ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ಜತೆ ನಾವಿದ್ದೇವೆ

| Published : Sep 23 2024, 01:15 AM IST

ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ಜತೆ ನಾವಿದ್ದೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಮಠದ ವಿಚಾರವಾಗಿ ಹಲವು ಗೊಂದಲಗಳನ್ನು ಕೆಲವರು ಸೃಷ್ಟಿ ಮಾಡುತ್ತಿದ್ದಾರೆ. ಇವಾವುಗಳಿಗೂ ತಲೆಕೆಡಿಸಿಕೊಳ್ಳದೇ, ಸಮಾಜದ ಅಭಿವೃದ್ಧಿಯ ಕೆಲಸವನ್ನು ಮುಂದುವರೆಸಿಕೊಂಡು ಹೋಗುವಂತೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್‌ ಅವರು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಮನವಿ ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮಠದ ವಿಚಾರವಾಗಿ ಹಲವು ಗೊಂದಲಗಳನ್ನು ಕೆಲವರು ಸೃಷ್ಟಿ ಮಾಡುತ್ತಿದ್ದಾರೆ. ಇವಾವುಗಳಿಗೂ ತಲೆಕೆಡಿಸಿಕೊಳ್ಳದೇ, ಸಮಾಜದ ಅಭಿವೃದ್ಧಿಯ ಕೆಲಸವನ್ನು ಮುಂದುವರೆಸಿಕೊಂಡು ಹೋಗುವಂತೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್‌ ಅವರು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಮನವಿ ಮಾಡಿಕೊಂಡರು.

ಸಿರಿಗೆರೆಯಲ್ಲಿ ನಡೆಯುತ್ತಿರುವ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ದಾಂಜಲಿ ಸಮಾರಂಭದ 3ನೇ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಮ್ಮ ಮಠ ಶ್ರೀಮಂತರು ಮತ್ತು ರಾಜಕಾರಣಿಗಳಿಂದ ಬೆಳೆದಿಲ್ಲ. ಸಾಮಾನ್ಯ ಭಕ್ತರ ಕೊಡುಗೆಯಿಂದ ಬೆಳೆದಿದೆ ಎಂದರು.ಮಠವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು 40 ವರ್ಷಗಳ ಕಾಲ ಶ್ರೀಗಳು ದುಡಿದಿರುವುದು ಸಮಾಜದ ಸದ್ಭಕ್ತರಿಗೆ ಗೊತ್ತಿದೆ. ಏನೇ ಸಂದರ್ಭ ಬಂದರೂ ಭಕ್ತರು ನಿಮ್ಮ ಜತೆಗೆ ಇರುತ್ತೇವೆ. ತಾವು ಯಾವುದಕ್ಕೂ ಅಂಜದೆ, ಅಳುಕದೇ ತಮ್ಮ ಕಾರ್ಯಗಳನ್ನು ಮುಂದುವರೆಸಿ ಎಂದು ಹೇಳಿದರು.

ಶಾಸಕ ಬಿ. ದೇವೇಂದ್ರಪ್ಪ

ಮಾತನಾಡಿ, ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿಯವರ ಕೃಪೆಯಿಂದ ತುಂಗಭದ್ರೆಯೇ ಓಡೋಡಿ ಬಂದು ಜಗಳೂರು ತಾಲೂಕಿನ 33 ಕೆರೆಗಳನ್ನು ತುಂಬಿಸಿದ್ದಾಳೆ. ತರಳಬಾಳು ಮಠಕ್ಕೆ ಎಲ್ಲ ಸಮುದಾಯಗಳನ್ನು ಅಪ್ಪಿಕೊಳ್ಳುವ ಹೃದಯವೈಶಾಲ್ಯತೆ ಇದೆ ಎಂದು ನುಡಿದರು.ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿ, ಸೂರ್ಯ ಚಂದ್ರರು ಇರುವ ತನಕ ಉಳಿಯವಂತಹ ಕೆಲಸವನ್ನು ತರಳಬಾಳು ಶ್ರೀಗಳು ಮಾಡಿದ್ದಾರೆ. ಅವರು ಕೆರೆಗಳನ್ನು ತುಂಬಿಸಿ ರೈತರಿಗೆ ನೆರವಾಗಿರುವುದು ಮಹತ್ತರವಾದುದು. ಸಾರ್ವಜನಿಕರ ಬದುಕು ಹಸನು ಮಾಡಲು ಅವರು ಸದಾ ಮುಂದಿದ್ದಾರೆ. ಅವರು ಯಾವಾಗಲೂ ಸಮಾಜಕ್ಕೆ ಪೂರಕವಾದ ಕೆಲಸ ಮಾಡುತ್ತಿದ್ದಾರೆ ಎಂದರು.ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ್‌ ಮಾತನಾಡಿ,ಸ್ವಾಮೀಜಿಯವರೇ ಸ್ವತಃ ಕಲಾವಿದರಾಗಿರುವುದು ತಿಳಿದು ಸಂತೋಷವಾಯಿತು. ಸಾಂಸ್ಕೃತಿಕ ವೈಭವ ಸಾರುವ ಬೇರೊಂದು ಲೋಕಕ್ಕೆ ನಾನು ಬಂದಿದ್ದೇನೆ. ಇಲ್ಲಿ ಮಕ್ಕಳ ಸಾಂಸ್ಕೃತಿಕ ಪ್ರತಿಭೆಯ ಅನಾವರಣಕ್ಕೆ ಅವಕಾಶ ಇದೆ ಎಂದು ಶ್ಲಾಘಿಸಿದರು.

ಬೆಂಗಳೂರಿನ ರಂಗಕರ್ಮಿ ಎಸ್.‌ಎನ್.‌ ಸೇತುರಾಂ ಮಾತನಾಡಿ, ರಾಜಕೀಯ ಹುಟ್ಟುತ್ತಲೇ ಬರುತ್ತದೆ. ಧರ್ಮವನ್ನು ನಾವು ರೂಢಿಸಿಕೊಳ್ಳಬೇಕು. ಬಸವಣ್ಣ ಹೇಳಿದ ಕಾಯಕವೇ ಕೈಲಾಸ ಎಂಬುದನ್ನು ಮರೆತು ಕೇವಲ ಹಣ ಮಾಡುವ ಕೆಲಸದಲ್ಲಿ ತೊಡಗಿಕೊಂಡಿರುವುದು ಸಮಾಜದ ಈ ವಿಷಮ ಪರಿಸ್ಥಿತಿಗೆ ಕಾರಣ. ಜನರಿಗೆ ಬೇಕಾದುದನ್ನು ಮಠ ಮಾಡಬೇಕು. ಕೃಷಿಕರಿಗೆ ನೆರವಾಗುವುದು, ಮಕ್ಕಳಿಗೆ ವಿದ್ಯೆ ಕೊಡುವುದು ಮಠಗಳ ಕೆಲಸ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವ ಪ್ರಸಾದ್‌ ಮಾತನಾಡಿ, ಮಕ್ಕಳಿಗೆ ನಾವು ಸಾಹಿತ್ಯ ಹೇಳಿಕೊಡಲಿಲ್ಲ. ವಚನಗಳ ವೈಭವನ್ನು ಬೆಳೆಸಲಿಲ್ಲ. ಅವರು ಮೊಬೈಲ್‌ಗಳಿಗೆ ಬಲಿಯಾಗಿದ್ದಾರೆ. ವಚನ ಪರಂಪರೆಯನ್ನು ಮಕ್ಕಳಲ್ಲಿ ಬೆಳೆಸುವ ಕೆಲಸವನ್ನು ತರಳಬಾಳು ಶ್ರೀಗಳು ಮಾಡುತ್ತಿರುವುದು ಸಂತೋಷದ ವಿಷಯ ಎಂದರು.

ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿ.ಎನ್‌. ಗೋವಿಂದರಾವ್‌ ಅವರ ಕೃತಿಯನ್ನು ಎನ್.‌ಎಸ್.‌ ಸೇತುರಾಂ ಹಾಗೂ ಡಾ. ಎಂ. ಈಶ್ವರ ಶರ್ಮಾ ಅವರ ಕೃತಿಯನ್ನು ಗೊಲ್ಲಹಳ್ಳಿ ಶಿವಪ್ರಸಾದ್‌ ಲೋಕಾರ್ಪಣೆ ಮಾಡಿದರು.

ದಾವಣಗೆರೆ ಬಾಪೂಜಿ ಇಂಜಿನಿಯರಿಂಗ್‌ ಕಾಲೇಜ್‌ ನಿರ್ದೇಶಕ ವೈ. ವೃಷಭೇಂದ್ರಪ್ಪ ಶಿವಕುಮಾರ ಶ್ರೀಗಳ ದೂರದೃಷ್ಟಿಯ ಕುರಿತು ಉಪನ್ಯಾಸ ನೀಡಿದರು. ಪ್ರಾದೇಶಿಕ ಅಧಿಕಾರಿ ಕೆ.ಇ. ಬಸವರಾಜಪ್ಪ ಸ್ವಾಗತಿಸಿದರು. ಎಚ್.‌ ಎನ್.‌ ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು.

------

ಚಿತ್ರ: ಸಿರಿಗೆರೆಯ ಎಂ.ಬಿ.ಆರ್.‌ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ನೃತ್ಯವನ್ನು ಪ್ರದರ್ಶಿಸಿದರು.

----

- ಸಿರಿಗೆರೆಯಲ್ಲಿ ನಡೆಯುತ್ತಿರುವ 3ನೇ ದಿನದ ಶ್ರದ್ಧಾಂಜಲಿ ಸಮಾರಂಭದಲ್ಲಿ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್‌ ಮಾತನಾಡಿದರು. ತರಳಬಾಳು ಶ್ರೀ, ಶಾಸಕ ಎಂ. ಚಂದ್ರಪ್ಪ, ಬಿ. ದೇವೇಂದ್ರಪ್ಪ ಮುಂತಾದವರು ಭಾಗವಹಿಸಿದ್ದರು.