ಸಾರಾಂಶ
ಕನ್ನಡಪ್ರಭವಾರ್ತೆ ಮಧುಗಿರಿ
ವಿಶೇಷಚೇತನರು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಸಮಾಜದಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಶಕ್ತಿ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅವರಿಗೆ ಅನುಕಂಪದ ಬದಲಾಗಿ ಅವಕಾಶ ನೀಡಬೇಕಿದೆ ಎಂದು ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೆಶಕ ಎಂ.ಆರ್. ಮಂಜುನಾಥ್ ಕರೆ ನೀಡಿದರು.ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಕಚೇರಿ ಹಾಗೂ ಬಿಇಒ ಆಫೀಸ್ ಇವರುಗಳ ಸಮಹಯೋಗದಲ್ಲಿ 2023-24ನೇ ಸಾಲಿನ ರಾಜ್ಯ ಮಟ್ಟದ 14 ಮತ್ತು 17ನೇ ವಯೋಮಿತಿ ಒಳಗಿನ ಎರಡು ದಿನಗಳ ವಿಶೇಷ ಚೇತನ ಮಕ್ಕಳ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ವಿಶೇಷ ಚೇತನರಲ್ಲಿ ಆಗದವಾದ ಪ್ರತಿಭೆ ಅಡಗಿದ್ದು, ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಉತ್ಸಾಹ ತೋರಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ನಮ್ಮ ಶೈಕ್ಷಣಿಕ ಜಿಲ್ಲೆಯ ಅತಿಥ್ಯವನ್ನು ಸ್ವೀಕರಿಸಿ ಪ್ರೀತಿ, ವಿಶ್ವಾಸ, ಗೌರವ, ಸ್ನೇಹ ಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಸೋಲು-ಗೆಲುವನ್ನು ಸಮಾನಾಗಿ ಸ್ವೀಕರಿಸುವಂತೆ ಕರೆಯಿತ್ತರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್. ಹನುಮಂತರಾಯಪ್ಪ ಮಾತನಾಡಿ, ಪ್ರತಿಯೊಬ್ಬ ವಿಶೇಷ ಚೇತನ ಮಕ್ಕಳು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ದೂರದ ಜಿಲ್ಲೆಗಳಿಂದ ಬಂದಿರುವ ಕ್ರಿಡಾಪಟುಗಳಿಗೆ ಎರಡು ದಿನಗಳ ಕಾಲ ಉಪಹಾರದ ವ್ಯವಸ್ಥೆಯನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಗೂ ಎಂಎಲ್‌ಸಿ ಆರ್. ರಾಜೇಂದ್ರ ಕಲ್ಪಿಸಿಕೊಡುವ ಮೂಲಕ ಈ ಕ್ರೀಡಾ ಕೂಟಕ್ಕೆ ಹೆಚ್ಚು ಸಹಕಾರ ನೀಡಿದ್ದಾರೆ. ಕ್ರೀಡಾಪಟುಗಳ ಸ್ಪರ್ಧಾ ಮನೋಭಾವನೆಯಿಂದ ಕ್ರಿಡೆಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗೊಳಿಸುವಂತೆ ಕರೆ ನೀಡಿದ ಅವರು, ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕ್ರೀಡೆಗಳಿಗೆ ಚಾಲನೆ ನೀಡಿದರು.
ಜೂಪಿಟರ್ ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿ ಹೊತ್ತು ತಂದರೆ ಎಂಜಿಎಂ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾದ ಹನುಮಂತರಾಯಪ್ಪ, ಬೆಳಗಾಂ ಜಿಲ್ಲೆಯ ಮಿರ್ಜಾ, ಚಿಕ್ಕೋಡಿಯ ಜೋಗಳೇಕರ್, ಶಾಂತಲಾ, ಆಂಜನೇಯಿಲು, ವೆಂಕಟರಂಗಾರೆಡ್ಡಿ, ಸಂಜಯ್, ಬಿಆರ್‌ಸಿ ಹನುಮಂತರಾಯಪ್ಪ, ಗುರುರಾಜ್, ಯರಗಾಮಯ್ಯ, ಶ್ರೀರಾಮಯ್ಯ, ಮೀನಾಕ್ಷಿ, ಮಾಲತಿ, ಗುಂಡುರಾವ್, ಅಶ್ವತ್ಥಯ್ಯ, ದಾಸಣ್ಣ, ಶಿವಲಿಂಗಪ್ಪ, ರಾಜಣ್ಣ, ಮಹಾದೇವಪ್ಪ ಹಾಗೂ ವಿವಿಧ ಜಿಲ್ಲೆಯ ವಿಶೇಷ ಚೇತನ ಕ್ರೀಡಾಪಟುಗಳು ಹಾಗೂ ಪೋಷಕರು ಇದ್ದರು.