ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಕೇಂದ್ರ ಸರ್ಕಾರ ರಾಜ್ಯದ ಸಹಾಯಕ್ಕೆ ಬರದಿದ್ದರೂ ಸಹ ಕಾಂಗ್ರೆಸ್ ಪಕ್ಷದ ಸರ್ಕಾರ ರೈತರ ಬೆನ್ನಿಗೆ ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಕೃಷಿ ಇಲಾಖೆ ಕಛೇರಿ ಆವರಣದಲ್ಲಿ ಕೃಷಿ ಇಲಾಖೆ, ಕೃಷಿಕ ಸಮಾಜ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಅರಣ್ಯ , ಪಶುಪಾಲನಾ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಪ್ರಧಾನಿ ಚರಣ್ ಸಿಂಗ್ ರವರನ್ನು ರೈತ ಸಮುದಾಯ ಎಂದೂ ಮರೆಯಬಾರದು. ರೈತರ ಹಿತ ಕಾಯುವ ಹಲವು ಯೋಜನೆಗಳ ಹರಿಕಾರ ಅವರು. ದೇಶದಲ್ಲಿ ಒಂದೆರಡು ರಾಜ್ಯಗಳನ್ನು ಬಿಟ್ಟರೆ ಎಲ್ಲಾ ಕಡೆಯೂ ಬರಗಾಲ ಆವರಿಸಿದೆ. ಆದರೆ ನಮ್ಮ ರಾಜ್ಯದಲ್ಲಿ ಬರಗಾಲ ಇದ್ದರೂ ಸಹ ನೀರಿನ ಸಮಸ್ಯೆ ಎದುರಿಸಲು ಸರ್ಕಾರ ಸಿದ್ಧವಾಗಿದ್ದು, ಯಾವುದೇ ಸಮಸ್ಯೆಯಾಗದಂತೆ ಕಾಳಜಿ ವಹಿಸಲಾಗುತ್ತಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಡಾ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಜಗತ್ತಿನ ಎರಡು ಪ್ರಮುಖ ರಾಷ್ಟಗಳೆಂದರೆ ಅದು ಭಾರತ ಮತ್ತು ಚೀನಾ ಮಾತ್ರ. ಚೌದರಿ ಚರಣ್ ಸಿಂಗ್ ರವರು ಕೃಷಿ ಉತ್ಪನ್ನ ಮಾರಾಟ ಕಾಯ್ದೆಯನ್ನು ದೇಶಾದ್ಯಂತ ಜಾರಿಗೆ ತಂದ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಜನ್ಮ ತಾಳಿದವು.
ಜಮೀನ್ದಾರ್ ಪದ್ದತಿ ರದ್ದುಗೊಳಿಸಿ ಉಳುವವನೇ ಭೂಮಿಯ ಒಡೆಯ ಕಾಯ್ದೆಯನ್ನು ಜಾರಿಗೆ ತರಲಾಯಿತು ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ನೈಜ ಅಭಿವೃದ್ಧಿಯಾಗುತ್ತದೆ ಎಂಬ ತತ್ವ ಅವರದಾಗಿತ್ತು ಎಂದರು.
ಇದೇ ವೇಳೆ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ ಎನ್ ಚಂದ್ರಪ್ಪ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ, ಹಿರಿಯ ವಿಜ್ಞಾನಿ ಓ. ಕುಮಾರ್, ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಮಂಜಪ್ಪ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ. ಸುರೇಶ್ ಏಕಬೋಟೆ, ಕೃಷಿಕ ಸಮಾಜದ ಉಪಾಧ್ಯಕ್ಷ ಹೆಚ್ ರಂಗನಾಥ್, ಪ್ರಧಾನ ಕಾರ್ಯದರ್ಶಿ ಬಿ ರಾಜಶೇಖರ್, ರಾಜಣ್ಣ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್,ಜಿಪಂ ಮಾಜಿ ಸದಸ್ಯ ಆರ್. ನಾಗೇಂದ್ರ ನಾಯ್ಕ, ಕಂದಿಕೆರೆ ಸುರೇಶ್ ಬಾಬು, ಗಿಡ್ಡೋಬನಹಳ್ಳಿ ಅಶೋಕ್, ಡಾ ಸುಜಾತಾ, ರೈತ ಮುಖಂಡರುಗಳಾದ ಕೆಸಿ ಹೊರಕೇರಪ್ಪ, ಕೆಟಿ ತಿಪ್ಪೇಸ್ವಾಮಿ, ಶಿವಕುಮಾರ್, ಉಪ ಕೃಷಿ ನಿರ್ದೇಶಕ ಪ್ರಭಾಕರ್ , ಸಹಾಯಕ ಕೃಷಿ ನಿರ್ದೇಶಕ ಎಂವಿ ಮಂಜುನಾಥ್, ತೋಟಗಾರಿಕೆ ಇಲಾಖೆಯ ಲೋಕೇಶ್, ಜಗದೀಶ್ ಕಂದಿಕೆರೆ, ಕಸವನಹಳ್ಳಿ ರಮೇಶ್, ನಗರಸಭೆ ಸದಸ್ಯೆ ಎಸ್ ಶಿವರಂಜಿನಿ ಮುಂತಾದವರು ಉಪಸ್ಥಿತರಿದ್ದರು.
ಅಕ್ಟೋಬರ್ ಅಂತ್ಯಕ್ಕೆ ವಿವಿ ಸಾಗರಕ್ಕೆ ನೀರು: ಇದೇ ತಿಂಗಳ 30 ರೊಳಗೆ ಡಿಸಿಎಂ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರಕ್ಕೆ ಮೊದಲು ನೀರು ಬರಲಿ ನಂತರ ಎಷ್ಟು ಟಿಎಂಸಿ ಎಂಬುದ ನ್ನು ಯೋಚಿಸೋಣ.
ಐಮಂಗಲ ಹೋಬಳಿ ಮತ್ತು ಜವನಗೊಂಡನಹಳ್ಳಿ ಭಾಗಕ್ಕೂ ನೀರು ಹರಿಸಲಾಗುತ್ತದೆ. ಅಬ್ಬಿನಹೊಳಲು ಕಾಮಗಾರಿಯಿಂದ ಮುಂದಿನ ಸೆಪ್ಟಂಬರ್ ಅಥವಾ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಭದ್ರಾದಿಂದ ವಿವಿ ಸಾಗರಕ್ಕೆ ನೀರು ಹರಿಸಲಾಗುವುದು ಎಂದರು.