ಸಾರಾಂಶ
ದಾವಣಗೆರೆ ದೂಡಾ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎ.ವೈ.ಪ್ರಕಾಶ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಸರ್ಕಾರಿ ಅಧಿಕಾರಿಗಳು, ನೌಕರರು ಇತ್ತೀಚೆಗೆ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ಕೈಗೊಂಡು, ಅಮೂಲ್ಯ ಜೀವ ಕಳೆದುಕೊಳ್ಳುತ್ತಿರುವುದು ಸರಿಯಲ್ಲ, ಯಾವುದೇ ಕಾರಣಕ್ಕೂ ಎದೆಗುಂದದೆ, ಧೈರ್ಯವಾಗಿದ್ದು ಸವಾಲು, ಕಿರುಕುಳವನ್ನು ಕಾನೂನು ಚೌಕಟ್ಟಿನಲ್ಲಿ ಎದುರಿಸುವ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳುವಂತೆ ದೂಡಾ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎ.ವೈ.ಪ್ರಕಾಶ ಮನವಿ ಮಾಡಿದ್ದಾರೆ.ಸಾಮಾನ್ಯವಾಗಿ ವಿವಿಧ ಇಲಾಖೆಗಳಲ್ಲಿನ ಕೆಲಸದ ಒತ್ತಡ, ಮೇಲಾಧಿಕಾರಿಗಳು ಕಿರುಕುಳ, ರಾಜಕಾರಣಿಗಳ ಹಸ್ತಕ್ಷೇಪ, ಸಾಂಸಾರಿಕ ಒತ್ತಡಗಳು ಸರ್ಕಾರಿ ಅಧಿಕಾರಿಗಳು, ನೌಕರರಿಗೆ ರೋಸಿರಬಹುದು. ಹಾಗಂತ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಬಾರದು. ನಮ್ಮನ್ನೇ ನಂಬಿಕೊಂಡ ಕುಟುಂಬ, ತಂದೆ, ತಾಯಿ, ಪತ್ನಿ, ಮಕ್ಕಳು ಹೀಗೆ ಎಲ್ಲರನ್ನೂ ಒಮ್ಮೆ ನೆನಪಿಸಿಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ತಪ್ಪು ಮಾಡದವರು ಯಾರೂ ಇಲ್ಲ. ಒಂದು ವೇಳೆ ತಾವು ತಪ್ಪು ಮಾಡಿದ್ದರೆ ಕಾನೂನು ಚೌಕಟ್ಟಿನಲ್ಲಿ ಅದನ್ನು ಎದುರಿಸಿ. ಕೊಲೆ ಮಾಡಿದವರು, ಲೂಟಿ ಹೊಡೆದವರೇ ರಾಜಾರೋಷವಾಗಿ ಜೀವಿಸುತ್ತಿರುವಾಗ ಸರ್ಕಾರಿ ಅಧಿಕಾರಿಗಳು, ನೌಕರರು ಯಾಕೆ ಆತ್ಮಹತ್ಯೆಯತ್ತ ಯಾಕೆ ಆಲೋಚನೆ ಮಾಡುತ್ತೀರಿ. ಒಂದು ವೇಳೆ ತಪ್ಪು ಮಾಡಿದ್ದರೆ ತಪ್ಪಿತಸ್ಥರೆಂಬ ಆಪಾದನೆ ನಿಮ್ಮ ಮೇಲಿದ್ದರೆ ನೀವೂ ಕಾನೂನಿನ ಮೂಲಕ ಎದುರಿಸಿ. ಕಾನೂನಾತ್ಮಕವಾಗಿ ಅವುಗಳನ್ನು ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಿ ಎಂದು ಅವರು ಹೇಳಿದ್ದಾರೆ.ಮೇಲಾಧಿಕಾರಿಗಳ ಒತ್ತಡ ಹಾಗೂ ರಾಜಕಾರಣಿಗಳ ಹಸ್ತಕ್ಷೇಪವಿದ್ಧರೆ ಅದನ್ನು ಬಹಿರಂಗವಾಗಿ ಬಯಲುಗೊಳಿಸಿ. ಕಿರುಕುಳ ನೀಡುವ ಮೇಲಾಧಿಕಾರಿಗಳಾಗಲಿ ಅಥವಾ ರಾಜಕಾರಣಿಗಳಾಗಲಿ ರಾಜಾ ರೋಷವಾಗಿರುವಾಗ ನೀವೇಕೆ ಹೆದರಿ ಆತ್ಮಹತ್ಯೆಯ ನಿರ್ಧಾರ ಕೈಗೊಳ್ಳಬೇಕು ಎಂದು ಹಿರಿಯ ವಕೀಲ ಎ.ವೈ.ಪ್ರಕಾಶ ಆತ್ಮಸ್ಥೈರ್ಯ ತುಂಬಿದ್ದಾರೆ.