ಜನ ಸಾಮಾನ್ಯರನ್ನು ಸರ್ಕಾರಿ ಕಚೇರಿಗೆ ಅಲೆದಾಡಿಸದಿರಿ

| Published : Jun 29 2024, 12:42 AM IST

ಜನ ಸಾಮಾನ್ಯರನ್ನು ಸರ್ಕಾರಿ ಕಚೇರಿಗೆ ಅಲೆದಾಡಿಸದಿರಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡಲು ಬಹಳ ವಿಳಂಬವಾಗುತ್ತಿದೆ. ಅಧಿಕಾರಿಗಳು ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಹಸೀಲ್ದಾರ್ ವೈ.ಎಂ.ರೇಣುಕುಮಾರ್‌ಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡಲು ಬಹಳ ವಿಳಂಬವಾಗುತ್ತಿದೆ. ಅಧಿಕಾರಿಗಳು ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಹಸೀಲ್ದಾರ್ ವೈ.ಎಂ.ರೇಣುಕುಮಾರ್‌ಗೆ ಸೂಚನೆ ನೀಡಿದರು. ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಿನ ಜಿಲ್ಲಾಧಿಕಾರಿಗಳು ಯಾವುದೇ ಸಮಸ್ಯೆಗಳಿಗೂ ಶೀಘ್ರವೇ ಸ್ಪಂದಿಸುತ್ತಾರೆ. ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ತುಮಕೂರಿಗೆ ಬರುವುದನ್ನು ತಪ್ಪಿಸಲು ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಜನರು ಇಂತಹ ಸಭೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳನ್ನು ಸಾಧ್ಯವಾದಷ್ಟು ಇಲ್ಲಿಯೇ ವಿಲೇವಾರಿ ಮಾಡಬೇಕು. ಸಾಧ್ಯವಾಗದಿದ್ದರೆ ಮೇಲಾಧಿಕಾರಿಗಳಿಗೆ ನೀಡಿ. ಆದರೆ ಅರ್ಜಿಗಳು ಕೊಳೆಯುವಂತೆ ಮಾಡಬೇಡಿ ಎಂದು ಸೂಚಿಸಿದರು. ರಾಜ್ಯದಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ. ತಾಲೂಕಿನಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗದಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿನ ಚರಂಡಿ ಗ್ರಾಮ ಪಂಚಾಯಿತಿಗಳಿಂದ ಸ್ವಚ್ಚಗೊಳಿಸಬೇಕು. ತಾಲೂಕಿನಲ್ಲಿ ಆಸ್ಪತ್ರೆಗಳಿದ್ದರೂ ವೈದ್ಯರು ಕೊರೆತೆ ಇದೆ. ಡೆಂಘೀ, ಸಂಕ್ರಾಮಿಕ ರೋಗಗಳು ಹೆಚ್ಚಾದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿದ್ದರೆ ರೋಗಿಗಳು ಕಷ್ಟ ಅನುಭವಿಸುವಂತಾಗಲಿದೆ. ಆದ್ದರಿಂದ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ವೈದ್ಯರನ್ನು ತುಂಬಬೇಕು. ಈ ಬಗ್ಗೆ ಆರೋಗ್ಯ ಸಚಿವರಿಗೂ ಪತ್ರ ಬರೆದು ಮನವಿ ಮಾಡುವುದಾಗಿ ಹೇಳಿದರು. ನರೇಗಾ ಹಣ ನೀಡಿ:

ತಾಲೂಕಿನ ಹಲವಾರು ಗುತ್ತಿಗೆದಾರರು ಸಾಲ ಮಾಡಿ ನರೇಗಾ ಕಾಮಗಾರಿ ಮಾಡಿದ್ದಾರೆ. ಕೆಲವರಿಗೆ ಹಣ ಬಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಕೂಡಲೇ ಹಣ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಮಾಡಿದರು. ನಮ್ಮ ರಾಜ್ಯದಲ್ಲಿ ನರೇಗ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಪಕ್ಕದ ರಾಜ್ಯಗಳಲ್ಲಿ ನರೇಗಾ ಹಣದಲ್ಲಿ ಡ್ಯಾಮ್, ಚಾನಲ್, ಸಿಸಿ.ರಸ್ತೆ, ಚರಂಡಿ ಕಾಮಗಾರಿಗಳಿಗೂ ಬಳಸಿಕೊಂಡು ಅಭಿವೃದ್ದಿ ಮಾಡುತ್ತಿದ್ದಾರೆ. ನಮ್ಮ ತಾಲೂಕಿನ ಗ್ರಾಮಗಳಲ್ಲಿ ರಸ್ತೆಗಳು, ಸಿ.ಸಿ ರಸ್ತೆ, ಬಾಕ್ಸ್ ಚರಂಡಿಗಳನ್ನು ಮಾಡಲು ಅವಕಾಶ ಕಲಿಸಬೇಕು ಎಂದು ಹೇಳಿದರು. ತಾಲೂಕಿನಲ್ಲಿ ಇಸ್ಪೀಟ್ ದಂದೆ ಹೆಚ್ಛಾಗಿ ನಡೆಯುತ್ತಿದ್ದರೂ ಸಹ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಹಾಡು ಹಗಲೇ ರಾಜರೋಷವಾಗಿ ಇಸ್ಪೀಟ್ ಆಡುತ್ತಿದ್ದಾರೆ. ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು. ಇಸ್ಪೀಟ್ ಆಟದಿಂದ ಯುವಕರು, ಕೆಲವರು ದಾರಿ ತಪ್ಪುತ್ತಿದ್ದಾರೆ. ತಾಲೂಕಿನಲ್ಲಿ ಕಳ್ಳತನ ಹೆಚ್ಚಾಗಿದೆ ಎಂದು ದೂರಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ತಾಲೂಕಿನ ೨೭ ಗ್ರಾಮ ಪಂಚಾಯಿತಿಗಳಲ್ಲಿ ಶುದ್ದ ಕುಡಿಯುವ ನೀರು ನೀಡಬೇಕು. ಯಾವುದೇ ಸಮಸ್ಯೆಗಳಿದ್ದರು ನಿಮ್ಮ ಹಂತದಲ್ಲಿಯೇ ಬಗ್ಗೆಹರಿಸಬೇಕು ಎಂದು ಪಿಡಿಓಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಕೃಷಿ ಚಟುವಟಿಕೆಗಳಿಗೆ ಬೇಕಾದ ಬೀಜ, ಗೊಬ್ಬರಗಳನ್ನು ಕೃಷಿ ಇಲಾಖೆಯಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಕಳೆದ ಬಾರಿ ಬೆಳೆ ವಿಮೆ ಮಾಡಿಸಿದ್ದ ೭೦ ಸಾವಿರ ರೈತರಿಗೆ ೭೦ ಕೋಟಿ ರೂ ರೈತರ ಖಾತೆಗೆ ಜಮಾ ಆಗಿದೆ. ಈ ಬಾರಿ ೨ ಲಕ್ಷ ರೈತರಿಂದ ಬೆಳೆ ವಿಮೆ ಮಾಡಿಸುವ ಗುರಿ ಹೊಂದಲಾಗಿದೆ. ಹಳ್ಳಿಗಳಲ್ಲಿ ಕ್ಯಾಂಪ್ ಗಳನ್ನು ಮಾಡಿ ಅರಿವು ಮಾಡಲಾಗುತ್ತಿದೆ. ರೈತರು ಬೆಳೆ ವಿಮೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಅರ್ಜಿ ನೀಡಲು ಕೆಲ ಕಾಲ ನೂಕು ನುಗ್ಗಲು ಉಂಟಾಯಿತು. ಪೋಲೀಸರು ಸರತಿ ಸಾಲು ಮಾಡಿಸಿ ಸುಗಮವಾಗಿ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಅರ್ಜಿ ನೀಡುವಂತೆ ಅನುವು ಮಾಡಿಕೊಟ್ಟರು. ತಾಲೂಕಿನಲ್ಲಿ ೨೫೬ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಕಂದಾಯ ಇಲಾಖೆಯದೇ ಅತೀ ಹೆಚ್ಚು ೧೭೨ ಅರ್ಜಿ ಸ್ವೀಕರಿಸಲಾಗಿದೆ. ಈ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಐಪೋನ್ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಅಡಿಷನಲ್ ಎಸ್.ಪಿ. ಅಬ್ದುಲ್ ಖಾದರ್, ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಇ.ಓ ಶಿವರಾಜಯ್ಯ, ಬಿಇಓ ಸೋಮಶೇಖರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಯಜಮಾನ್ ಮಹೇಶ್, ಎನ್.ಆರ್.ಸುರೇಶ್, ಚಿದಾನಂದ್, ಅಂಜನ್ ಕುಮಾರ್, ಮಧು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು. ಬಿಇಓ ಸೋಮಶೇಖರ್ ಸ್ವಾಗತಿಸಿದರು. ಶಿಕ್ಷಕಿ ಪ್ರಮೀಳಕುಮಾರಿ ನಿರೂಪಿಸಿದರು. ಶಾಲಾ ಮಕ್ಕಳಿಂದ ಪ್ರಾರ್ಥನೆ ಮತ್ತು ನಾಡಗೀತೆಯನ್ನು ಹಾಡಿಸಲಾಯಿತು. ಶಿಕ್ಷಕ ರಮೇಶ್ ರವರು ರೈತಗೀತೆ ಹಾಡಿದರು.