ಮಗುವನ್ನು ಶಿಕ್ಷಣದಿಂದ ದೂರ ಮಾಡಬೇಡಿ

| Published : Jul 19 2025, 02:00 AM IST

ಸಾರಾಂಶ

ಚಿತ್ರದುರ್ಗ ನಗರದ ಡಯಟ್‌ನಲ್ಲಿ ಪ್ರಥಮ್ ಫೌಂಡೇಶನ್ ಮೈಸೂರು ಇವರ ವತಿಯಿಂದ ಜಿಲ್ಲೆಯ ಬಿಆರ್‌ಪಿ ಮತ್ತು ಸಿಆರ್‌ಪಿ ಶುಕ್ರವಾರ ಆಯೋಜಿಸಿದ್ದ ‘ಓದು ಕರ್ನಾಟಕ’ ಪುನಶ್ಚೇತನ ಕಾರ್ಯಾಗಾರವನ್ನು ಹಿರಿಯ ಉಪನ್ಯಾಸಕಿ ಎಸ್.ಆರ್.ಪೂರ್ಣಿಮಾ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಕ್ಕಳನ್ನು ಶಿಕ್ಷಣದಿಂದ ದೂರ ಮಾಡಬೇಡಿ. ಎಲ್ಲಾ ಮಕ್ಕಳಿಗೂ ಶಿಕ್ಷಣ ಪಡೆಯುವ ಹಕ್ಕಿದ್ದು ಅದನ್ನು ಒದಗಿಸಿಕೊಡುವುದು ನಮ್ಮ ಹೊಣೆ ಎಂದು ಡಯಟ್ ಹಿರಿಯ ಉಪನ್ಯಾಸಕಿ ಪೂರ್ಣಿಮಾ ಹೇಳಿದರು.

ಡಯಟ್ ಮತ್ತು ಪ್ರಥಮ್ ಫೌಂಡೇಶನ್ ಮೈಸೂರು ಇವರ ಸಹಯೋಗದಲ್ಲಿ ಜಿಲ್ಲೆಯ ಬಿ.ಆರ್.ಪಿ ಮತ್ತು ಸಿ.ಆರ್.ಪಿಗಳಿಗೆ ಶುಕ್ರವಾರ ಆಯೋಜಿಸಿದ್ದ ‘ಓದು ಕರ್ನಾಟಕ’ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಓದು ಕರ್ನಾಟಕ ಕಾರ್ಯಕ್ರಮ 60 ದಿನಗಳಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಕಲಿಯಲು ಅನುಕೂಲವಾಗಿದೆ. ಎಫ್.ಎಲ್.ಎನ್ (ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ) ಸಾಧನೆ ಮೇಲೆ ಕಲಿಕೆಯ ಎಲ್ಲಾ ಚಟುವಟಿಕೆಗಳು ಅನುಷ್ಠಾನವಾಗಬೇಕಿದ್ದು ತಾಲೂಕು ಹಂತದ ಅನುಷ್ಠಾನಾಧಿಕಾರಿಗಳ ತೊಡಗಿಸಿಕೊಳ್ಳುವಿಕೆ ಮುಖ್ಯವಾಗಿದೆ. ಸಿ.ಆರ್.ಪಿಗಳು ಶೈಕ್ಷಣಿಕ ಚಿಂತನೆಗಾರರಾಗಿ ತಮ್ಮ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಮಟ್ಟವನ್ನು ಗುರುತಿಸಿಕೊಂಡು ತರಬೇತಿಯ ಅಂಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದರು.

ನೋಡಲ್ ಅಧಿಕಾರಿ ಸಿ.ಎಸ್.ಲೀಲಾವತಿ ಮಾತನಾಡಿ, ಓದು ಕರ್ನಾಟಕ ಕಾರ್ಯಕ್ರಮ ಎಫ್.ಎಲ್.ಎನ್ ಗೆ ಪೂರಕ ಕಾರ್ಯಕ್ರಮವಾಗಿದ್ದು, ಮಕ್ಕಳಲ್ಲಿ ಓದು, ಬರಹ ಮತ್ತು ಸಂಖ್ಯಾಜ್ಞಾನ ಸಾಮರ್ಥ್ಯ ಪಡೆಯಲು ಸಹಕಾರಿಯಾಗಿದೆ. ಕ್ಲಸ್ಟರ್ ಹಂತದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳ 4 ಮತ್ತು 5ನೇ ತರಗತಿಗೆ ಬೋಧಿಸುತ್ತಿರುವ ಶಿಕ್ಷಕರಿಗೆ ತರಬೇತಿ ನೀಡಬೇಕು. ಶನಿವಾರ ಶಾಲಾ ಅವಧಿ ಮುಗಿದ ನಂತರ 2:30 ರಿಂದ 5:30 ರವರೆಗೆ ಕನ್ನಡ, ಮತ್ತೊಂದು ಶನಿವಾರ ಗಣಿತ ವಿಷಯ ಬೋಧಿಸುವ ಶಿಕ್ಷಕರಿಗೆ ತರಬೇತಿ ನೀಡಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.

ಉಪನ್ಯಾಸಕ ಎಸ್.ಬಸವರಾಜು, ಬಿಆರ್‌ಸಿ ತಿಪ್ಪೇಸ್ವಾಮಿ, ಸಂಪನ್ಮೂಲ ವ್ಯಕ್ತಿಗಳಾದ ಪರಶುರಾಮ್, ಪ್ರಕಾಶ್, ತಾಂತ್ರಿಕ ಸಹಾಯಕ ಎಚ್.ಅವಿನಾಶ್, ಬಿ.ಆರ್.ಪಿ ಖಲಂದರ್, ಸಿ.ಆರ್.ಪಿ ಗಿರಿಜಮ್ಮ, ರೂಪ, ಸತೀಶ್, ವರಲಕ್ಷ್ಮಿ, ಸೌಭಾಗ್ಯ, ಅನುರಾಧ, ಕೌಸರ್‌ಬಾನು, ಜಿಲ್ಲೆಯ ಸಿ.ಆರ್.ಪಿ, ಬಿ.ಆರ್.ಪಿಗಳು ಇದ್ದರು.