ಸಭೆಗೆ ತಪ್ಪು ಮಾಹಿತಿ ನೀಡಬೇಡಿ, ಈ ಕ್ಷಣ ಪಾರಾಗಲು ಪ್ರಯತ್ನಿಸದಿರಿ ಇಂತಹ ಪದ್ಧತಿಯನ್ನು ಕೈ ಬಿಡಿ, ಸಭೆಗೆ ಸರಿಯಾದ ಮಾಹಿತಿ ನೀಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಇಲ್ಲವಾದಲ್ಲಿ ಜನರನ್ನೇ ನಿಮ್ಮ ಕಚೇರಿಗಳಿಗೆ ಕಳುಹಿಸಬೇಕಾಗುತ್ತದೆ ಎಂದು ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಅಧಿಕಾರಿಗಳಿಗೆ ಖಡಕ್‌ ಸೂಚನೆ ನಿಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸಭೆಗೆ ತಪ್ಪು ಮಾಹಿತಿ ನೀಡಬೇಡಿ, ಈ ಕ್ಷಣ ಪಾರಾಗಲು ಪ್ರಯತ್ನಿಸದಿರಿ ಇಂತಹ ಪದ್ಧತಿಯನ್ನು ಕೈ ಬಿಡಿ, ಸಭೆಗೆ ಸರಿಯಾದ ಮಾಹಿತಿ ನೀಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಇಲ್ಲವಾದಲ್ಲಿ ಜನರನ್ನೇ ನಿಮ್ಮ ಕಚೇರಿಗಳಿಗೆ ಕಳುಹಿಸಬೇಕಾಗುತ್ತದೆ ಎಂದು ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಅಧಿಕಾರಿಗಳಿಗೆ ಖಡಕ್‌ ಸೂಚನೆ ನಿಡಿದರು.

ಸ್ಥಳೀಯ ತಾಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆ ಆರಂಭದಲ್ಲಿ ಹಿಂದಿನ ಸಭೆಯ ಅನುಪಾಲನಾ ವರದಿಯನ್ನು ಚರ್ಚಿಸಿದರು. ಈ ವೇಳೆ ಗ್ರಾಮೀಣ ಭಾಗದ ಕೆಲ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ವಿಚಾರವಾಗಿ ಟ್ಯಾಂಕ್‌ ನಿರ್ಮಾಣ, ಪೈಪ್‌ ಲೈನ್‌ ಅಳವಡಿಕೆ, ಶುದ್ಧ ಕುಡಿವ ನೀರಿನ ಸರಬರಾಜು ಸೇರಿ ಮತ್ತಿತರ ವಿಷಯ ಚರ್ಚಿಸುತ್ತಿದ್ದ ವೇಳೆ ಅಧಿಕಾರಿಗಳು ಸಭೆಗೆ ತಪ್ಪು ಹಾಗೂ ಬೇಕಾಬಿಟ್ಟಿ ಮಾಹಿತಿ ಒದಗಿಸಿದ್ದನ್ನು ಗಮನಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದರು.

ಗ್ರಾಮೀಣ ಭಾಗಕ್ಕೆ ಶುದ್ಧ ಹಾಗೂ ನಿರಂತರ ನೀರು ಸರಬರಾಜು ಮಾಡಲು ಕೈಗೊಂಡಿರುವ ಕಾಮಗಾರಿಗಳನ್ನು ತ್ವರೀತಗತಿಯಲ್ಲಿ ಪೂರ್ಣಗೊಳಿಸಬೇಕು ಈ ವಿಚಾರವಾಗಿ ಅಲ್ಲಲ್ಲಿ ಉಂಟಾಗಿರುವ ಅಡೆ-ತಡೆ ಬಗೆಹರಿಸಿಕೊಂಡು ಜನರಿಗೆ ನೀರು ಒದಗಿಸಬೇಕು ಎಂದರು.

ಕೃಷಿ ಇಲಾಖೆಯ ಚಟುವಟಿಕೆಗಳ ಬಗ್ಗೆ ಶಾಸಕರು ಕೇಳಿದರು. ಮುಂಗಾರು ಹಂಗಾಮಿನಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ಸುರಿದ ಮಳೆಯಿಂದಾಗಿ ಬೆಳೆಹಾನಿಯಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಗಳಿಂದ ಜಂಟಿ ಸಮೀಕ್ಷೆ ಕೈಗೊಂಡಿದ್ದು ಬೆಳೆಹಾನಿ ವರದಿ ಸಲ್ಲಿಸಲಾಗಿದೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 10,672 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ನ್ಯಾನೋ ಯೂರಿಯಾ ಬಳಕೆ ಹಾಗೂ ಪ್ರಯೋಜನಗಳ ಬಗ್ಗೆ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ತರಬೇತಿ ನಡೆಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಶಾಸಕರು ಕೇಳಿದರು. ರಾಯಚೂರು ತಾಲೂಕಿನ ಗ್ರಾಮೀಣ ಭಾಗದ ಒಟ್ಟು 27 ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಮತ್ತು ಜನಸಂಖ್ಯೆಯನುಸಾರ ಅಗತ್ಯವಿರುವ ಕಡೆಗೆ ಕೆಪಿಎಸ್ ಶಾಲೆಗಳನ್ನು ಆರಂಭಿಸುವುದಕ್ಕೆ ಮಾರ್ಪಾಡು ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲು ಶಾಸಕರು ಬಿಇಓ ಅವರಿಗೆ ಸೂಚನೆ ನೀಡಿದರು.

ಸಿಂಗನೋಡಿ ಟ್ರಿ ಪಾರ್ಕ್ ಹಾಗೂ ಗಾಣದಾಳ ದೈವವನ ಕಾರ್ಯದ ಬಗ್ಗೆ ಶಾಸಕರು ಕೇಳಿದರು.

ಯರಗೇರಾ ಟ್ರಿ ಪಾರ್ಕ್‌ 93.1055 ರು. ಮಂಜೂರಾಗಿರುತ್ತದೆ. ಸಿಂಗನೋಡಿ ಟ್ರಿ ಪಾರ್ಕ್‌, ಗಾಣದಾಳ ದೈವಿವನಕ್ಕೆ ಡಿಪಿಆರ್ ಮಾಡಿ ಕಳುಹಿಸಿದ್ದು, ಡಿಪಿಆರ್‌ ಗಳಿಗೆ ಅನುಮೋದನೆ ಸಿಕ್ಕಿದೆ. ಪ್ರಸ್ತುತ ವರ್ಷ ಸಿಂಗನೋಡಿ ಟ್ರಿ ಪಾರ್ಕ್‌ಗೆ 50ಲಕ್ಷ ಹಾಗೂ ಪಂಚಮುಖಿ ಗಾಣದಾಳ ದೈವಿವನಕ್ಕೆ 19 ಲಕ್ಷ ಅನುದಾನ ಮಂಜೂರಾತಿಗೆ ಆದೇಶವಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರತಿಕ್ರಿಯಿಸಿದರು.

ಸಭೆಯಲ್ಲಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ತಹಸೀಲ್ದಾರ ಸುರೇಶ ವರ್ಮಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪವಾರ, ವಿವಿಧ ನಿಗಮಗಳ ಅಧ್ಯಕ್ಷರು, ನಾಮನಿರ್ದೇಶಿತ ಸದಸ್ಯರು ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿ-ಸಿಬ್ಬಂದಿ ಹಾಜರಿದ್ದರು.