ಸಾರಾಂಶ
ಕನ್ನಡಪ್ರಭ ವಾರ್ತೆ ಮುಳಬಾಗಿಲು
ಗಡಿಭಾಗದ ಟಿ.ಕುರುಬರಹಳ್ಳಿಯಲ್ಲಿ ಗೋಪೂಜೆ ಮಾಡುವ ಮುಖಾಂತರ ಹೊಸ ವರ್ಷವನ್ನು ಕುರಿಗಾಹಿಗಳ ಜೊತೆ ಆಚರಣೆ ಮಾಡಿ ಕುರಿಗಾಹಿಗಳಿಗೆ ಮೀಸಲಿಟ್ಟಿರುವ ಗೋಮಾಳ ಜಮೀನನ್ನು ದರಖಾಸ್ತು ಸಮಿತಿ ಮೂಲಕ ಮಂಜೂರು ಮಾಡಬಾರದೆಂದು ತಾಲೂಕು ಆಡಳಿತಕ್ಕೆ ಕುರಿಗಾಹಿ ರಾಮಕೃಷ್ಣಪ್ಪ ಒತ್ತಾಯ ಮಾಡಿದರು.ಗಡಿಭಾಗಕ್ಕೆ ಹೊಂದಿಕೊಂಡಿರುವ ಟಿ.ಕುರುಬರಹಳ್ಳಿ ಸರ್ವೇ ನಂಬರ್ ೩೬ ಹಾಗೂ ೩೭ರಲ್ಲಿ ೬೫ ಎಕರೆ ಗೋಮಾಳ ಜಮೀನನ್ನು ಉಳಿಸಲು ಸತತವಾಗಿ ೨ ವರ್ಷಗಳ ಕಾಲ ಹೋರಾಟ ಮಾಡಿ ೧೫ ಜನ ಕುರಿಗಾಹಿಗಳು ಜೈಲುವಾಸವನ್ನೂ ಸಹ ಅನುಭವಿಸಿ ಬಂದಿದ್ದಾರೆ. ನಮ್ಮ ೧೦ ಸಾವಿರ ಕುರಿಗಳ ರಕ್ಷಣೆಗೆ ರೈತಸಂಘದ ಹೋರಾಟದ ಪ್ರತಿಫಲವಾಗಿ ಅಂದಿನ ತಹಸೀಲ್ದಾರ್ ಪ್ರವೀಣ್ ನಾಮಫಲಕವನ್ನು ಅಳವಡಿಸಿ, ನೊಂದ ರೈತರ ಪರ ನ್ಯಾಯ ಒದಗಿಸಿಕೊಟ್ಟಿದ್ದಾರೆಂದು ಧನ್ಯವಾದ ಹೇಳಿದರು.
೬೫ ಎಕರೆ ಗೋಮಾಳ ಕಾಪಾಡಿಕೊಂಡು ಬಂದಿರುವ ಕುರಿಗಾಹಿಗಳಿಗೆ ತಾಲೂಕು ಆಡಳಿತ ಕೂಡಲೇ ಪಹಣಿಯಲ್ಲಿ ಕುರಿಗಾಹಿಗಳಿಗೆ ಮೀಸಲು ಎಂದು ನಮೂದು ಮಾಡಬೇಕು. ಜೊತೆಗೆ ಈಗ ಹೊಸದಾಗಿ ರಚನೆಯಾಗಿರುವ ದರಖಾಸ್ತು ಕಮಿಟಿ ಮೂಲಕ ಯಾವುದೇ ಕಾರಣಕ್ಕೂ ಬಲಾಡ್ಯರಿಗೆ ಅರ್ಜಿ ನಮೂನೆ ೫೭ರಲ್ಲಿ ಜಮೀನು ಮಂಜೂರು ಮಾಡಬಾರದೆಂದು ಒತ್ತಾಯಿಸಿದರು.ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಹೊಸ ವರ್ಷವನ್ನು ಪ್ರತಿಯೊಬ್ಬರೂ ಆಚರಣೆ ಮಾಡುತ್ತಾರೆ. ಆದರೆ, ಗಡಿಭಾಗದ ಕುರುಬರಹಳ್ಳಿ ರೈತರು ಭೂಮಿ ಉಳಿವಿಗಾಗಿ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ. ಅದರಲ್ಲೂ ನಮ್ಮ ಭೂಮಿ ತಾಯಿ ನಮ್ಮ ಮನೆ ಮಗಳಿದ್ದಂತೆ. ಕುರಿಗಳು ಕುಟುಂಬದ ಸದಸ್ಯರಿದ್ದಂತೆ. ಕುರಿಗಾಹಿಗಳ ರಕ್ಷಣೆಗೆ ತಾಲೂಕು ಆಡಳಿತ ಪ್ರತಿ ಹಳ್ಳಿಯಲ್ಲೂ ಕನಿಷ್ಠ ೧೦ ಎಕರೆ ಗೋಮಾಳ ಮಂಜೂರು ಮಾಡುವ ಮೂಲಕ ಜಾನುವಾರುಗಳ ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.
೬೫ ಎಕರೆ ಗೋಮಾಳ ಕುರಿಗಾಹಿಗಳಿಗೆ ಮೀಸಲಿಟ್ಟಿರುವುದು ಇತಿಹಾಸ. ಬಲಾಡ್ಯರ ವಿರುದ್ಧ ಕುರಿಗಾಹಿಗಳು, ರೈತಸಂಘ ಮಾಡಿದ ಹೋರಾಟದ ಫಲವಾಗಿ ಇಂದು ಭೂಮಿ ಉಳಿದಿದೆ. ಆ ಭೂಮಿ ಮೇಲೆ ಊರಿನ ಕೆಲವು ಬಲಾಡ್ಯರು ಕಣ್ಣು ಹಾಕಿ ಕಂದಾಯ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿ ಮಂಜೂರು ಮಾಡಿಸಿಕೊಳ್ಳಲು ತೆರೆ ಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕೆ ಆ ವ್ಯಾಪ್ತಿಯ ಕಂದಾಯ ಗ್ರಾಮ ಲೆಕ್ಕಿಗರಾದ ಸಂತೋಷ್ ಅವರು ಕುಮ್ಮಕ್ಕು ನೀಡುತ್ತಿರುವುದು ಆ ಗ್ರಾಮಗಳ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ ೬೫ ಎಕರೆ ಗೋಮಾಳ ಜಮೀನನ್ನು ಯಾವುದೇ ಪ್ರಭಾವಿ ವ್ಯಕ್ತಿಗೂ ಸಹ ಮಂಜೂರು ಮಾಡದಂತೆ ಆದೇಶ ಮಾಡಬೇಕು. ಇಲ್ಲವಾದರೆ ಹೊಸ ವರ್ಷದ ದಿನ ನಾವೂ ಸಹ ಪ್ರತಿಜ್ಞೆ ಮಾಡುತ್ತಿದ್ದೇವೆ, ನಮ್ಮ ಕುರಿಗಾಹಿಗಳಿಗೆ ಮೀಸಲಿಟ್ಟಿರುವ ಗೋಮಾಳ ಜಮೀನಿನ ತಂಟೆಗೆ ಬಂದರೆ ರೈತ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಕೆಯೊಂದಿಗೆ ಸಮಸ್ತ ಬಡ ರೈತ, ಕೂಲಿಕಾರ್ಮಿಕರಿಗೆ, ಅಧಿಕಾರಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದರು.ಕಾರ್ಯಕ್ರಮದಲ್ಲಿ ಗಣೇಶ್, ಪ್ರಭಾಕರ್, ಹೆಬ್ಬಣಿ ಆನಂದರೆಡ್ಡಿ, ರಾಮಕೃಷ್ಣಪ್ಪ, ಶಿವಾರೆಡ್ಡಿ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ. ಚನ್ನರಾಯಪ್ಪ. ರಡ್ಡೆಪ್ಪ. ನಾರಾಯಣಪ್ಪ.ವೆಂಕಟ ಪತಿ.ರವಿ.ನಾರೆಪ್ಪ. ಧರ್ಮ, ಸುಪ್ರೀಂಚಲ ಇದ್ದರು.