ ಜಾವ ೪ ಗಂಟೆಯೊಳಗೆ ಪೊಲೀಸ್‌ರು ಹೆಚ್ಚು ಗಸ್ತು ತಿರುಗುವಂತಾಗಬೇಕು. ಕಳ್ಳತನ ಹಾವಳಿ ತಡೆಗಟ್ಟುವಲ್ಲಿ ಇದು ಸಹಕಾರಿಯಾಗುತ್ತದೆ. ಕಳ್ಳತನ ಪ್ರಕರಣಗಳು ನಡೆಯದಂತೆ ಪೊಲೀಸ್ ಅಧಿಕಾರಿಗಳು ನಿಯಂತ್ರಿಸಬೇಕು ಎಂದು ಹೇಳಿದರು.ಸಭೆಯಲ್ಲಿ ಸುರೇಶಗೌಡ ಪಾಟೀಲ, ಬಸಣ್ಣ ದೇಸಾಯಿ, ನೀಲಪ್ಪ ನಾಯಕ, ಸಂಗಮೇಶ ಕಾಳಹಸ್ತೇಶ್ವರಮಠ, ಸಂತೋಷ ಚಿಂಚೋಳಿ, ಸುರೇಶ ನಾಯಕ, ಲಕ್ಷ್ಮಣ ಪವಾರ, ಡಾ.ಬಸವರಾಜ ಚವ್ಹಾಣ, ತಮ್ಮಣ್ಣ ಬಡಿಗೇರ, ಶಿವಾನಂದ ಬೆಲ್ಲದ, ಸತೀಶ ಕ್ವಾಟಿ, ನಾಗರಾಜ ಸಜ್ಜನ, ಎಸ್.ಬಿ.ಮುತ್ತಗಿ, ಬಸವರಾಜ ಚನಗೊಂಡ, ಮಹಾಂತೇಶ ಚಕ್ರವರ್ತಿ, ರುಕ್ಮಿಣಿ ರಾಠೋಡ, ಗಂಗೂಬಾಯಿ ಕುಂಬಾರ, ಈರಮ್ಮ ಕಲ್ಯಾಣಿ, ನೀಲಮ್ಮ ಜಲಪುರ ಸೇರಿ ಹಲವರು ಭಾಗವಹಿಸಿದ್ದರು.