ಚಿಂತೆ ಬೇಡ, ನಾವು ಬಹಳ ದೂರ, ಸೇಫ್‌ ಇದ್ದೇವೆ: ಹೆಬ್ಬಾಳ್ಕರ್‌

| Published : May 11 2025, 11:49 PM IST

ಸಾರಾಂಶ

ಕರಾವಳಿಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಎಲ್ಲಾ ಸೂಚನೆಗಳನ್ನು ಪಾಲಿಸುತ್ತೇವೆ, ಆದ್ದರಿಂದ ಜಿಲ್ಲೆಯ ಜನರಿಗೆ ಚಿಂತೆ ಬೇಡ, ನಾವು ಗಡಿಯಿಂದ ಬಹಳ ದೂರ ಇದ್ದೇವೆ, ಸೇಫ್ ಇದ್ದೇವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಭಾರತ ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾನುವಾರ ಕರಾವಳಿಯ ಭದ್ರತೆಯ ಬಗ್ಗೆ ಜಿಲ್ಲಾ ಅಧಿಕಾರಿಗಳೊಂದಿಗೆ ಮಣಿಪಾಲದಲ್ಲಿ ಸಭೆ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಕರಾವಳಿಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಎಲ್ಲಾ ಸೂಚನೆಗಳನ್ನು ಪಾಲಿಸುತ್ತೇವೆ, ಆದ್ದರಿಂದ ಜಿಲ್ಲೆಯ ಜನರಿಗೆ ಚಿಂತೆ ಬೇಡ, ನಾವು ಗಡಿಯಿಂದ ಬಹಳ ದೂರ ಇದ್ದೇವೆ, ಸೇಫ್ ಇದ್ದೇವೆ ಎಂದರು. ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಎಲ್ಲಾ ಸೂಕ್ತ ಸಲಹೆ ಸೂಚನೆ ನೀಡಿದೆ, ಅದರಂತೆ ಜಿಲ್ಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ ಎಂದರು.

ಗಡಿಯಲ್ಲಿ ಯುದ್ಧ ಸನ್ನಿವೇಶ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಕೇಂದ್ರದಿಂದ ರಾಜ್ಯದವರೆಗೆ ಏಕಾಭಿಪ್ರಾಯ ಹೊಂದಿದೆ, ಪಕ್ಷದ ಹಿರಿಯ ಮುಖಂಡರು, ಲೋಕಸಭೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು ತಮ್ಮ ನಿಲುವು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರದ್ದು ಒಂದೇ ಸ್ಟ್ಯಾಂಡ್, ದೇಶ ಅಂತ ಬಂದಾಗ ನಾವೆಲ್ಲರೂ ಒಂದೇ ಎಂದರು.ಕೇಂದ್ರ ಸರ್ಕಾರ ಯುದ್ಧ ಮಾಡ್ತೇವೆ ಎಂದಾಗ ನಾವೆಲ್ಲ ಒಗ್ಗಟ್ಟಾಗಿ ಬೆಂಬಲಿಸಿದ್ದೇವೆ, ಈಗ ಕದನ ವಿರಾಮ ಆಗಿದೆ, ಈಗಲೂ ಕೇಂದ್ರ ಸರಕಾರದ ನಿರ್ಧಾರ ಜೊತೆ ನಾವು ನಿಲ್ಲುತ್ತೇವೆ ಎಂದ ಸಚಿವ ಲಕ್ಷ್ಮೀ ಹೆಬ್ಬಾಳ್‌ಕರ್, ಆಪರೇಷನ್ ಸಿಂದೂರ ಮುಂದುವರಿದಿದೆ ಅನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.