ಹೆತ್ತ ತಂದೆ-ತಾಯಿ ವೃದ್ಧಾಶ್ರಮಕ್ಕೆ ಕಳುಹಿಸಬೇಡಿ: ಶಾಸಕ ಚೆನ್ನಾರೆಡ್ಡಿ ತುನ್ನೂರು

| Published : Oct 03 2024, 01:20 AM IST

ಹೆತ್ತ ತಂದೆ-ತಾಯಿ ವೃದ್ಧಾಶ್ರಮಕ್ಕೆ ಕಳುಹಿಸಬೇಡಿ: ಶಾಸಕ ಚೆನ್ನಾರೆಡ್ಡಿ ತುನ್ನೂರು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ವೃದ್ಧಾಶ್ರಮಕ್ಕೆ ಹಿರಿಯರನ್ನು ಕಳುಹಿಸದೆ ಅವರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಶಾಸಕ ತುನ್ನೂರು ಚೆನ್ನಾರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮಕ್ಕಳು ವೃದ್ಧಾಶ್ರಮಕ್ಕೆ ಹಿರಿಯರನ್ನು ಕಳುಹಿಸದೆ ಅವರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಶಾಸಕ ತುನ್ನೂರು ಚೆನ್ನಾರೆಡ್ಡಿ ಹೇಳಿದರು.ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ವಿಶ್ವನಾಥರೆಡ್ಡಿ ಮುದ್ನಾಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಲ್ಲಾ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇದ್ದವು. ಆಗ ಅಪ್ಪ-ಅಮ್ಮ, ಅಕ್ಕ-ತಮ್ಮ, ಚಿಕ್ಕಪ್ಪ-ದೊಡ್ಡಪ್ಪ ಹೀಗೆ ಸಂಬಂಧಗಳು ಅನೋನ್ಯವಾಗಿದ್ದವು. ಹಿರಿಯರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆಧುನಿಕ ಕಾಲದಲ್ಲಿ ಕುಟುಂಬ ಪದ್ಧತಿ ಬದಲಾಗಿದೆ. ದೊಡ್ಡ ಕುಟುಂಬಗಳು ಹೋಗಿ, ಚಿಕ್ಕ ಚಿಕ್ಕ ಕುಟುಂಬಗಳಲ್ಲಿ ವಾಸಿಸಲು ಬಯಸುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ನ್ಯಾ. ಮರೆಪ್ಪ ಮಾತನಾಡಿ, ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ಹಿರಿಯ ನಾಗರಿಕರು ನೇರವಾಗಿ ಉಪ ವಿಭಾಗಾಧಿಕಾರಿಯವರಿಗೆ ದೂರು ನೀಡಬಹುದು. ನ್ಯಾಯಾಲಯಕ್ಕೆ ಹೋಗುವ ಅಗತ್ಯವಿರುವುದಿಲ್ಲ. ಉಪ ವಿಭಾಗಾಧಿಕಾರಿಗಳು ಪ್ರಕರಣದ ವಿಚಾರಣೆ ನಡೆಸಿ ಮಕ್ಕಳಿಂದ ಪೋಷಕರಿಗೆ ಜೀವನಾಂಶ ನೀಡುವಂತೆ ಆದೇಶಿಸಲು ಅವಕಾಶವಿದೆ ಎಂದರು.

ಪೋಷಕರ ಹೆಸರಿನಲ್ಲಿದ್ದ ಮನೆ ಅಥವಾ ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದು, ಅಂತಹ ಮಕ್ಕಳು ಪೋಷಕರನ್ನು ಮನೆಯಿಂದ ಹೊರಹಾಕಿದ್ದಾರೆ. ಮಕ್ಕಳಿಂದ ಆಸ್ತಿಯನ್ನು ಮರಳಿ ಪೋಷಕರ ಹೆಸರಿಗೆ ನೀಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಹಿರಿಯ ನಾಗರಿಕರು ಕಾನೂನಿನ ಅರಿವು ಮತ್ತು ನೆರವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜನ್ಮ ನೀಡಿದ ತಂದೆ-ತಾಯಿ, ಬುದ್ಧಿ ಕಲಿಸಿದ ಗುರುಗಳು ಹಾಗೂ ನಮ್ಮನ್ನು ಸಲುಹಿದ ಹಿರಿಯರಿಗೆ ಪ್ರತಿಯೊಬ್ಬರೂ ಗೌರವ ನೀಡಿ ನಡೆಯಬೇಕೆಂದು ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಅವರು ಸಲಹೆ ‌ನೀಡಿದರು. ಸಮಾಜ ಸನ್ಮಾರ್ಗದಲ್ಲಿ ನಡೆಯಲು ಪ್ರತಿಯೊಬ್ಬ ಹಿರಿಯರ ಮಾರ್ಗದರ್ಶನ ಅವಶ್ಯಕವಾಗಿದ್ದು, ಪ್ರಸ್ತುತ ಮುಂದುವರೆದ ಸಮಾಜದ ಪ್ರತಿಯೊಬ್ಬ ಯುವಜನತೆ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವಂತೆ ತಿಳಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಾದ ಕೃಷಿ ಮತ್ತು ಸಮಾಜ ಕ್ಷೇತ್ರ ಯಲ್ಲಪ್ಪ ಮಾಳಿಕೇರಿ, ಪೌರಾಕಾರ್ಮಿಕ, ಸಾಮಾಜಿಕ ಕಾರ್ಯಕ್ಕೆ ಸಾಬಣ್ಣ ಸುಂಗಲಕರ್, ಸಹಕಾರ ಕ್ಷೇತ್ರ ಕೆಂಜಪ್ಪ ನಗನೂರ್, ಶತಾಯುಷಿ ಶಿವಮ್ಮ ಸಿದ್ದಪ್ಪ ಬಬಲಾದ, ಕಂದಾಯ ನಿವೃತ್ತ ಅಧಿಕಾರಿ ಮುನಿಯಪ್ಪಗೌಡ, ಪೊಲೀಸ್ ನಿವೃತ್ತಿ ಅಧಿಕಾರಿ ರಾಮಶೆಟ್ಟಿ ಸಿರನೂರ್, ಆರೋಗ್ಯ ಇಲಾಖೆ‌ ನಿವೃತ್ತ ಅಧಿಕಾರಿ ಶರಣಯ್ಯ ಸ್ವಾಮಿ ಗುರುಮಾದಯ್ಯ, ಬಯಲಾಟ ನಿಂಗಪ್ಪ‌ ವರ್ಕನಳ್ಳಿ, ಸಮಾಜ ಸೇವಕರಾದ ಮರೆಮ್ಮ ನಿಡರಗಿ, ಬಸವರಾಜ ಖಂಡ್ರೆ, ಸುಭಾಷ್ ಸೋಲಂಕಿ, ಗೋವುಗಳ ರಕ್ಷಣೆ ಗೌತಮ್ ಚಂದ ಜೈನ್ ಅವರನ್ನು ಸನ್ಮಾನಿಸಿದರು.

ಈ ವೇಳೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆದ್ದ ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು. ಸಿಪಿಐ ಸುನಿಲ್ ಕುಮಾರ್ ಮೂಲಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ, ಹಿರಿಯ ನಾಗರಿಕ ಸೋಮನಾಥರೆಡ್ಡಿ ಎಲ್ಹೇರಿ, ಬಂಡೆಪ್ಪ‌ ಆಕಳ ಸೇರಿದಂತೆ ಇತರರಿದ್ದರು.