ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಚುನಾವಣಾ ಆಯೋಗದ ಮುಖ್ಯ ಉದ್ದೇಶ ನೂರಕ್ಕೆ ನೂರರಷ್ಟು ಮತದಾನವಾಗಬೇಕು ಎಂಬುವುದಿದ್ದು, ಯಾರು ಕೂಡಾ ಚುನಾವಣೆ ಪ್ರಕ್ರಿಯೆಯಿಂದ ದೂರ ಇರಬಾರದು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮನವಿ ಮಾಡಿದರು.ಜಿಲ್ಲಾಡಳಿತ, ಜಿಲ್ಲಾ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜಮಖಂಡಿ ತಾಲೂಕು ಸ್ವೀಪ್ ಸಮಿತಿ ಹಾಗೂ ನಗರಸಭೆ ಸಹಯೋಗದಲ್ಲಿ ಗುರುವಾರ ಜಮಖಂಡಿ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ಸೈಕಲ್ ಜಾಥಾದಲ್ಲಿ ಸೈಕಲ್ ಸವಾರಿ ಮಾಡಿ ಮಾತನಾಡಿದ ಅವರು, ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 85 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ ಮಾಡುವುದು, ಪಿಡಬ್ಲೂಡಿ ಮತದಾರರಿಗೆ ವಿಶೇಷ ಸೌಲಭ್ಯ ಕಲ್ಪಿಸುವುದು, ಸಖಿ ಮತಗಟ್ಟೆ ಸೇರಿದಂತೆ ವಿಶೇಷ ಮತಗಟ್ಟೆ ಸ್ಥಾಪನೆ ಮಾಡಲಾಗುತ್ತಿದೆ. ಜಮಖಂಡಿ ಮತಕ್ಷೇತ್ರದ ಎಲ್ಲ ಮತದಾರರು ಮೇ.7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತಗಟ್ಟೆಗೆ ತೆರಳಿ ಮುಕ್ತ, ನಿಷ್ಪಕ್ಷಪಾತವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ತಿಳಿಸಿದರು. ಸೈಕಲ್ ಸವಾರಿ ಮಾಡಿ ಗಮನ ಸೆಳೆದ ಡಿಸಿ, ಸಿಇಒ, ಎಸ್ಪಿ
ಮತದಾರರಲ್ಲಿ ಮತದಾನ ಮಹತ್ವವನ್ನು ಸಾರಲು ಹಾಗೂ ತಪ್ಪದೇ ಮತದಾನ ಮಾಡುವಂತೆ ಪ್ರೇರೆಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹಾಗೂ ಜಿಪಂ ಸಿಇಒ ಶಶಿಧರ ಕುರೇರ ಸೈಕಲ್ ಸವಾರಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.ಸೈಕಲ್ ಜಾಥಾ ದೇಸಾಯಿ ಸರ್ಕಲ್, ಅಶೋಕ ಸರ್ಕಲ್, ಹಳೆ ತಹಸೀಲ್ದಾರ್ ಕಾರ್ಯಾಲಯ, ಟಿಪ್ಪು ಸುಲ್ತಾನ ಸರ್ಕಲ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಶಿವಾಜಿ ಸರ್ಕಲ್ಗೆ ಮುಕ್ತಾಯಗೊಂಡಿತು. ಮತದಾನದ ಜಾಗೃತಿ ಸಂದೇಶಗಳುಳ್ಳ ಟೋಪಿ ಹಾಗೂ ಟೀ-ಶರ್ಟ್ ಧರಿಸಿ ಎಲ್ಲರ ಗಮನ ಸೆಳೆದರಲ್ಲದೇ ಪ್ರತಿಯೊಂದು ಸೈಕಲ್‌ಗಳಿಗೆ ಜಾಗೃತಿ ಘೋಷಣೆಗಳ ಫಲಕಗಳನ್ನು ಹಾಕಿಕೊಂಡಿದ್ದರು. ಈ ಸಂದರ್ಭದಲ್ಲಿ ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಜಾಥಾದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ್ ಸದಾಶಿವ ಮಕ್ಕೂಜಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚಲುವಯ್ಯ, ನಗರಸಭೆ ಪೌರಾಯುಕ್ತ ಲಕ್ಷ್ಮೀ ಅಸ್ಟಗಿ, ತಾಲೂಕು ವೈದ್ಯಾಧಿಕಾರಿ ಗೈಬುಸಾಬ್ ಗಲಗಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ, ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಸಂತೋಷ ಬಾಡಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.