ಸಾರಾಂಶ
ಮಳೆಗಾಲ ಆರಂಭವಾಗಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಆದ್ದರಿಂದ ತಾಲೂಕು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮುಂಜಾಗ್ರತಾ ಕ್ರಮ ಪಾಲಿಸಿಕೊಂಡು ಜ್ವರ ನಿಯಂತ್ರಣಕ್ಕೆ ಶ್ರಮಿಸಬೇಕು
ಕನ್ನಡಪ್ರಭ ವಾರ್ತೆ ಹಿರಿಯೂರು
ಡೆಂಘೀ ಜ್ವರದ ಬಗ್ಗೆ ಆತಂಕ ಬೇಡ. ವೈದ್ಯರು ಮತ್ತು ಸಾರ್ವಜನಿಕರು ನಿಯಂತ್ರಣಕ್ಕೆ ಒಟ್ಟಾಗಿ ಕೈಜೋಡಿಸಿದರೆ ಬಹುಬೇಗ ನಿಯಂತ್ರಣಕ್ಕೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.ನಗರದ ನೆಹರೂ ಮೈದಾನದಲ್ಲಿರುವ ರೋಟರಿ ಭವನದಲ್ಲಿ ತಾಲೂಕು ಆರೋಗ್ಯ ಸಮಿತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವತಿಯಿಂದ ಹಮ್ಮಿಕೊಂಡಿದ್ದ ನಿಯಂತ್ರಣ ಸಭೆ ಉದ್ಘಾಟಿಸಿ ಮಾತನಾಡಿ, ಮಳೆಗಾಲ ಆರಂಭವಾಗಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಆದ್ದರಿಂದ ತಾಲೂಕು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮುಂಜಾಗ್ರತಾ ಕ್ರಮ ಪಾಲಿಸಿಕೊಂಡು ಜ್ವರ ನಿಯಂತ್ರಣಕ್ಕೆ ಶ್ರಮಿಸಬೇಕು. ಜ್ವರದ ನಿಯಂತ್ರಣದ ವಿಷಯದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಿ ಎಲ್ಲಾ ರೀತಿ ಸಹಕಾರ ನೀಡಲು ನಾನು ಸಿದ್ಧವಾಗಿದ್ದೇನೆ ಎಂದರು.
ಡಿಎಚ್‌ಓ ರೇಣು ಪ್ರಸಾದ್ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ವೈದ್ಯರು ಮತ್ತು ಕ್ಷೇತ್ರ ಸಿಬ್ಬಂದಿ ಕ್ರಮವಹಿಸಬೇಕು ಎಂದರು.ಟಿಎಚ್ಓ ಡಾ.ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ ಜ್ವರ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ ಸಾಗರೋಪಾದಿಯಲ್ಲಿ ಕೈಗೊಳ್ಳಲಾಗಿದೆ. ಪ್ರತಿ ಶುಕ್ರವಾರ ಲಾರ್ವಾ ಉತ್ಪತ್ತಿ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುತ್ತಿದೆ. ಕ್ಷೇತ್ರ ಮಟ್ಟದ ಸಿಬ್ಬಂದಿ ಪ್ರತಿ ದಿನ ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸುತ್ತಾ ಐಇಸಿ ನೀಡುತ್ತಿದ್ದಾರೆ ಎಂದರು.
ಈ ವೇಳೆ ಡಾ.ಅಭಿನವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ವಿ.ಗಿರೀಶ್, ಆರೋಗ್ಯ ಇಲಾಖೆ ಸಿಬ್ಬಂದಿ, ಎಆರ್‌ಎಸ್ ಕಮಿಟಿ ಸದಸ್ಯರು ಸೇರಿ ಹಲವರಿದ್ದರು.