ಶೃಂಗೇರಿಭಾವನೆಗಳು ಕ್ಷೇತ್ರದ ಜೊತೆಗಿರಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲ. ಕ್ಷೇತ್ರದ ಜನರನ್ನು ರಸ್ತೆ ಮೇಲೆ ನಿಲ್ಲಿಸಲಾಗಿದೆ. ಶಾಸಕರು ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.

- ಶೃಂಗೇರಿ ತಾಲೂಕು ಕಚೇರಿ ಬಳಿ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ಸಚಿವ ಜೀವರಾಜ್

ಕನ್ನಡಪ್ರಭ ವಾರ್ತೆ ಶೃಂಗೇರಿ

ಭಾವನೆಗಳು ಕ್ಷೇತ್ರದ ಜೊತೆಗಿರಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲ. ಕ್ಷೇತ್ರದ ಜನರನ್ನು ರಸ್ತೆ ಮೇಲೆ ನಿಲ್ಲಿಸಲಾಗಿದೆ. ಶಾಸಕರು ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಫಸಲ್ ಭಿಮಾ ಬೆಳೆ ವಿಮೆ ತಾರತಮ್ಯ ಖಂಡಿಸಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ರಸ್ತೆಯಲ್ಲಿ ಓಡಾಡಿದರೆ ಹೊಂಡಗುಂಡಿಗೆ ಬಿದ್ದು ಸಾಯಬೇಕು. ಹಾಸ್ಟೇಲಿಗೆ ಸೇರಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ಜಮೀನಿನಲ್ಲಿ ಕೆಲಸ ಮಾಡಿದರೆ ಆನೆ, ಕಾಡುಕೋಣ ತುಳಿದು ಸಾಯಿಸುತ್ತದೆ. ಆಡಳಿತ,ಆಭಿವೃದ್ಧಿ ಸತ್ತು ಹೋಗಿದೆ.

ಶೃಂಗೇರಿಗೆ ಬರುತ್ತಿದ್ದಂತೆ ಗುಂಡಿಗಳ ಸ್ವಾಗತ. ಕೆಲವೆಡೆ ಮೇಲ್ನೋಟಕ್ಕೆ ತೇಪೆ ಹಾಕಿದ್ದರೂ ಡಾಂಬಾರು ಇಲ್ಲ. ಕೇವಲ ಜಲ್ಲಿಕಲ್ಲು ಹಾಕಿ ಕಳಪೆ ಕಾಮಗಾರಿ ಮಾಡಾಗಿದೆ. ಕೇಳಿದರೆ ಮಳೆ ಎಂಬ ಸಬೂಬು. ಈ ಸರ್ಕಾರದ ಅವಧಿಯಲ್ಲಿಯೇ ನಿರ್ಮಿಸಿದ ರಸ್ತೆಗಳು ಮಳೆಗಾಲದಲ್ಲಿ ಕಿತ್ತುಹೋಗಿದೆ. ಗುಂಡಿಗಳನ್ನು ಮುಚ್ಚಿಸದ ಸರ್ಕಾರ ಇನ್ನೂ ರಸ್ತೆ ಪೂರ್ಣ ಡಾಂಬರೀಕರಣ ಗೊಳಿಸುವುದಾದರೂ ಯಾವಾಗ ಎಂದು ಪ್ರಶ್ನಿಸಿದರು.

ಈ ವರ್ಷ ಅತಿ ಹೆಚ್ಚು ಮಳೆ ಬಿದ್ದಿದೆ. ಆದರೂ ಶೃಂಗೇರಿ ತಾಲೂಕನ್ನು ಅತಿವೃಷ್ಟಿ ಪ್ರದೇಶವೆಂದು ಏಕೆ ಘೋಷಿಸಿಲ್ಲ. ಈ ಹಿಂದೆ ಎಸ್.ಎಂ. ಕೃಷ್ಣ ಸರ್ಕಾರವಿದ್ದಾಗ ಅನಾವೃಷ್ಟಿ ಎಂದು ಘೋಷಿಸಲಿಲ್ಲ. ಘೋಷಿಸಲು ತೊಂದರೆ ಏನು.ನೆರೆ ಪ್ರವಾಹ,ಬೆಳೆ ಹಾನಿಯಾಗಿದೆ.ಈ ಹಿಂದೆ ಎಸ್.ಎಂ ಕೃಷ್ಣ ಸರ್ಕಾರ ಅನಾವೃಷ್ಟಿ ಎಂದು, ಬಿಎಸ್ ವೈ ಸರ್ಕಾರ ಪ್ರವಾಹ ಪೀಡಿತ ಪ್ರದೇಶ ವೆಂದು ಘೋಷಣೆ ಮಾಡಲಾಗಿತ್ತು.

ರೈತರಿಗೆ ಬರಬೇಕಿದ್ದ ಬೆಳೆ ವಿಮೆ ಹಣ ಕೆಲವರಿಗೆ ನೀಡಿ ಮತ್ತೆ ಕೆಲವರಿಗೆ ನೀಡಿಲ್ಲ. ತಾರತಮ್ಯ ಮಾಡಲಾಗಿದೆ. ಹಣ ನೀಡದೇ ಉಳಿಸಿಕೊಂಡಿರುವುದು ವಿಮಾ ಕಂಪನಿಯೊಂದಿಗೆ ಚುನಾಯಿತಿ ಜನಪ್ರತಿನಿಧಿಗಳು ಕೈಜೋಡಿಸಿರಬೇಕು ಎಂಬ ಅನುಮಾನ ವ್ಯಕ್ತವಾಗುತ್ತದೆ. ಚಳುವಳಿ, ಪ್ರತಿಭಟನೆ ಎಂದ ಕೂಡಲೇ ಹಣ ಬಿಡುಗಡೆಯಾಗುತ್ತದೆ. ರೈತರಿಗೆ ಬಾಕಿ ಬರಬೇಕಾಗಿರುವ ಫಸಲ್ ಭಿಮ ಯೋಜನೆ ಹಣ ಬಿಡುಗಡೆ ಮಾಡಿ ಕೂಡಲೇ ರೈತರ ಖಾತೆಗೆ ಹಾಕಬೇಕು.ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ ಶಂಕರಪ್ಪ ಮಾತನಾಡಿ ರೈತರು ಸಂಕಷ್ಟದಲ್ಲಿದ್ದಾರೆ.ಅಡಕೆ ನಿಷೇದದ ತೂಗುಗತ್ತಿಯ ನಡುವೆ ಹಳದಿ ಎಲೆ, ಎಲೆ ಚುಕ್ಕಿ ರೋಗ, ಕೊಳೆ ರೋಗದಿಂದ ಫಸಲು ಕಳೆದುಕೊಂಡು ರೈತರು ಕಂಗೆಟ್ಟಿದ್ದಾರೆ. ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಉಮೇಶ್ ತಲಗಾರು, ಬಿಜೆಪಿ ಕಾರ್ಯದರ್ಶಿ ಎಚ್.ವೇಣುಗೋಪಾಲ್, ಬಿ.ಶಿವಶಂಕರ್, ವಿಜಯ್ ತಿಪ್ಪನಮಕ್ಕಿ, ಕೆ.ಎಸ್.ರಮೇಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ತಹಸೀಲ್ದಾರ್ ಅನೂಪ್ ಸಂಜೋಗ್ ಮನವಿ ಸ್ವೀಕರಿಸಿದರು,

15 ಶ್ರೀ ಚಿತ್ರ 1-

ಶೃಂಗೇರಿ ತಾಲೂಕು ಕಚೇರಿ ಎದುರು ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಡಿ.ಎನ್. ಜೀವರಾಜ್ ಮಾತನಾಡಿದರು.