ಕನ್ನಡಪ್ರಭ ವಾರ್ತೆ ಮಂಡ್ಯ

ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದರೂ ಕೂಡ ಜ್ಞಾನದ ಅರಿವಿರಬೇಕು. ಅದನ್ನು ದುರುಪಯೋಗಿಸಿಕೊಳ್ಳುವುದಕ್ಕಿಂತ ಉಪಯೋಗಿಸಿಕೊಳ್ಳುವ ಅರಿವು ಇರಬೇಕು. ಪ್ರತಿನಿತ್ಯ ಮಕ್ಕಳಿಗೆ ತಾಯಂದಿರು ಸಂಸ್ಕಾರವನ್ನು ಕಲಿಸುವುದು ಒಳ್ಳೆಯದು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಶಿವಳ್ಳಿ ಗ್ರಾಮದ ಶ್ರೀಮಾರಮ್ಮ ದೇವಿಯ ನೂತನ ದೇವಾಲಯದ ಮರುಪರ ಕಾರ್ಯಕ್ರಮ ಹಾಗೂ ಸತ್ಸಂಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಗುಲಕ್ಕೆ ವ್ಯಾವಹಾರಿಕ ನಿರೀಕ್ಷೆಯಲ್ಲಿ ಹೋದಾಗ ಆ ಭಾವದ ಅನುಭವವೇ ಆಗುತ್ತದೆ. ಭಕ್ತಿಯು ಗೌಣವಾಗುತ್ತದೆ. ಪ್ರತಿಯೊಬ್ಬರೂ ಇಂದ್ರೀಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ದೇವಸ್ಥಾನಗಳು ಜ್ಞಾನ, ಭಕ್ತಿ ಕೊಡುತ್ತವೆ. ಯಾವಾಗ ಯಾವುದನ್ನು ಉಪಯೋಗಿಸಬೇಕು ಎನ್ನುವುದನ್ನು ಸರಿಯಾಗಿ ಉಪಯೋಗಿಸಲು ನಮ್ಮ ಬದುಕನ್ನು ಸರಿಯಾಗಿ ಬೆಳಗಿಸಲು ಹಿರಿಯರು ಕೊಟ್ಟು ಹೋಗಿರುವ ಪರಂಪರೆಯನ್ನು ಮುಂದುವರಿಸೋಣ ಎಂದರು.

ಕಳೆದ ೪೮ ದಿನಗಳ ಹಿಂದೆ ಮಾರಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಶ್ರದ್ಧೆ ಭಕ್ತಿಯಿಂದ ಉದ್ಘಾಟನೆ ಮಾಡಿದ್ದೀರಿ. ಭಕ್ತಿಯ ದೇಗುಲ, ಸೇವೆ, ಜ್ಞಾನದ ನುಡಿಗಳು ಸೇರಿದರೆ ಶ್ರೇಷ್ಠವಾಗುತ್ತದೆ ಎಂದರು.


ನಮ್ಮ ದೇಶದ ಶಕ್ತಿ ಆಧ್ಯಾತ್ಮಿಕತೆ, ತ್ಯಾಗ, ವ್ಯಕ್ತಿಗೆ ಎಲ್ಲದರಿಂದ ಮುಕ್ತಿ ಸಿಗುವುದು ತ್ಯಾಗದಿಂದ. ಭಗವಂತನ ಕಡೆ ಬಂದು ತ್ಯಾಗ ಮಾಡಬೇಕು. ನಮ್ಮೊಳಗಿರುವ ಗಲೀಜನ್ನು ತ್ಯಾಗ ಮಾಡಬೇಕು. ಗುರುವಿನ ಮೇಲೆ ವಿಶ್ವಾಸ ಇಡುವುದೇ ತ್ಯಾಗ ಎಂದ ಅವರು, ಶಿವಳ್ಳಿ ಗ್ರಾಮ ಭಕ್ತರು ತುಂಬಿರುವ ಗ್ರಾಮವಾಗಿದ್ದು ಭೈರವನ ಪೂರ್ಣ ಭಕ್ತರು, ಜೋಗಿಗಳು ಇಲ್ಲಿ ಹೆಚ್ಚು ಇದ್ದಾರೆ ಎಂದರು.

ಆಧುನಿಕ ಯುಗದಲ್ಲಿ ನಾವು ಆಧುನಿಕ ಸಲಕರಣೆ ಸವಲತ್ತುಗಳನ್ನು ಉಪಯೋಗಿಸಿಕೊಂಡು ಅಂತರಂಗವನ್ನು ಮರೆತು, ಆಧುನಿಕವಾದುದನ್ನ ಒಪ್ಪಿಕೊಂಡು ಸತ್ಸಂಗದ ಮೂಲಕ ವಿವೇಕ ಬರಬೇಕು. ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಜೋಗಿಗಳ ಸಮಾವೇಶವನ್ನು ಮಾಡಲಾಗುವುದು. ಅದೇ ರೀತಿ ಮುಂದಿನ ತಿಂಗಳು ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಭವನ ಉದ್ಘಾಟನೆ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ತಾವುಗಳು ಭಾಗವಹಿಸಬೇಕು ಎಂದರು.

ಆದಿಚುಂಚನಗಿರಿ ಶ್ರೀಕ್ಷೇತ್ರದ ವಿವಿಧ ಶಾಖಾ ಮಠಗಳ ಯತಿಗಳಾದ ಶ್ರೀ ಪುರುಷೋತ್ತಮಾನಂದನಾಥಸ್ವಾಮೀಜಿ, ಶ್ರೀ ಸಾಯಿನಾಥನಂದಸ್ವಾಮೀಜಿ, ಶ್ರೀ ಸತ್‌ಕೀರ್ತಿನಂದನಾಥ ಸ್ವಾಮೀಜಿ, ಶ್ರೀ ಶೈಲ ಸ್ವಾಮೀಜಿ, ಮುಖಂಡರಾದ ಜವರೇಗೌಡ ಹೇಮಂತ್‌ಗೌಡ, ಲಕ್ಷ್ಮಣ್ ಜಲೇಂದ್ರ, ಶೇಖರ್, ಬೋರೇಗೌಡ, ಸುರೇಶ್ ಸೇರಿದಂತೆ ಇತರರಿದ್ದರು.