ಕೊರತೆ ನೆಪ ಮಾಡಿಕೊಂಡು ಅದ್ಭುತ ಕ್ರೀಡಾ ಪ್ರತಿಭೆ ಹಾಳು ಮಾಡಿಕೊಳ್ಳಬೇಡಿ: ಎನ್.ಪ್ರಕಾಶ್

| Published : Aug 30 2024, 01:04 AM IST

ಕೊರತೆ ನೆಪ ಮಾಡಿಕೊಂಡು ಅದ್ಭುತ ಕ್ರೀಡಾ ಪ್ರತಿಭೆ ಹಾಳು ಮಾಡಿಕೊಳ್ಳಬೇಡಿ: ಎನ್.ಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ತಂದೆ ತಾಯಿ, ರಾಷ್ಟ್ರ, ನಮ್ಮ ಗುರಿಯನ್ನು ಗೌರವಿಸಿದಾಗ ಮಾತ್ರ ಕನಸು ಸಾಕಾರವಾಗಿ ಸಾಧನೆ ಕೈಗೂಡುತ್ತದೆ. ಒಂದು ವರ್ಷ ಕ್ರೀಡಾಂಗಣದಲ್ಲಿ ಕಷ್ಟ ಪಟ್ಟರೆ ಯಾರೆ ಆಗಲಿ ಒಳ್ಳೆಯ ಕ್ರೀಡಾ ಪಟುಗಳಾಗಿ ಹೊರಹೊಮ್ಮುತ್ತೀರಿ. ಪರಸ್ಪರ ಆರೋಗ್ಯಕರ ಸ್ಪರ್ಧೆ ಇರಲಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಕ್ರೀಡಾಂಗಣ, ಕ್ರೀಡಾ ಸಾಧನೆಗಳ ಕೊರತೆ ನೆಪ ಮಾಡಿಕೊಂಡು ತಮ್ಮಲ್ಲಿರುವ ಅದ್ಭುತ ಕ್ರೀಡಾ ಪ್ರತಿಭೆಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ವಾಲಿಬಾಲ್ ತಂಡದ ಆಟಗಾರ ಹಾಗೂ ರಾಷ್ಟ್ರೀಯ ಮಹಿಳಾ ವಾಲಿಬಾಲ್ ತಂಡದ ತರಬೇತುದಾರ ಎನ್.ಪ್ರಕಾಶ್ ಹೇಳಿದರು.

ಪಟ್ಟಣದ ಶ್ರೀಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಕ್ರೀಡಾಪಟು ಕೊರತೆಗಳನ್ನು ಆಯುಧವನ್ನಾಗಿ ಮಾಡಿಕೊಳ್ಳಬಾರದು. ಆಟದ ಮೈದಾನದಲ್ಲಿ ಒಳ್ಳೆಯ ಕಾರಣಕ್ಕಾಗಿ ಸಮಯ ವಿನಿಯೋಗಿಸಿದರೆ ನಿಮ್ಮ ದೇಹ, ಮನಸ್ಸಿನ ಜೊತೆಗೆ ಬದುಕು ಕೂಡ ಹಸನಾಗುತ್ತದೆ ಎಂದರು.

ಕೆಟ್ಟದ್ದನ್ನು ಮಾಡಲು ಕ್ಷಣ ಸಾಕು. ಒಳ್ಳೆಯದಕ್ಕೆ ನಿರಂತರ ಶ್ರಮ, ಕಠಿಣ ಶ್ರದ್ಧೆ ಬೇಕು. ಒಳ್ಳೆಯದನ್ನು ಮಾಡಿದಾಗ ಈ ಸಮಾಜ ಎಂದಿಗೂ ಗೌರವಿಸುತ್ತದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ನಿಮ್ಮ ಗುರಿ ಸಾಧಿಸುವ ನಿಟ್ಟಿನಲ್ಲಿ ವಿಚಲಿತರಾಗಬೇಡಿ ಎಂದರು.

ನಮ್ಮ ತಂದೆ ತಾಯಿ, ರಾಷ್ಟ್ರ, ನಮ್ಮ ಗುರಿಯನ್ನು ಗೌರವಿಸಿದಾಗ ಮಾತ್ರ ಕನಸು ಸಾಕಾರವಾಗಿ ಸಾಧನೆ ಕೈಗೂಡುತ್ತದೆ. ಒಂದು ವರ್ಷ ಕ್ರೀಡಾಂಗಣದಲ್ಲಿ ಕಷ್ಟ ಪಟ್ಟರೆ ಯಾರೆ ಆಗಲಿ ಒಳ್ಳೆಯ ಕ್ರೀಡಾ ಪಟುಗಳಾಗಿ ಹೊರಹೊಮ್ಮುತ್ತೀರಿ. ಪರಸ್ಪರ ಆರೋಗ್ಯಕರ ಸ್ಪರ್ಧೆ ಇರಲಿ ಎಂದರು.

ನೆಪಗಳಿಂದ ಆಚೆ ಬಂದು ಕ್ರೀಡೆಯನ್ನು ಪ್ರೀತಿಸಿದಾಗ ಮಾತ್ರ ಕ್ರೀಡೆ ಸುಂದರ ಬದುಕು ಕಟ್ಟಿಕೊಡುತ್ತದೆ. ದುರಭ್ಯಾಸ ದುಶ್ಚಟಗಳಿಂದ ದೂರ ಇರಿ. ಮೇಜರ್ ಧ್ಯಾನ್ ಚಂದ್ ಅವರ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ಬದುಕಿಗೆ ಒಂದು ಛಲ ಬೇಕಿದೆ. ಭ್ರಷ್ಟಾಚಾರ ಸ್ವಜನ ಪಕ್ಷಪಾತ ತಾಂಡವವಾಡುತ್ತಿರುವ ಈ ಸನ್ನಿವೇಶದಲ್ಲಿ ಕುಟುಂಬದ ಆಸ್ತಿ. ಸನ್ನಿವೇಶಗಳು ಎಷ್ಟು ವಿಷಮ ಪರಿಸ್ಥಿತಿಯಲ್ಲಿದ್ದರು ನಿಮ್ಮ ದೃಢ ಸಂಕಲ್ಪ ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸದಿಂದ ಗುರಿ ಸಾಧಿಸಬಹುದು ಎಂದರು.

ಹೆಣ್ಣು ಚಾಡಿ ಹೇಳುವ ಮತ್ತು ಗಂಡು ಕಣ್ಣು ಹೊಡೆಯುವ ಸಂಸ್ಕೃತಿ ಬಿಟ್ಟಾಗ ಮಾತ್ರ ಕುಟುಂಬ ಸಮಾಜ ವ್ಯವಸ್ಥೆ ಸುಂದರವಾಗಿರುತ್ತದೆ. ಪಠ್ಯ ವಿಷಯಗಳ ಜೊತೆಗೆ ಕೌಶಲ್ಯವಿದ್ದರೆ ಬದುಕು ಹಸನಾಗುತ್ತದೆ ಎಂದರು.

ಕ್ರೀಡಾ ದಿನದ ಮಹತ್ವ ಕುರಿತು ಇಂಗ್ಲಿಷ್ ಭಾಷಾ ಬೋಧಕ ರಘುನಾಥ್ ಸಿಂಗ್ ಮಾತನಾಡಿ, ಮನುಷ್ಯ ದೈಹಿಕವಾಗಿ ಗಟ್ಟಿಯಾಗಿದ್ದಾಗ ಮಾತ್ರ ಮನಸು ಸದೃಢವಾಗಿರುತ್ತದೆ. ಕ್ರೀಡೆ ರಾಷ್ಟ್ರಿಯತೆ ಬೆಳೆಸುತ್ತದೆ. ಕ್ರೀಡೆ ಉತ್ತಮ ಕೆಲಸವನ್ನು ಕೊಡಿಸುವಲ್ಲಿಯೂ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ.ಎಚ್.ಕಾವ್ಯ ಮಾತನಾಡಿದರು. ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಕೆ.ಬಿ.ಮಂಜುನಾಥ್, ಐಕ್ಯೂಎಸಿ ಸಂಯೋಜಕ ಮತ್ತು ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ರವಿಕುಮಾರ್ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಉಪನ್ಯಾಸಕರು ಇದ್ದರು.