‘ಬಾಲ್ಯದಲ್ಲೇ ಸಂಸಾರದ ಜಂಜಾಟ ಬೇಡ: ನ್ಯಾಯಾಧೀಶ

| Published : Jan 16 2024, 01:46 AM IST

ಸಾರಾಂಶ

ಬಾಲ್ಯವಿವಾಹ, ಬಾಲಕಾರ್ಮಿಕತೆ ಮುಕ್ತ ಸಮಾಜ ನಿರ್ಮಾಣವೇ ಕಾನೂನು ಸೇವಾ ಪ್ರಾಧಿಕಾರದ ಆಶಯವಾಗಿದೆ, ಇದಕ್ಕಾಗಿ ಇರುವ ಕಠಿಣ ಕಾನೂನುಗಳ ಕುರಿತು ಜನತೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ಕೋಲಾರ

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಬಾಲ್ಯವಿವಾಹ, ಬಾಲ ಕಾರ್ಮಿಕತೆಗೆ ಅವಕಾಶ ನೀಡಿದಿರಿ ಆಟವಾಡುತ್ತಾ ಕಲಿಯುವ ವಯಸ್ಸಿನಲ್ಲಿ ಮಕ್ಕಳನ್ನು ಸಂಸಾರದ ಜಂಜಾಟಕ್ಕೆ ನೂಕದಿರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಸಲಹೆ ನೀಡಿದರು.

ತಾಲೂಕಿನ ಬೆಗ್ಲಿಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದಿಂದ ಮಕ್ಕಳಿಗೆ ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆಗಳ ಕುರಿತು ಅರಿವು ನೀಡುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಲಕಾರ್ಮಿಕ ಮುಕ್ತ ಸಮಾಜ

ಬಾಲ್ಯವಿವಾಹ, ಬಾಲಕಾರ್ಮಿಕತೆ ಮುಕ್ತ ಸಮಾಜ ನಿರ್ಮಾಣವೇ ಕಾನೂನು ಸೇವಾ ಪ್ರಾಧಿಕಾರದ ಆಶಯವಾಗಿದೆ, ಇದಕ್ಕಾಗಿ ಇರುವ ಕಠಿಣ ಕಾನೂನುಗಳ ಕುರಿತು ಜನತೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ, ವಿದ್ಯಾರ್ಥಿಗಳು ಈ ಕುರಿತು ಪೋಷಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಸೇತುವೆಯಾಗಿ ಕೆಲಸ ಮಾಡಬೇಕು ಎಂದರು.

ಸಮಾಜವನ್ನು ಕಾಡುತ್ತಿರುವ ಪಿಡುಗುಗಳಾಗಿದ್ದು, ಅದರ ತಡೆಗೆ ವಿದ್ಯಾರ್ಥಿ, ಯುವಜನತೆ ಮನಸ್ಸು ಮಾಡಬೇಕು, ಪೋಷಕರಿಗೆ ಅರಿವು ನೀಡುವುದರ ಜತೆಗೆ ಅಂತಹ ಪ್ರಕರಣಗಳು ಕಂಡು ಬಂದರೆ ಮಕ್ಕಳ ಸಹಾಯವಾಣಿಗೆ ದೂರು ನೀಡಬೇಕು, ಯಾವುದೇ ಮಗು ದೌರ್ಜನ್ಯಕ್ಕೆ ಒಳಗಾದರೆ ಕೂಡಲೇ ಮಾಹಿತಿ ನೀಡಿ ಎಂದರು.

ಬಾಲ್ಯವಿವಾಹ ಅಪರಾಧ

ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಮಕ್ಕಳ ಹಕ್ಕುಗಳಿಗೆ ಚ್ಯುತಿಯಾದರೆ ೧೦೯೮ ಅಲ್ಲದೇ ೧೪೪೯೯ ಸಹಾಯವಾಣಿಗೂ ದೂರು ಸಲ್ಲಿಸಬಹುದು, ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಮದುವೆಯಾಗಲು ಹೆಣ್ಣಿಗೆ ೧೮ ಹಾಗೂ ಗಂಡಿಗೆ ೨೧ ವರ್ಷ ಕಡ್ಡಾಯ, ಅದಕ್ಕೂ ಮೊದಲೇ ಮದುವೆ ಮಾಡಿದರೆ ಬಾಲ್ಯವಿವಾಹ ಕಾಯ್ದೆಯಡಿ ಅಪರಾಧವಾಗಿದ್ದ ಜೈಲು ಹಾಗೂ ೧ ಲಕ್ಷ ದಂಡ ಮತ್ತು ಹೆಣ್ಣು ಅಪ್ರಾಪ್ತೆಯಾಗಿದ್ದಾಗಲೇ ಗರ್ಭಿಣಿಯಾದರೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ಖಚಿತ ಎಂದಯ ಹೇಳಿದರು.

ವಕೀಲ ಎಲ್.ಶ್ರೀನಿವಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ಯುವಕರು, ಮಕ್ಕಳು ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ, ಇದರಿಂದ ಅಪಾರಾಧಗಳಿಗೆ ಅವಕಾಶವೂ ನೀಡಿದಂತಾಗಿದೆ, ಎಲ್ಲೇ ಆಗಲಿ ಮಾದಕ ವಸ್ತು ಮಾರಾಟ ನಡೆಯುತ್ತಿದ್ದರೆ ಕೂಡಲೇ ಪೊಲೀಸರಿಗೆ ದೂರು ನೀಡಿ ಮಾದಕ ವ್ಯಸನಕ್ಕೆ ದಾಸರಾಗುವುದನ್ನು ತಪ್ಪಿಸಿ ಎಂದು ತಿಳಿಸಿದರು.

ಪೋಕ್ಸೋ ಬಗ್ಗೆ ಮಾಹಿತಿ ನೀಡಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪ್ರಶಾಂತ್ ಮಾತನಾಡಿ, ಬಾಲ್ಯವಿವಾಹ, ಬಾಲಕಾರ್ಮಿಕತೆ ಕಾಯ್ದೆ ಹಾಗೂ ಪೋಕ್ಸೋ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಸರ್ಕಾರ ಅನೇಕ ಕಠಿಣ ಕಾನೂನು ತಂದಿದೆ, ಈ ನಿಟ್ಟಿನಲ್ಲಿ ಅಂತಹ ಕಾನೂನುಗಳ ಕುರಿತು ಮಕ್ಕಳು ತಿಳಿದುಕೊಂಡು ಸಮಾಜ, ಪೋಷಕರಿಗೆ ಮನವರಿಕೆ ಮಾಡಿಕೊಡಿ ಎಂದರು.