ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ದುಸ್ಸಾಹಸಕ್ಕೆ ಕೈ ಹಾಕಿರುವ ಸರ್ಕಾರಕ್ಕೆ ಎಚ್ಚರಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಲೇಖಕ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ದುಸ್ಸಾಹಸಕ್ಕೆ ಕೈ ಹಾಕಿರುವ ಸರ್ಕಾರಕ್ಕೆ ಎಚ್ಚರಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಲೇಖಕ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ವಂಚಿಸುವ ಕಾರ್ಯ ನಡೆಯುತ್ತಿವೆ. ಪ್ರಜ್ಞಾವಂತ ವ್ಯಕ್ತಿ ಮೌನವಾಗಿದ್ದರೆ ಅದು ತನಗೆ ತಾನೇ ಮಾಡಿಕೊಳ್ಳುವ ದ್ರೋಹ. ಶಾಲೆಗಳನ್ನು ಮುಚ್ಚುವ ದುಃಸಾಹಸಕ್ಕೆ ಸರ್ಕಾರ ಕೈ ಹಾಕಿದೆ. ಸರ್ಕಾರಕ್ಕೆ ಎಚ್ಚರಿಸಬೇಕಾದ ಅಗತ್ಯವಿದೆ. ಮಕ್ಕಳನ್ನು ವೇದಿಕೆಗೆ ಹತ್ತಿಸಿ ಕವನ ವಾಚನ, ಅವರ ಮಾತುಗಳನ್ನು ಕೇಳುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಅಪರೂಪ. ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಸಾಹಿತ್ಯ ಪರಿಷತ್‌ನಲ್ಲಿ ಅನೇಕ ಸಮ್ಮೇಳನಗಳು ನಡೆದಿವೆ. ಆದರೆ ಮಕ್ಕಳ ಕವಿಗೋಷ್ಠಿ ಅತಿ ವಿರಳ. ಆ ಕೊರತೆಯನ್ನು ಈ ಸಮ್ಮೇಳನ ನೀಗಿಸಿದೆ ಎಂದರು.ಕುಗ್ರಾಮಗಳಲ್ಲಿ 10 ಮಕ್ಕಳಿರಲಿ, ಅಲ್ಲಿನ ಶಾಲೆಯನ್ನು ರಕ್ಷಿಸಬೇಕಾದದ್ದು ಸರ್ಕಾರದ ಕರ್ತವ್ಯ. ಕಾನ್ವೆಂಟ್ ಶಾಲೆ ಪ್ರಾರಂಭವಾದರೆ ಸುತ್ತಲಿನ ಶಾಲೆಗಳು ಬಡವಾದಂತೆ. ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಸರ್ಕಾರ ಶಾಲೆ ಮುಚ್ಚುವುದಲ್ಲ, ವಾಸ್ತವಿಕ ಸನ್ನಿವೇಶ ಏನು ಎಂಬುದನ್ನು ಅರ್ಥ ಮಾಡಿಕೊಂಡು ಪ್ರಜ್ಞಾಪೂರ್ವಕವಾಗಿ ನಡೆಯಲಿ ಎಂದು ಸಲಹೆ ಮಾಡಿದರು.
ಸಾಮಾಜಿಕ ಜವಾಬ್ದಾರಿ ನಿರ್ವಹಿಸದೆ ಹೋದರೆ ಆತ್ಮದ್ರೋಹ ಮಾಡಿದಂತಾಗುತ್ತದೆ. ಶಿಕ್ಷಣ ಅವನತಿ ಹೊಂದುತ್ತಿದ್ದು, ಕೇಂದ್ರದವರು ಸುಳ್ಳು ಹೇಳುತ್ತಾರೆ ಎಂದು ರಾಜ್ಯದವರು ಸುಳ್ಳು ಹೇಳುವುದು ಬೇಡ. ನಾವು ಮೌನವಾಗಿದ್ದರೆ ಮುಂದಿನ ಪೀಳಿಗೆಗೆ ನಾವು ಏನು ನೀಡಿ ಹೋಗುತ್ತೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.ಸಾಹಿತ್ಯ ಪರಿಷತ್ ವೇದಿಕೆ ಇರುವುದು ತೌಡು ಕುಟ್ಟಲು ಮಾತ್ರವಲ್ಲ. ಸಾಮಾಜಿಕ ಬದ್ಧತೆ ತೋರಲು ಸಹ ಇದೆ. ಪ್ರಶಸ್ತಿಗಳು ನಮ್ಮನ್ನು ಎಚ್ಚರಿಸುವ ಬಡಿಗೋಲುಗಳು. ಆದ್ದರಿಂದ ಅದನ್ನು ಸ್ವೀಕರಿಸುವವರು ಬದ್ದತೆಯಿಂದ ಇರಬೇಕು. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಕೆ.ಎಸ್. ಸಿದ್ದಲಿಂಗಪ್ಪನವರು ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ. ಈ ಕಾರ್ಯ ಜಿಲ್ಲೆಯಲ್ಲಿ ಹೀಗೆ ಮುಂದುವರೆಯಲಿ ಎಂದರು.
ಇದೇ ಸಂದರ್ಭದಲ್ಲಿ ದ್ವಾರನಕುಂಟೆ ಪಾತಣ್ಣ, ಡಾ.ಕೆ.ವಿ.ಮುದ್ದವೀರಪ್ಪ, ಜಲಜಜೈನ್, ವಿದ್ಯಾ ಅರಮನೆ, ಉಗಮ ಶ್ರೀನಿವಾಸ್ ರವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅನು ಶಾಂತರಾಜು, ಪತ್ರಕರ್ತ ಜಗನಾಥ್ ಕಾಳೇನಹಳ್ಳಿ, ಅಮರ್‌ನಾಥ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಕರೀಗೌಡ ಬೀಚನಹಳ್ಳಿ, ಜಿಲ್ಲಾ ಕಸಾಪ ಕೆ.ಎಸ್. ಸಿದ್ದಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.