ಲಾಭದಾಸೆಗೆ ಕಳಪೆ ಬಿತ್ತನೆ ಬೀಜ ಮಾರದಿರಿ: ಶಾಸಕ ಬಸವರಾಜ ಶಿವಣ್ಣನವರ ಸೂಚನೆ

| Published : Apr 30 2025, 12:31 AM IST

ಲಾಭದಾಸೆಗೆ ಕಳಪೆ ಬಿತ್ತನೆ ಬೀಜ ಮಾರದಿರಿ: ಶಾಸಕ ಬಸವರಾಜ ಶಿವಣ್ಣನವರ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಾಪಾರದಲ್ಲಿಯೂ ಧರ್ಮದಂತೆ ನಡೆದುಕೊಳ್ಳಬೇಕು. ರೈತರಿಗೆ ಮೋಸ ಮಾಡದೇ ಗುಣಮಟ್ಟದ ಬೀಜಗಳನ್ನೇ ಮಾರಾಟ ಮಾಡಬೇಕು.

ಬ್ಯಾಡಗಿ: ರೈತರ ಶ್ರಮಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಮುಂದೊಂದು ದಿನ ಪ್ರತಿಫಲ ಅನುಭವಿಸಬೇಕಾಗುತ್ತದೆ. ಮಾರಾಟಗಾರರು ಲಾಭದಾಸೆಗಾಗಿ ಕಳಪೆ ಬೀಜ ಮಾರಾಟ, ತೂಕದಲ್ಲಿ ಮೋಸವೆಸಗಬಾರದು ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಬೀಜ ಗೊಬ್ಬರ ಮಾರಾಟಗಾರರಿಗೆ ತಾಕೀತು ಮಾಡಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಜರುಗಿದ 2025 -26ನೇ ಸಾಲಿನ ಮುಂಗಾರು ಹಂಗಾಮಿನ ಸಿದ್ಧತೆ ಹಾಗೂ ಕೃಷಿ ಪರಿಕರ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವ್ಯಾಪಾರದಲ್ಲಿಯೂ ಧರ್ಮದಂತೆ ನಡೆದುಕೊಳ್ಳಬೇಕು. ರೈತರಿಗೆ ಮೋಸ ಮಾಡದೇ ಗುಣಮಟ್ಟದ ಬೀಜಗಳನ್ನೇ ಮಾರಾಟ ಮಾಡಬೇಕು. ಇಲ್ಲದಿದ್ದರೆ ಆತನ ಒಂದು ವರ್ಷದ ಗಂಜಿಯನ್ನು ಕಸಿದುಕೊಂಡಂತಾಗಲಿದೆ. ನಿಮ್ಮಲ್ಲಿರುವ ಪ್ರಾಮಾಣಿಕತೆಯೇ ರೈತರನ್ನು ರಕ್ಷಣೆ ಮಾಡಲಿದೆ. ಮಾನವೀಯತೆಯಿಂದ ರೈತರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಸಲಹೆ ನೀಡಿದರು.

ವ್ಯಾಪಾರ ಪರೀಕ್ಷಿಸುತ್ತಿದೆ: ಬಿತ್ತನೆ ಬೀಜ, ಗೊಬ್ಬರ ಹಾಗೂ ಔಷಧಿ ಮಾರಾಟಗಾರರು ತಾವು ಏನೂ ಮಾಡಿದರೂ ನಡೆಯುತ್ತದೆ ಎಂಬ ಅಹಂಕಾರ ಅಥವಾ ಅಲಕ್ಷ್ಯತನ ಇದ್ದರೇ ಇಂದೇ ಅದನ್ನು ಕೈಬಿಡಬೇಕು. ತಾವು ಮಾರಾಟ ಮಾಡುತ್ತಿರುವ ವಸ್ತುಗಳು ಅದರ ಮೂಲ ದರ ನಿಮಗೆ ಸಿಗುತ್ತಿರುವ ಲಾಭಾಂಶ ಮಾರಾಟ ಮಾಡುತ್ತಿರುವ ಬೀಜ ಅಧಿಕೃತವೇ ಅಥವಾ ಕಳಪೆಯಾಗಿದೆಯೇ ಇವೆಲ್ಲಾ ದರಗಳ ಕುರಿತು ಸರ್ಕಾರ ಅವಲೋಕಿಸುತ್ತಿದೆ ಎಂದರು.

ಸಾವಯವ ಕೃಷಿಗೆ ಒತ್ತು ನೀಡಿ: ಹೆಚ್ಚು ಪ್ರಮಾಣದಲ್ಲಿ ರಸಗೊಬ್ಬರ ಬಳಸುತ್ತಿರುವುದರಿಂದ ಕೃಷಿಭೂಮಿ ವರ್ಷದಿಂದ ವರ್ಷಕ್ಕೆ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆಯಲ್ಲದೇ, ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ರೈತರು ಸಾವಯವ ಕೃಷಿಗೆ ಹೆಚಿನ ಆದ್ಯತೆ ನೀಡಬೇಕು. ಒಂದೇ ತರಹದ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಿಗೆ ಮಾರು ಹೋಗದೇ ಮಣ್ಣು ಪರೀಕ್ಷೆ ಆಧಾರದ ಮೇಲೆ ಪರ್ಯಾಯ ಕೃಷಿ ಪರಿಕರಗಳನ್ನು ಉಪಯೋಗಿಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಉತ್ತಮ ಇಳುವರಿ ಪಡೆಯುವಂತೆ ರೈತರಿಗೆ ಸಲಹೆ ನೀಡಿದರು.

ಗೊಬ್ಬರದ ಜತೆ ಬೀಜ ಲಿಂಕ್ ಮಾಡಬೇಡಿ: ಇತ್ತೀಚಿನ ದಿನಗಳಲ್ಲಿ ಲಾಭದಾಸೆಗೆ ರಸಗೊಬ್ಬರ ಮಾರಾಟಗಾರರು ಯೂರಿಯಾ ಜತೆ ಕಾಂಪ್ಲೆಕ್ಸ್, ಡಿಎಪಿ ಜತೆ ನ್ಯಾನೋ ಯೂರಿಯಾ ಕಡ್ಡಾಯವಾಗಿ ಖರೀದಿಸುವಂತೆ ಒತ್ತಡ ಹೇರಲಾಗುತ್ತದೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪಲು ಸಾಧ್ಯವಿಲ್ಲ. ಗೊಬ್ಬರ ಖರೀದಿಸಲು ರೈತರಿಗೆ ಮುಕ್ತವಾಗಿ ಅವಕಾಶ ಕಲ್ಪಿಸುವಂತೆ ಸೂಚಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳಪೆ ಬೀಜ ಮಾರಾಟದ ವಿಷಯಕ್ಕೆ ರೈತ ಸಂಘವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಬೃಹತ್ತಾದ ಮಾನ್ಸೆಂಟೋ(ಮಹಿಕೋ) ಕಂಪನಿಯಿಂದ ₹69 ಕೋಟಿ ದಂಡ ಕಸಿದಿದ್ದಲ್ಲದೇ ಜಿಲ್ಲೆಯಿಂದ ಓಡಿಸಿದ್ದೇವೆ. ಗೊಬ್ಬರ, ಬಿತ್ತನೆ ಬೀಜ ಮಾರಾಟಗಾರರು ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದರು.

ಸಭೆಯಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಕೃಷಿಕ ಸಮಾಜದ ಅಧ್ಯಕ್ಷ ಎನ್.ಟಿ. ಪಾಟೀಲ, ಸದಸ್ಯ ಗಂಗಣ್ಣ ಎಲಿ, ನಾಗರಾಜ ಆನ್ವೇರಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ ಎರೇಶಿಮಿ, ಶಿವನಗೌಡ ಪಾಟೀಲ, ದುರ್ಗೇಶ ಗೊಣೆಮ್ಮನವರ, ಬಸವರಾಜ ಸಂಕಣ್ಣನವರ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಗಣೇಶ ಕಮ್ಮಾರ ಸೇರಿದಂತೆ ವ್ಯಾಪಾರಸ್ಥರು ರೈತರು ಉಪಸ್ಥಿತರಿದ್ದರು.