ಒಕ್ಕೂಟದಲ್ಲಿ ಇರುವುದು ಜಿಲ್ಲೆಯ ಏಳು ತಾಲೂಕುಗಳ ಹಾಲು ಉತ್ಪಾದಕರ ಬೆವರಿನ ಹಣ. ಹೀಗಾಗಿ ಒಕ್ಕೂಟದ ಆಡಳಿತ ಮಂಡಳಿ ಯಾವುದೇ ನಗರ ಸಭೆಗೆ ಅನುದಾನ ನೀಡಿ ಹಣ ಪೋಲು ಮಾಡಬಾರದು. ಒಂದು ವೇಳೆ ಒಕ್ಕೂಟದಲ್ಲಿರುವ ಹಣ ಬೇರೆ ಸಂಸ್ಥೆಗಳಿಗೆ ಅನುದಾನ ನೀಡುವ ಬದಲು ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 50 ಪೈಸೆ ದರ ಹೆಚ್ಚಳ ಮಾಡಿ ಉತ್ಪಾದಕರಿಗೆ ಹಣ ನೀಡಿ.
ಕನ್ನಡಪ್ರಭ ವಾರ್ತೆ ಮದ್ದೂರು
ಜಿಲ್ಲಾ ಹಾಲು ಒಕ್ಕೂಟದಿಂದ ಮದ್ದೂರು ನಗರಸಭೆಗೆ ಯಾವುದೇ ರೀತಿ ಅನುದಾನ ನೀಡದಂತೆ ರೈತ ಮುಖಂಡರು ಬುಧವಾರ ತಾಕೀತು ಮಾಡಿದರು.ಒಕ್ಕೂಟದ ಆಡಳಿತ ಮಂಡಳಿ ಕಚೇರಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪುಗೌಡ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಒಕ್ಕೂಟದ ಅಧ್ಯಕ್ಷ ಯು.ಸಿ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಶಾಸಕ ಕೆ.ಎಂ.ಉದಯ್ ಕೋರಿಕೆಯಂತೆ ನಗರ ಸಭೆಗೆ ಯಾವುದೇ ಅನುದಾನ ಬಿಡುಗಡೆ ಮಾಡದಂತೆ ಮನವಿ ಮಾಡಿದರು.
ಒಕ್ಕೂಟದಲ್ಲಿ ಇರುವುದು ಜಿಲ್ಲೆಯ ಏಳು ತಾಲೂಕುಗಳ ಹಾಲು ಉತ್ಪಾದಕರ ಬೆವರಿನ ಹಣ. ಹೀಗಾಗಿ ಒಕ್ಕೂಟದ ಆಡಳಿತ ಮಂಡಳಿ ಯಾವುದೇ ನಗರ ಸಭೆಗೆ ಅನುದಾನ ನೀಡಿ ಹಣ ಪೋಲು ಮಾಡಬಾರದು. ಒಂದು ವೇಳೆ ಒಕ್ಕೂಟದಲ್ಲಿರುವ ಹಣ ಬೇರೆ ಸಂಸ್ಥೆಗಳಿಗೆ ಅನುದಾನ ನೀಡುವ ಬದಲು ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 50 ಪೈಸೆ ದರ ಹೆಚ್ಚಳ ಮಾಡಿ ಉತ್ಪಾದಕರಿಗೆ ಹಣ ನೀಡುವಂತೆ ಆಗ್ರಹಿಸಿದರು.ಶಾಸಕ ಉದಯ್ ಮದ್ದೂರು ನಗರಸಭೆ ಉದ್ಧಾರ ಮಾಡುವ ಇಚ್ಛೆ ಇದ್ದರೆ ಸರ್ಕಾರ ಅಥವಾ ಬೇರೆ ಭಾಗದಿಂದ ಅನುದಾನ ತಂದು ಮಾಡಲಿ. ಆದರೆ, ರೈತರ ಬೆವರಿನ ಹಣವನ್ನು ಯಾವುದೇ ಕಾರಣಕ್ಕೂ ನೀಡಬಾರದು. ಒಂದು ವೇಳೆ ಒಕ್ಕೂಟದ ಆಡಳಿತ ಮಂಡಳಿ ಅನುದಾನ ಬಿಡುಗಡೆ ಮಾಡಿದರೆ ಇಡೀ ಏಳು ತಾಲೂಕುಗಳ ಹಾಲು ಉತ್ಪಾದಕರು ರೈತ ಸಂಘದ ಬೆಂಬಲದೊಂದಿಗೆ ಒಕ್ಕೂಟದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿಯೋಗದಲ್ಲಿ ರೈತ ಸಂಘದ ಗೌರವಾಧ್ಯಕ್ಷ ಕ್ಯಾತನಹಳ್ಳಿಗೋವಿಂದೇಗೌಡ, ಗೆಜ್ಜಲಗೆರೆ ಡೇರಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಜಿ.ಎ.ಶಂಕರ್, ಲಿಂಗಪ್ಪಾಜಿ, ಮೋಹನ್, ಜಿ.ಸಿ.ಮಹೇಂದ್ರ ಮತ್ತಿತರರು ಇದ್ದರು.ಕಾನೂನು ಅಭಿಪ್ರಾಯ ಪಡೆದು ತೀರ್ಮಾನ: ಯು.ಸಿ.ಶಿವಕುಮಾರ್ಮದ್ದೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ಮದ್ದೂರು ನಗರಸಭೆ ಅಭಿವೃದ್ಧಿಗೆ ಸಿಆರ್‌ಎಸ್ ಅನುದಾನ ನೀಡುವಂತೆ ಶಾಸಕ ಕೆ.ಎಂ.ಉದಯ್ ಅವರ ಮನವಿ ಕುರಿತು ಕಾನೂನು ಅಭಿಪ್ರಾಯದೊಂದಿಗೆ ತೀರ್ಮಾನ ಕೈಗೊಳ್ಳುವಂತೆ ಬುಧವಾರ ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ನಗರಸಭೆ ಅಭಿವೃದ್ಧಿಗೆ 85 ಲಕ್ಷ ರು. ಅನುದಾನವನ್ನು ಒಕ್ಕೂಟದಿಂದ ಬಿಡುಗಡೆ ಮಾಡುವಂತೆ ಶಾಸಕ ಉದಯ್ ಕಳೆದ ಕೆಲ ದಿನಗಳ ಹಿಂದೆ ಪತ್ರ ಬರೆದಿದ್ದರು. ಈ ಕುರಿತು ಒಕ್ಕೂಟದ ಅಧ್ಯಕ್ಷ ಯು.ಸಿ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.ಮದ್ದೂರು ನಗರಸಭೆ ಈಗಷ್ಟೇ ರಚನೆಯಾಗಿರುವುದರಿಂದ ಸಿಆರ್‌ಎಸ್ ಅಥವಾ ಯಾವುದೇ ಅನುದಾನ ನೀಡಲು ಬರುವುದಿಲ್ಲ. ಹೀಗಾಗಿ ಒಕ್ಕೂಟ ಸಹಕಾರ ಸಂಸ್ಥೆಯಾಗಿರುವುದರಿಂದ ಕಾನೂನು ಅಭಿಪ್ರಾಯ ಪಡೆದು ಮುಂದಿನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕೈಗೊಳ್ಳುವಂತೆ ಒಕ್ಕೂಟದ ನಿರ್ದೇಶಕರು ಸಲಹೆ ನೀಡಿದರು.
ಕಾನೂನು ವ್ಯಾಪ್ತಿಯಲ್ಲಿ ಸಹಕಾರ ಒಕ್ಕೂಟಗಳು, ಸಂಘಗಳು ಅನುದಾನ ನೀಡಲು ಸಾಧ್ಯವಿದೆ ಸಾಧ್ಯವಿದೆಯೇ ಎಂದು ಕಾನೂನು ಸಲಹೆ ಪಡೆದು ಮುಂದಿನ ಕಾರ್ಯ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶಕರು ಸಲಹೆ ನೀಡಿದರು ಎಂದು ಹೇಳಲಾಗಿದೆ.