ಸಾರಾಂಶ
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ಕ್ಷೇತ್ರಗಳು ಬರುವುದರಿಂದ ಈ ಎರಡು ಕ್ಷೇತ್ರಗಳ ಅಧಿಕಾರಿಗಳು ಮತ್ತು ಕೋಲಾರ ಜಿಲ್ಲೆಯ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕರ್ತವ್ಯ ನಿರ್ವಹಿಸಬೇಕು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚುನಾವಣಾ ಕರ್ತವ್ಯದಲ್ಲಿ ಅತಿಯಾದ ಆತ್ಮ ವಿಶ್ವಾಸ ತರವಲ್ಲ. ಪ್ರತಿ ಚುನಾವಣೆಯು ವಿಭಿನ್ನ ಸ್ವರೂಪದ್ದಾಗಿರುತ್ತದೆ. ಇದನ್ನರಿತು ಸಂದರ್ಭೋಚಿತವಾಗಿ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸಲಹೆ, ಸೂಚನೆಗಳನ್ನು ನೀಡಿದರು. ಇಲ್ಲಿನ ಜಿಲ್ಲಾಡಳಿತ ಭವನದಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ “ಲೋಕಸಭಾ ಚುನಾವಣಾ ಪೂರ್ವ ಸಿದ್ದತಾ ಸಂಬಂಧ ಶಿಡ್ಲಘಟ್ಟ-ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲಾ ವ್ಯಾಪ್ತಿಗೆ ಶಿಡ್ಳಘಟ್ಟ, ಚಿಂತಾಮಣಿ
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳು ಬರುವುದರಿಂದ ಮುಂಬರುವ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಈ ಎರಡು ಕ್ಷೇತ್ರಗಳ ಅಧಿಕಾರಿಗಳು ಮತ್ತು ಕೋಲಾರ ಜಿಲ್ಲೆಯ ಅಧಿಕಾರಿಗಳು ಪರಸ್ಪರ ಸಹಕಾರ, ಸಮನ್ವಯತೆಯೊಂದಿಗೆ ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.ಆ ಹಿನ್ನೆಲೆಯಲ್ಲಿ ಈ ಸಭೆಯನ್ನು ಎರಡು ಜಿಲ್ಲೆಯ ಅಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಲಾಗಿದೆ. ಚುನಾವಣಾ ಕರ್ತವ್ಯಗಳನ್ನು ಶೇ. 99.99 ರಷ್ಟು ಸಮರ್ಪಕವಾಗಿ ಮಾಡಿದರೂ ಕೂಡ ದೋಷ ಪೂರಿತ ಚುನಾವಣಾ ಪ್ರಕ್ರಿಯೆ ಎಂದು ಕರೆಯುತ್ತಾರೆ. ಆದ್ದರಿಂದ ಚುನಾವಣೆ ಕಾರ್ಯಗಳನ್ನು ಶೇ. 100 ರಷ್ಟು ಕರಾರುವಕ್ಕಾಗಿ ನಿರ್ವಹಿಸಲೇಬೇಕು. ಪ್ರತಿ ಚುನಾವಣೆಗೂ ಚುನಾವಣಾ ಕರ್ತವ್ಯಗಳಲ್ಲಿ, ತಾಂತ್ರಿಕತೆಯಲ್ಲಿ , ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳು ಸುಧಾರಣೆಗಳು ಆಗುತ್ತಿರುತ್ತವೆ. ಅವುಗಳನ್ನು ಅರಿತು ಕೆಲಸ ಮಾಡಬೇಕು ಎಂದರು.
ತಟಸ್ಥ ಧೋರಣೆ ಅನುಸರಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಆಗಿರುವ, ಮುಂದೆ ನಿಯೋಜನೆ ಆಗುವ ಅಧಿಕಾರಿಗಳು, ಚುನಾವಣಾ ನೀತಿ ಸಂಹಿತೆ ಘೋಷಣೆ ಆದ ಮೇಲೆ ತಾವು ಯಾವುದೇ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ಗ್ರೂಪ್ ಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿದ್ದರೆ ಅದರಿಂದ ಕೂಡಲೆ ಹೊರಬರಬೇಕು. ಆಡಳಿತಾತ್ಮಕ, ಕೌಟುಂಬಿಕ ಗ್ರೂಪ್ ಗಳಿದ್ದರೆ ಅಡ್ಡಿಯಿಲ್ಲ. ಆದರೆ ರಾಜಕೀಯ ಪ್ರೇರಿತ ತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ತಟಸ್ಥ ದೋರಣೆ ಅನುಸರಿಸಬೇಕು.ಸಭೆಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಎಸ್ಪಿ ಡಿ.ಎಲ್.ನಾಗೇಶ್, ಅಪರ ಡೀಸಿ ಡಾ. ಎನ್.ತಿಪ್ಪೇಸ್ವಾಮಿ, ಕೋಲಾರ ಜಿಲ್ಲೆಯ ಅಪರ ಡೀಸಿ ಡಾ. ಶಂಕರ್ ವಣಿಕ್ಯಾಳ್, ಎಸಿ ಡಿ.ಹೆಚ್.ಅಶ್ವಿನ್ ಸೇರಿದಂತೆ ಚಿಂತಾಮಣಿ-ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಅಧಿಕಾರಿಗಳು ಹಾಜರಿದ್ದರು.