ಕಣ್ಣಿನ ರಕ್ಷಣೆ ಬಗ್ಗೆ ನಿರ್ಲಕ್ಷ್ಯ ಬೇಡ: ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ

| Published : Jan 03 2025, 12:30 AM IST

ಸಾರಾಂಶ

ಬಹಳಷ್ಟು ಜನ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರಿದ್ದಾರೆ. ದೃಷ್ಟಿಯಿದ್ದವರು ಕಣ್ಣಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅವಶ್ಯ.

ಹಳಿಯಾಳ: ಕಣ್ಣಿನ ರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ಬೇಡ. ತನ್ನ ಸಂಸ್ಥಾಪನೆಯ 20ನೇ ವರ್ಷಾಚರಣೆ ಮಾಡುತ್ತಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯು ಎಲ್ಲ ಸಮುದಾಯದ ಜನರಿಗೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿ ಉಚಿತವಾಗಿ ಸೌಲಭ್ಯಗಳನ್ನು ನೀಡುತ್ತಿದೆ ಎಂದು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ತಿಳಿಸಿದರು.

ಗುರುವಾರ ಪಟ್ಟಣದ ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ಸಭಾಭವನದಲ್ಲಿ ಸಂಸ್ಥೆಯ 20ನೇ ವರ್ಷದ ಸಂಸ್ಥಾಪನೆಯ ಸವಿನೆನಪಿಗಾಗಿ ಆಯೋಜಿಸಿದ್ದ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಬಹಳಷ್ಟು ಜನ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರಿದ್ದಾರೆ. ದೃಷ್ಟಿಯಿದ್ದವರು ಕಣ್ಣಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅವಶ್ಯ ಎಂದರು.

ಅಧ್ಯಕ್ಷತೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ನಿರ್ದೇಶಕ ಪ್ರಶಾಂತ ಬಡ್ಡಿ ವಹಿಸಿದ್ದರು. ಶಿರಸಿಯ ರೋಟರಿ ಆಸ್ಪತ್ರೆಯ ಸಂಯೋಜಕ ಗಿರೀಶ ಧಾರೇಶ್ವರ, ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಮಾತನಾಡಿದರು.

ಶಿಬಿರದಲ್ಲಿ ಶಿರಸಿಯ ರೋಟರಿ ಆಸ್ಪತ್ರೆಯ ನೇತ್ರತಜ್ಞ ಡಾ. ಎ.ಜಿ. ವಸ್ತ್ರದ, ನೇತ್ರ ತಾಂತ್ರಿಕ ತಾಜುದ್ದಿನ್, ಆಪ್ತ ಸಮಾಲೋಚಕ ಮಾರುತಿ ಅರಳಿಕಟ್ಟಿ, ಸಮುದಾಯ ಆರೋಗ್ಯಾಧಿಕಾರಿ ಮೆಹಬೂಬ ಸುಬಾನಿ, ಶಿರಸಿ ತಾಲೂಕು ಆಸ್ಪತ್ರೆ, ರೋಟರಿ ಆಸ್ಪತ್ರೆಯ ಸಿಬ್ಬಂದಿ, ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕ ವಿಷ್ಣು ಮಡಿವಾಳ, ಉಳವಯ್ಯ ಬೆಂಡಿಗೇರಿ ಮತ್ತು ಸಂತೋಷ ಸಿದ್ನೇಕೊಪ್ಪ ಇದ್ದರು.ಸುಮಾರು 117 ಜನರಿಗೆ ಕಣ್ಣಿನ ಪೊರೆ ತಪಾಸಣೆ ಮಾಡಲಾಯಿತು. ಈ ಪೈಕಿ 45 ಫಲಾನುಭವಿಗಳನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ವಾರ್ಡನ್‌ ತೇಜೋವಧೆ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಕಾರವಾರ: ಹಳಿಯಾಳ ತಾಲೂಕಿನ ಸಾಂಬ್ರಾಣಿಯ ಬಾಲಕರ ವಸತಿ ನಿಲಯದ ವಾರ್ಡನ್ ವಿಜಯಕುಮಾರ ಮೇಲೆ ಉದ್ದೇಶಪೂರ್ವಕವಾಗಿ ಕೆಲವರು ನಿಂದನೆ, ಆರೋಪ ಮಾಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಾಜಿ ಸೈನಿಕರ ಸಂಘದ ಹಳಿಯಾಳ ತಾಲೂಕು ಅಧ್ಯಕ್ಷ ವಿಠಲ್ ಜುಂಜವಾಡಕರ್ ಆಗ್ರಹಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯಕುಮಾರ ಮಾಜಿ ಸೈನಿಕರಾಗಿದ್ದಾರೆ. ೧೭ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಮೇಲಿನ ದ್ವೇಷದಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಆರೋಪ ಮಾಡಿ ಮಹಿಳೆಯೊಬ್ಬರು ದೂರು ನೀಡಿದ್ದು, ವಿಚಾರಣೆ ನಡೆಸಿದ ಹಳಿಯಾಳ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆಪಾದನೆ ಸತ್ಯಕ್ಕೆ ದೂರವಿದೆ ಎಂದು ವರದಿ ನೀಡಿದ್ದಾರೆ. ಆದರೂ ಕೆಲವು ಸಂಘಟನೆಗಳು ವಿಜಯಕುಮಾರ ಹಾಗೂ ಅವರ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಿ ಸುಳ್ಳು ಆರೋಪ, ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಂಘದ ಖಜಾಂಚಿ ಸುರೇಶ ಪಟೇಕರ್, ಮಾಜಿ ಸೈನಿಕರಾದ ಅಶೋಕ ಮಿರಾಶಿ, ಶ್ರೀಧರ, ಶಿವಾಜಿ ಜಾಧವ್, ಮಹೇಶ್, ತಾನಾಜಿ ಮುಂತಾದವರು ಇದ್ದರು.