ಒಕ್ಕಲೆಬ್ಬಿಸಬೇಡಿ, ರೈತರ ಬದುಕಿನೊಂದಿಗೆ ಚೆಲ್ಲಾಟ ಆಡಬೇಡಿ

| Published : Jan 18 2025, 12:46 AM IST

ಸಾರಾಂಶ

ಅರಣ್ಯ ಭೂಮಿ ಸಾಗುವಳಿ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಹಾಗೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ನಗರದ ಹೊರವಲಯದ ಜಿಲ್ಲಾ ಪಂಚಾಯಿತಿ ಕಚೇರಿ ಸೇರಿದಂತೆ ಜಗಳೂರು ತಾಲೂಕಿನ ವಿವಿಧೆಡೆ ರೈತರು ಶುಕ್ರವಾರ ಪ್ರತಿಭಟಿಸಿದ್ದು, ಮುಂಜಾಗ್ರತೆಯಾಗಿ ಪೊಲೀಸರು ನೂರಾರು ಜನರನ್ನು ವಶಕ್ಕೆ ಪಡೆದಿದ್ದಾರೆ.

- ಅರಣ್ಯ ಕಾಯ್ದೆ ಉಲ್ಲಂಘನೆ ವಿರುದ್ಧ ದೂರು ದಾಖಲಿಸಲು ಹುಚ್ಚವ್ವನಹಳ್ಳಿ ಮಂಜುನಾಥ ಆಗ್ರಹ । ಪ್ರತಿಭಟನೆ ವೇಳೆ ಹರಿದುಹೋದ ಹಲವರ ಬಟ್ಟೆ

- ದಾವಣಗೆರೆ ಜಿಪಂ ಎದುರು, ಜಗಳೂರು ತಾಲೂಕಿನ ವಿವಿಧೆಡೆ ಪ್ರತಿಭಟನೆ । ಸಂಜೆ ಮತ್ತೆ ಗಡಿಮಾಕುಂಟೆ ಬಳಿ ಪ್ರತಿಭಟಿಸಿದ ಅನ್ನದಾತರು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಅರಣ್ಯ ಭೂಮಿ ಸಾಗುವಳಿ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಹಾಗೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ನಗರದ ಹೊರವಲಯದ ಜಿಲ್ಲಾ ಪಂಚಾಯಿತಿ ಕಚೇರಿ ಸೇರಿದಂತೆ ಜಗಳೂರು ತಾಲೂಕಿನ ವಿವಿಧೆಡೆ ರೈತರು ಶುಕ್ರವಾರ ಪ್ರತಿಭಟಿಸಿದ್ದು, ಮುಂಜಾಗ್ರತೆಯಾಗಿ ಪೊಲೀಸರು ನೂರಾರು ಜನರನ್ನು ವಶಕ್ಕೆ ಪಡೆದರು.

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಜಿಪಂ ಕಚೇರಿ ಮುಂಭಾಗ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಮುಖಂಡರು, ರೈತರು, ಸಾಗುವಳಿದಾರರು ಹೆದ್ದಾರಿ ತಡೆಗೆ ಮುಂದಾದರು. ಈ ವೇಳೆ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಮಧ್ಯೆ ತೀವ್ರ ವಾಕ್ಸಮರ, ನೂಕಾಟ, ತಳ್ಳಾಟದಲ್ಲಿ ಹಲವರ ಬಟ್ಟೆಗಳು ಹರಿದುಹೋದವು. ಮುಂಜಾಗ್ರತೆಯಾಗಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು, ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದು, ಸಂಜೆ ಬಿಡುಡೆಗೊಳಿಸಿದರು. ಸಾಯಂಕಾಲ ಮತ್ತೆ ಜಗಳೂರು ತಾಲೂಕಿನ ಗಡಿಮಾಕುಂಟೆ ಬಳಿ ರೈತರು ಪ್ರತಿಭಟನೆ ಶುರು ಮಾಡುತ್ತಿದ್ದಂತೆ ಮಂಜುನಾಥ ಇತರರು ಅಲ್ಲಿಗೆ ತೆರಳಿದರು.

ದೂರು ದಾಖಲಿಸಬೇಕು:

ಇದೇ ವೇಳೆ ಮಾತನಾಡಿದ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಜಗಳೂರು ತಾಲೂಕಿನ ಗೌಡಗೊಂಡನಹಳ್ಳಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಟ್ರಂಚ್ ನಿರ್ಮಿಸುತ್ತಿದ್ದಾರೆ. ಆಗ ಇಲಾಖೆ ವಿರುದ್ಧ ಹೋರಾಟ ಮಾಡಿದ 30ಕ್ಕೂ ಅಧಿಕ ರೈತರನ್ನು ಬಂಧಿಸಿ, ಗಡಿಮಾಕುಂಟೆ ಪೊಲೀಸ್ ಠಾಣೆಯಲ್ಲಿಟ್ಟಿದ್ದಾರೆ. ರೈತರ ಬಂಧನ ವಿರೋಧಿಸಿ ಕಾನನಕಟ್ಟೆ ಬಳಿ ಹೆದ್ದಾರಿ ತಡೆ ನಡೆಸಿದ್ದ ರೈತರನ್ನೂ ವಶಕ್ಕೆ ಪಡೆದು, ಗಡಿಮಾಕುಂಟೆ ಠಾಣೆಗೆ ಕರೆದೊಯ್ಯಲಾಗಿದೆ. ಅರಣ್ಯ ಇಲಾಖೆಯವರ ವಿರುದ್ಧ ದೂರು ದಾಖಲಿಸದ ಹೊರತು, ನಾವ್ಯಾರೂ ವಾಪಸ್‌ ಹೋಗುವುದಿಲ್ಲ ಎಂದು ಹೇಳಿದರು.

ರೈತರಿಗೆ ಅನ್ಯಾಯ:

ಅರಣ್ಯ ಕಾಯ್ದೆ ಉಲ್ಲಂಘಿಸಿ ರೈತರನ್ನು ಒಕ್ಕಲೆಬ್ಬಿಸಲಾಗಿದೆ. 2006, 2007, 2008ರ ಕಾಯ್ದೆ ಪ್ರಕಾರ 2005ಕ್ಕಿಂತ ಹಿಂದೆ ಸಾಗುವಳಿ ಮಾಡಿದ ರೈತರನ್ನು ಒಕ್ಕಲೆಬ್ಬಿಸುವಂತಿಲ್ಲ. ಆದರೆ, ಬಳ್ಳಾರಿಯಲ್ಲಿ ಗಣಿಗಾರಿಕೆ ಕಂಪನಿಗೆ ನೆಡುತೋಪು ನಿರ್ಮಿಸಲು 5 ವರ್ಷಗಳ ಹಿಂದೆ 20 ಎಕರೆ ಭೂಮಿ ನೀಡಲಾಗಿದೆ. ಕಳೆದ 6 ದಶಕದಿಂದಲೂ ರೈತರು ಇದೇ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಈ ಹಿಂದೆ ಇದ್ದ ಕಂದಾಯ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಆ ಜಾಗದಲ್ಲಿ ಯಾರೂ ಸಾಗುವಳಿ ಮಾಡುತ್ತಿಲ್ಲ ಎಂಬುದಾಗಿ ಸುಳ್ಳು ವರದಿ ನೀಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಇಲಾಖೆ ಪರ ಆದೇಶವೆಂದು ಆಕ್ರೋಶ:

ಅದೇ ವರದಿ ಆಧರಿಸಿ ಅರಣ್ಯ ಇಲಾಖೆ ನೆಡು ತೋಪು ನಿರ್ಮಾಣಕ್ಕೆ ಕಂಪನಿಗೆ ನೀಡಿದೆ. ಹೀಗೆ ಅರಣ್ಯ ಇಲಾಖೆ ನೆಡುತೋಪು ನಿರ್ಮಾಣಕ್ಕೆ ಭೂಮಿ ನೀಡುತ್ತಿದ್ದಂತೆ ರೈತರು ಅರಣ್ಯ ಭೂಮಿ ಸಾಗುವಳಿ ಕಾಯ್ದೆ ಅನ್ವಯ ಹಕ್ಕು ಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಕಾನೂನಿಡಿ ನಾವು ಭೂಮಿ ಹೊಂದಲು ಅರ್ಹರಿದ್ದೇವೆ. ಹಕ್ಕುಪತ್ರ ನೀಡುವಂತೆ ಮನವಿ ಮಾಡಿದ್ದಾರೆ. ಈ ಅರ್ಜಿಗಳು ಉಪವಿಭಾಗಾಧಿಕಾರಿ ಮುಂದೆ ಪರಿಶೀಲನೆ ಹಂತದಲ್ಲಿವೆ. ಈ ಹಂತದಲ್ಲಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳು ಸುಮೊಟೋ ಕೇಸು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಪ್ರಕರಣ ಕೊಂಡೊಯ್ದು ಇಲಾಖೆ ಪರ ಆದೇಶ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಬಳ್ಳಾರಿಯ ಪಿಸಿಎಫ್‌ನಲ್ಲಿ ಮೇಲ್ಮನವಿ ಹಾಕಲಾಗಿದೆ. ಪ್ರಕರಣ ಇನ್ನೂ ವಿಚಾರಣೆಗೆ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪೊಲೀಸ್ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಪೊಲೀಸರನ್ನು ಕರೆದೊಯ್ದು ದಬ್ಬಾಳಿಕೆ ಮಾಡಿ, ಅಲ್ಲಿ ಟ್ರಂಚ್ ನಿರ್ಮಾಣ ಮಾಡುತ್ತಿದ್ದಾರೆ. ಸಾಗುವಳಿ ಚೀಟಿಗೆ ಅರ್ಜಿ ಹಾಕಿದ ರೈತರಿಗೆ ಭೂಮಿ ಮಂಜೂರು ಮಾಡಬೇಕು. ಇಲ್ಲವೇ ಅರ್ಜಿ ತಿರಸ್ಕರಿಸಬೇಕು. ಎರಡನ್ನೂ ಮಾಡದೇ ಕಾಲಹರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಭೂಮಿ ಕಾಯ್ದೆ ಪ್ರಕಾರ ಅರ್ಜಿ ವಿಲೇವಾರಿಯಾಗದ ಹೊರತು, ಒಕ್ಕಲೆಬ್ಬಿಸುವಂತಿಲ್ಲ. ಹೊಸದಾಗಿ ಸರಹದ್ದು ಗುರುತಿಸುವಂತಿಲ್ಲ. ಆದರೂ, ನಿಯಮ ಮೀರಿ ಅರಣ್ಯಾಧಿಕಾರಿಗಳು ಟ್ರಂಚ್ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ನಗರ ಸೇರಿದಂತೆ ಜಿಲ್ಲೆಯ 3 ಸ್ಥಳಗಳಲ್ಲಿ ಏಕಕಾಲಕ್ಕೆ ಹೋರಾಟ ನಡೆಸುತ್ತಿದ್ದೇವೆ. ಈಗ ರೈತರನ್ನು ಬಂಧಿಸಿಟ್ಟಿರುವ ಗಡಿಮಾಕುಂಟೆ ಪೊಲೀಸ್ ಠಾಣೆಯಿಂದ ಪಾದಯಾತ್ರೆ ಸೇರಿದಂತೆ ವಿವಿಧ ಚಳವಳಿಗಳನ್ನು ನಿರಂತರ ಆರಂಭಿಸಲಾಗುವುದು. ಇಲಾಖೆ ಅಳವಡಿಸಿದ ಟ್ರಂಚ್ ಗಳನ್ನು ಮುಚ್ಚುವ ಕೆಲಸ ಮಾಡುತ್ತೇವೆ ಎಂದು ಮಂಜುನಾಥ ಎಚ್ಚರಿಸಿದರು.

ಸಂಘದ ಮುಖಂಡರಾದ ಯಲೋದಹಳ್ಳಿ ರವಿಕುಮಾರ, ಕೊಡಗನೂರು ತಿಮ್ಮಣ್ಣ, ಹೂವಿನಮಡು ನಾಗರಾಜ, ಶಿರಗಾನಹಳ್ಳಿ ಪರಶುರಾಮ, ಗುಮ್ಮನೂರು ರುದ್ರೇಶ, ಕೋಗಲೂರು ಕುಮಾರ, ಆಲೂರು ಪರಶುರಾಮ, ಹುಚ್ಚವ್ವನಹಳ್ಳಿ ಪ್ರಕಾಶ, ಭೀಮಣ್ಣ, ಕುಕ್ಕವಾಡ ಬಸವರಾಜ, ಗಂಡುಗಲಿ, ಇಮಾಂ ಸಾಬ್, ಸುರೇಶ ನಾಯ್ಕ, ಮೋಹನ ನಾಯ್ಕ,ಕೃಷ್ಣಮೂರ್ತಿ, ಸ್ವಾಮಿನಾಯ್ಕ ಸೇರಿದಂತೆ 50ಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿದ್ದರು. ಕವಾಯಿತು ಮೈದಾನದಿಂದ ರೈತರನ್ನು, ರೈತ ಮುಖಂಡರನ್ನು ಬಿಡುಗಡೆ ಮಾಡುತ್ತಿದ್ದಂತೆ ಮತ್ತೆ ಮುಖಂಡರು ಗಡಿ ಮಾಕುಂಟೆಗೆ ತೆರಳಿ, ಪ್ರತಿಭಟನೆಗಿಳಿದರು.

- - - - (ಫೋಟೋ ಬರಲಿವೆ).