ಗ್ಯಾರಂಟಿಯನ್ನು ವಿರೋಧಿಸೋಲ್ಲ, ಸ್ವಾಗತಿಸುವೆ

| Published : Feb 11 2024, 01:48 AM IST

ಸಾರಾಂಶ

ಗ್ಯಾರಂಟಿ ಯೋಜನೆಗಳನ್ನು ನಾನು ವಿರೋಧಿಸುವುದಿಲ್ಲ. ಸ್ವಾಗತಿಸುತ್ತೇನೆ. ಆದರೆ, ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಯೂ ಮುಖ್ಯ ಎನ್ನುವುದನ್ನು ಸರ್ಕಾರ ಮನಗಾಣಬೇಕಿದೆ. ಏಕೆಂದರೆ, ಕೆ.ಆರ್.ಪೇಟೆಗೆ ಈವರೆಗೆ ಸಿಕ್ಕಿರುವ ಅನುದಾನ ಕೇವಲ 2 ಕೋಟಿ ರು. ಮಾತ್ರ ಎಂದು ಸಚಿವ ಚಲುವರಾಯಸ್ವಾಮಿ ಎದುರೇ ಜೆಡಿಎಸ್ ಶಾಸಕ ಎಚ್ .ಟಿ.ಮಂಜು ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಗ್ಯಾರಂಟಿ ಯೋಜನೆಗಳನ್ನು ನಾನು ವಿರೋಧಿಸುವುದಿಲ್ಲ. ಸ್ವಾಗತಿಸುತ್ತೇನೆ. ಆದರೆ, ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಯೂ ಮುಖ್ಯ ಎನ್ನುವುದನ್ನು ಸರ್ಕಾರ ಮನಗಾಣಬೇಕಿದೆ. ಏಕೆಂದರೆ, ಕೆ.ಆರ್.ಪೇಟೆಗೆ ಈವರೆಗೆ ಸಿಕ್ಕಿರುವ ಅನುದಾನ ಕೇವಲ 2 ಕೋಟಿ ರು. ಮಾತ್ರ ಎಂದು ಸಚಿವ ಚಲುವರಾಯಸ್ವಾಮಿ ಎದುರೇ ಜೆಡಿಎಸ್ ಶಾಸಕ ಎಚ್ .ಟಿ.ಮಂಜು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಜಯಮ್ಮಶಿವಲಿಂಗೇಗೌಡ ಸಮುದಾಯ ಭವನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕುರಿತ ಸಾಧನಾ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ದಿಯನ್ನು ಕಡೆಗಣಿಸಿದೆ. ನಮಗೆ ಕೇವಲ 2 ಕೋಟಿ ಅನುದಾನ ನೀಡಿ, ಬೇರೆ ತಾಲೂಕುಗಳಿಗೆ ಹತ್ತಾರು ಕೋಟಿ ರು ಅನುದಾನವನ್ನು ನೀಡಿ ತಾರತಮ್ಯ ಮಾಡಲಾಗಿದೆ ಎಂದು ದೂರಿದರು.

ಗ್ಯಾರಂಟಿ ಯೋಜನೆಗಳು ಜನರಿಗೆ ಬಹಳಷ್ಟು ಉಪಯುಕ್ತವಾಗಿವೆ. ಅವುಗಳ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನವಿಲ್ಲದಿದ್ದರೆ ನಮ್ಮನ್ನು ಆರಿಸಿದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತವೆ. ಹೀಗಾಗಿ ಅಭಿವೃದ್ಧಿಗೂ ಒತ್ತಾಸೆಯಾಗಿ ನಿಲ್ಲುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಅನುದಾನದ ತಾರತಮ್ಯಕ್ಕಾಗಿ ದೂರದ ದೆಹಲಿಗೆ ಹೋಗಿ ಹೋರಾಟ ಮಾಡುವ ನಮ್ಮ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಿಮ್ಮ ಪಕ್ಷದಲ್ಲಿಯೆ ಇರುವ ನಮ್ಮ ತಾಲೂಕನ್ನು ಏಕೆ ಮರೆತಿದ್ದೀರಿ? ಪಕ್ಷ ರಾಜಕಾರಣವನ್ನು ಬದಿಗೊತ್ತಿ ತಾಲೂಕಿನ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಶಾಸಕ ಹೆಚ್.ಟಿ.ಮಂಜು ಮಾತನಾಡುತ್ತಿರುವ ಸಮಯದಲ್ಲೇ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವೇದಿಕೆಯಿಂದ ಎದ್ದು ಹೊರಡಲು ಮುಂದಾದರು. ಅವರು ಹೊರಟಿದ್ದನ್ನು ಕಂಡ ಶಾಸಕ ಮಂಜು, ಎರಡು ನಿಮಿಷ ಕುತ್ಕೋ ಅಣ್ಣಾ ಎಂದಾಗ, ಜೆಡಿಎಸ್‌ನವರು ಏನು ಅಭಿವೃದ್ಧಿ ಮಾಡಿದರು ಎಂದು ನರೇಂದ್ರಸ್ವಾಮಿ ಪ್ರಶ್ನಿಸಿದರು.ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕ ಎಚ್.ಟಿ.ಮಂಜು, 93ರ ಇಳಿ ವಯಸ್ಸಿನಲ್ಲೂ ದೇವೇಗೌಡರು ಮೇಕೆದಾಟು ಯೋಜನೆ ಬೆಂಬಲಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಿದರು. ಕೆ.ಆರ್.ಪೇಟೆ ಇಂಜಿನಿಯರಿಂಗ್ ಕಾಲೇಜು ಕೊಟ್ಟಿದ್ದು ಜೆಡಿಎಸ್. ಮಿನಿ ವಿಧಾನಸೌಧ ಕೊಟ್ಟದ್ದು ಜೆಡಿಎಸ್. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ರೈತರ ಸಾಲಮನ್ನಾ ಮಾಡಿದೆ ಎಂದು ವಿವರಿಸಿದರು.

ಜೆಡಿಎಸ್ ಕೊಡುಗೆ ಏನೆಂದು ಕೆ.ಆರ್.ಪೇಟೆ ತಾಲೂಕಿನಲ್ಲಿ ಶಿಕ್ಷಣ, ಆರೋಗ್ಯ, ವಿದ್ಯುತ್, ನೀರಾವರಿ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಯನ್ನು ಒಮ್ಮೆ ಅವಲೋಕಿಸಿದಾಗ ತಿಳಿಯುತ್ತದೆ. ಇದು ಸಚಿವ ಚೆಲುವರಾಯಸ್ವಾಮಿ ಅವರಿಗೂ ಕೂಡಾ ತಿಳಿದಿದೆ.

ರಾಜಕೀಯ ಪಕ್ಷ ಬದಲಿಸಿದ ತಕ್ಷಣ ಚೆಲುವರಾಯಸ್ವಾಮಿಯವರು ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಕೊಡುಗೆಯನ್ನು ನೀಡಿರುವ ವೈದ್ಯಕೀಯ ಕಾಲೇಜನ್ನು ಮರೆಯಲಾಗುತ್ತಾ ಎಂದು ಮಂಜು ಪ್ರಶ್ನಿಸಿದರು.

ಭಾಷಣ ಮಾಡುತ್ತಲೇ ಪಿ.ಎಂ.ನರೇಂದ್ರ ಸ್ವಾಮಿ ಕೈ ಹಿಡಿದು ಕೂರುವಂತೆ ಹೆಚ್.ಟಿ.ಮಂಜು ಮನವಿ ಮಾಡಿದರೂ ಕೈ ಬಿಡಿಸಿಕೊಂಡು ಆತುರಾತುರವಾಗಿ ನರೇಂದ್ರಸ್ವಾಮಿ ಅಲ್ಲಿಂದ ಹೊರನಡೆದರು.