ವಾಹನ ಚಲಾಯಿಸುವಾಗ ಮೊಬೈಲ್ ಬಳಸದಿರಿ: ನೇರಳೆ ವೀರಭದ್ರಯ್ಯ ಭವಾನಿ

| Published : Jan 29 2025, 01:31 AM IST

ಸಾರಾಂಶ

ಹೆಲ್ಮೆಟ್ ಜೀವರಕ್ಷಕ ಎಂಬುದು ಸತ್ಯ. ಅಪಘಾತಗಳ ಸಂದರ್ಭದಲ್ಲಿ ಹೆಲ್ಮೆಟ್ ಕಾರಣದಿಂದ ಹಲವಾರು ಜೀವಗಳು ಉಳಿದಿರುವ ನಿದರ್ಶನಗಳು ಸಾಕಷ್ಟಿವೆ. ಹೀಗಾಗಿ ಹೆಲ್ಮೆಟ್‌ ಬಗ್ಗೆ ಸವಾರರು ನಿರ್ಲಕ್ಷ್ಯ ಮಾಡಬಾರದು. ಸಂಚಾರಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಭಯಕ್ಕೆ ಅಥವಾ ದಂಡ ಕಟ್ಟಬೇಕು ಎಂಬ ಭಯದಿಂದ ಕಾಟಾಚಾರಕ್ಕೆ ಹೆಲ್ಮೆಟ್ ಬಳಸಬಾರದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಂಚಾರಿ ನಿಯಮಗಳನ್ನು ಎಲ್ಲಾ ವಾಹನ ಸವಾರರು, ಚಾಲಕರು ತಪ್ಪದೆ ಪಾಲಿಸಬೇಕು. ಮುಖ್ಯವಾಗಿ ಚಾಲನೆಯ ವೇಳೆ ಮೊಬೈಲ್ ಬಳಸಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನೇರಳೆ ವೀರಭದ್ರಯ್ಯ ಭವಾನಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳು, ಬೆಸ್ಟ್ ಪಿಯು ಕಾಲೇಜು ಮತ್ತು ಗೋಲ್ಡನ್ ಗ್ಲಿಮ್ಸ್ ಕಾಲೇಜು ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನದ ಅಂಗವಾಗಿ ನಡೆದ ಜಾಥಾ ಕಾರ್ಯಕ್ರಮಕ್ಕೆ ಹಸಿರುವ ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿ, ಹೆಲ್ಮೆಟ್ ಜೀವರಕ್ಷಕ ಎಂಬುದು ಸತ್ಯ. ಅಪಘಾತಗಳ ಸಂದರ್ಭದಲ್ಲಿ ಹೆಲ್ಮೆಟ್ ಕಾರಣದಿಂದ ಹಲವಾರು ಜೀವಗಳು ಉಳಿದಿರುವ ನಿದರ್ಶನಗಳು ಸಾಕಷ್ಟಿವೆ. ಹೀಗಾಗಿ ಹೆಲ್ಮೆಟ್‌ ಬಗ್ಗೆ ಸವಾರರು ನಿರ್ಲಕ್ಷ್ಯ ಮಾಡಬಾರದು. ಸಂಚಾರಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಭಯಕ್ಕೆ ಅಥವಾ ದಂಡ ಕಟ್ಟಬೇಕು ಎಂಬ ಭಯದಿಂದ ಕಾಟಾಚಾರಕ್ಕೆ ಹೆಲ್ಮೆಟ್ ಬಳಸಬಾರದು. ವಾಹನ ಚಾಲನೆ ಮಾಡುವಾಗ ಯಾವುದೇ ಪರಿಸ್ಥಿತಿಗಳು ಎದುರಾದರೂ ಶಿರಸ್ತ್ರಾಣವು ನಮ್ಮ ಪ್ರಾಣವನ್ನು, ತಮ್ಮ ಕುಟುಂಬವನ್ನು ರಕ್ಷಿಸುತ್ತದೆ ಎಂಬುದನ್ನು ಸದಾ ಮನದಲ್ಲಿಟ್ಟುಕೊಳ್ಳಬೇಕು. ಹಿಂಬದಿಯ ಸವಾರರು ಸಹ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿರುತ್ತದೆ. ಸರಿಯಾದ ಸುರಕ್ಷತಾ ಮಾರ್ಗದಲ್ಲಿ ಹೆಲ್ಮೆಟ್ ಧರಿಸಿ ತಮ್ಮ ಜೀವವನ್ನು ಹಾಗೂ ಸಹ ಪ್ರಯಾಣಿಕರ ಜೀವವನ್ನು ಉಳಿಸಿ, ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ, ಜಾಗೃತೆಯಿಂದ ವಾಹನ ಚಲಾಯಿಸಬೇಕು. ರಸ್ತೆಯಲ್ಲಿ ಸಂಚರಿಸುವಾಗ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಶಾಲಾ- ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಬೇಕು. ಎಲ್ಲರೂ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ ತಮ್ಮ ಜೀವವನ್ನು ರಕ್ಷಿಸಿಕೊಳ್ಳಬೇಕು, ಆ ಮೂಲಕ ಪೊಲೀಸ್ ಸಿಬ್ಬಂದಿ ಸಂಚಾರಿ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಂಚಾರಿ ಸುರಕ್ಷತಾ ಜಾಥಾವು ಜಿಲ್ಲಾ ನ್ಯಾಯಾಲಯ ಆವರಣದಿಂದ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ವಾಹನ ಸವಾರರಿಗೆ, ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಿ ಅಂಬೇಡ್ಕರ್ ವೃತ್ತದಲ್ಲಿ ಮುಕ್ತಾಯವಾಯಿತು. ವಿವಿಧ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಸಂಚಾರಿ ನಿಯಮಗಳು ಹಾಗೂ ಸಂಚಾರಿ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಹಾಗೂ ಬ್ಯಾನರ್ ಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುವ ಮೂಲಕ ಅರಿವು ಮೂಡಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಶಿಲ್ಪ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸಿಂ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದರೈ, ಪ್ರಾದೇಶಿಕ ಸಾರಿಗೆ ನಿರೀಕ್ಷಕಿ ಅರುಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಷ್, ಕಾರ್ಯದರ್ಶಿ ವೆಂಕಟೇಶ್, ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಸದಸ್ಯರಾದ ಕೆ ಎಸ್.ನಾರಾಯಣಸ್ವಾಮಿ, ಹೋಟೆಲ್ ರಾಮಣ್ಣ, ಹೆನ್ರಿ ಪ್ರಸನ್ನ, ಗುಂಪುಮರದ ಆನಂದ್, ನರ್ಮದಾರೆಡ್ಡಿ, ಇಬ್ರಾಹಿಂ ಕಲೀಲ್, ವಕೀಲರ ಸಂಘದ ಸದಸ್ಯರು, ಪದಾಧಿಕಾರಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಇದ್ದರು.

ಕಾರು ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯ:

ಇನ್ನೂ ಕಾರು ಅಥವಾ ಲಘು ವಾಹನಗಳ ಚಾಲಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ, ಚಾಲನೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಪಾಯವನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಸೀಟ್ ಬೆಲ್ಟ್ ಧರಿಸುವುದು ಹಾಗೂ ಸಹ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿರುತ್ತದೆ. ಈ ರೀತಿಯ ಸುರಕ್ಷಿತ ಸಂಚಾರಕ್ಕೆ ಬೇಕಾದ ಸುರಕ್ಷತಾ ಕ್ರಮಗಳನ್ನು ಸ್ವಯಂಪ್ರೇರಣೆಯಿಂದ, ಅನುಸರಿಸುವುದು ಬಹಳ ಅಗತ್ಯ. ಕೆಲವು ಚಾಲಕರು ಸೀಟ್ ಬೆಲ್ಟ್ ಧರಿಸುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ಸಂಚಾರಿ ನಿಯಮಗಳ ಕಾನೂನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಆಗುವ ಅಪಘಾತಗಳನ್ನು ಕಡಿಮೆ ಮಾಡಬಹುದು. ಯಾವುದೇ ಪ್ರಾಣಹಾನಿಯಾಗದಂತೆ ತಪ್ಪಿಸಿಕೊಳ್ಳಬಹುದು. ಸಾರ್ವಜನಿಕರ ಹಿತದೃಷ್ಟಿಯಿಂದ ಜನರ ಜೀವಗಳನ್ನು ರಕ್ಷಿಸಲು ಕಳೆದ 11 ವರ್ಷಗಳಿಂದ ಹೋಟೆಲ್ ರಾಮಣ್ಣನವರು ಹೆಲ್ಮೆಟ್ ಗಳನ್ನು ಉಚಿತವಾಗಿ ವಾಹನ ಸವಾರರಿಗೆ ವಿತರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.