ಡೋನಾಲ್ಡ್‌ ಟ್ರಂಫ್‌ ಖಜಾನೆಗೆ ಡಾ.ಕೊಠಾರಿಗೆ ಉಸ್ತುವಾರಿ

| Published : Sep 03 2025, 01:00 AM IST

ಸಾರಾಂಶ

ಭಾರತದ ವಿರುದ್ಧ ತೆರಿಗೆ ಯುದ್ಧ ಸಾರಿರುವ ದೊಡ್ಡಣ್ಣ, ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಫ್‌ ಆಡಳಿತದಲ್ಲಿ ಕಲಬುರಗಿ ಮೂಲದ ಆರ್ಥಿಕ ತಜ್ಞ ಡಾ. ಎಸ್. ಪಿ. ಕೊಠಾರಿ ಅತ್ಯುನ್ನತ ಸ್ಥಾನ ಪಡೆವ ಮೂಲಕ ಕಲಬುರಗಿ ಕೀರ್ತಿ ಪತಾಕೆ ಜಗದಗಲ ಹರಡುವಂತೆ ಮಾಡಿದ್ದಾರೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಭಾರತದ ವಿರುದ್ಧ ತೆರಿಗೆ ಯುದ್ಧ ಸಾರಿರುವ ದೊಡ್ಡಣ್ಣ, ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಫ್‌ ಆಡಳಿತದಲ್ಲಿ ಕಲಬುರಗಿ ಮೂಲದ ಆರ್ಥಿಕ ತಜ್ಞ ಡಾ. ಎಸ್. ಪಿ. ಕೊಠಾರಿ ಅತ್ಯುನ್ನತ ಸ್ಥಾನ ಪಡೆವ ಮೂಲಕ ಕಲಬುರಗಿ ಕೀರ್ತಿ ಪತಾಕೆ ಜಗದಗಲ ಹರಡುವಂತೆ ಮಾಡಿದ್ದಾರೆ.

ಅಂತರರಾಷ್ಟ್ರೀಯ ಆರ್ಥಿಕ ನಾಯಕತ್ವದಲ್ಲಿ ಅತ್ಯಂತ ಪ್ರತಿಷ್ಠಿತ ಹುದ್ದೆಗಳಲ್ಲಿ ಒಂದಾದ ಅಮೆರಿಕದ ಖಜಾನೆ ಇಲಾಖೆಯಲ್ಲಿ ಆರ್ಥಿಕ ನೀತಿ ಕಚೇರಿಯ ಸಹಾಯಕ ಕಾರ್ಯದರ್ಶಿಯಾಗಿ ನೇಮಕಗೊಂಡ ಕಲಬುರಗಿಯ ಸಾಧಕ ಡಾ. ಎಸ್. ಪಿ. ಕೊಠಾರಿ ಅವರ ಅತ್ಯುತ್ತಮ ಸಾಧನೆಗೆ ಈಡೀ ಜಿಲ್ಲೆ ಸಂತೋಷ ಪಡುವಂತಾಗಿದೆ.

ಈ ಬಗ್ಗೆ ಡಾ. ಕೋಠಾರಿಯರಿಗೆ ಶ್ವೇತ ಭವನದ ಅಧಿಕಾರಿ ಜಿಲಿಯನ್‌ ವ್ಯಾಂಟ್‌ ಪತ್ರ ಬರೆದಿದ್ದಾರೆ. ಅಮೆರಿಕದ ಸೆನೆಟ್‌ನ ಸಮ್ಮತಿ ಹಾಗೂ ಅಮೆರಿಕದ ಅಧ್ಯಕ್ಷರ ಒಪ್ಪಿಗೆ ಮೇರೆಗೆ ಈ ಹುದ್ದೆಯನ್ನು ಕೊಠಾರಿ ಅವರಿಗೆ ವಹಿಸಿಕೊಡಲಾಗಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಲಬುರಗಿಯಲ್ಲಿರುವ ಶತಮಾನ ಕಂಡಿರುವ ನೂತನ ವಿದ್ಯಾಲಯ ಸಂಸ್ಥೆಯ ವಿದ್ಯಾರ್ಥಿಯಾಗಿರುವ ಡಾ. ಎಸ್‌.ಪಿ.ಕೋಠಾರಿ ಅವರು ಅಮೆರಿಕ ಸರ್ಕಾರದಲ್ಲಿ ಹೊಂದಿರುವ ಈ ಉನ್ನತ ಸ್ಥಾನಮಾನದಿಂದ ಕಲಬುರಗಿ ಕೀರ್ತಿ ಪತಾಕೆ ದೊಡ್ಡಣ್ಣನ ಸರ್ಕಾರವನ್ನೂ ತಲುಪಿದಂತಾಗಿದೆ.ಕೊಠಾರಿ ನೇಮಕ: ಡಾ. ಕೊಠಾರಿ ಈ ಹಿಂದೆ ಎಂಐಟಿಯಲ್ಲಿ ನಾಯಕತ್ವದ ಹುದ್ದೆಗಳನ್ನು ಅಲಂಕರಿಸುವುದರ ಜೊತೆಗೆ, ಯು.ಎಸ್. ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಆರ್ಥಿಕ ಮತ್ತು ಅಪಾಯ ವಿಶ್ಲೇಷಣೆ ವಿಭಾಗದ ನಿರ್ದೇಶಕ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಹಣಕಾಸು ಮಾರುಕಟ್ಟೆಗಳು, ಕಾರ್ಪೊರೇಟ್ ಆಡಳಿತ ಮತ್ತು ಆರ್ಥಿಕ ನೀತಿಯಲ್ಲಿ ಅವರ ಪರಿಣತಿಯು ಅವರಿಗೆ ಜಾಗತಿಕ ಮನ್ನಣೆಯನ್ನು ಗಳಿಸಿಕೊಟ್ಟಿದೆ.

ಈ ನೇಮಕಾತಿ ಡಾ. ಕೊಠಾರಿ ಅವರ ವೈಯಕ್ತಿಕ ಮೈಲಿಗಲ್ಲು ಮಾತ್ರವಲ್ಲದೆ, ಜಾಗತಿಕ ಆರ್ಥಿಕ ನೀತಿ ನಿರೂಪಣೆಯಲ್ಲಿ ಅವರು ಅತ್ಯುನ್ನತ ಮಟ್ಟದಲ್ಲಿ ಕೊಡುಗೆ ನೀಡುತ್ತಿರುವುದರಿಂದ ಕಲಬುರಗಿ, ಕರ್ನಾಟಕ ಮತ್ತು ಭಾರತವೇ ಹೆಮ್ಮೆ ಪಡುವಂತಹ ಐತಿಹಾಸಿಕ ಕ್ಷಣವಾಗಿದೆ.

ಕಲಬುರಗಿ ಟು ಅಮೆರಿಕ: ಕೊಠಾರಿ ಸಾಧನೆಯ ಪಯಣ

ಡಾ. ಎಸ್‌.ಪಿ.ಕೊಠಾರಿ ಅವರಿಗೆ ಭಾರತ ಸರ್ಕಾರ ಪ್ರದ್ಮಶ್ರೀ ಗೌರವ ನೀಡಿ ಪುರಸ್ಕರಿಸಿದೆ. ಪ್ರಸ್ತುತ ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ಪ್ರಾಧ್ಯಾಪಕರಾಗಿರುವ ಗಾರ್ಡನ್ ವೈ. ಬಿಲ್ಲಾರ್ಡ್‌ ಕೋಠಾರಿ ಅವರ ಶೈಕ್ಷಣಿಕ ಮತ್ತು ವೃತ್ತಿಪರ, ಸಾಧನೆಯ ಪ್ರಯಾಣವು ಕಲಬುರಗಿಯಿಂದ ಅಮೆರಿಕಾವರೆಗೂ ತಲುಪಿರುವುದು ಗಮನಾರ್ಹವಾಗಿದೆ. ಗುಲ್ಬರ್ಗ ಸರ್ಕಾರಿ ಕಾಲೇಜಿನಲ್ಲಿ ಅವರ ಆರಂಭಿಕ ಶಿಕ್ಷಣದಿಂದ ಬಿಐಟಿಎಸ್ ಪಿಲಾನಿ, ಐಐಎಂ ಅಹಮದಾಬಾದ್ ಮತ್ತು ಅಮೆರಿಕದಲ್ಲಿ ಡಾಕ್ಟರೇಟ್ ಸಂಶೋಧನೆಯವರೆಗೆ, ಅವರು ನಿರಂತರ ಪ್ರತಿಭೆ ಮತ್ತು ಪರಿಶ್ರಮ ಪ್ರದರ್ಶಿಸಿದ್ದಾರೆ.

ಎನ್‌ವಿ ಸಂಸ್ಥೆಯ ಸಾಧನೆಯ ಸರಣಿ

ಕಲಬುರಗಿಯ ನೂತನ ವಿದ್ಯಾಲಯ ಸಂಸ್ಥೆ ಈ ಭಾಗದಲ್ಲಿ ಅನೇಕ ಘಟಾನುಘಟಿಗಳನ್ನು ತನ್ನೊಡಲಲ್ಲಿ ಓದಿಸಿ ಬೆಳೆಸಿದೆ. ಈಗಿನ ಎಐಸಿಸಿ ಅಧ್ಯಕ್ಷರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ, ಹಿಂದೆ ನೆಹರು ಕಾಲದಲ್ಲಿ ಎಐಸಿಸಿವರೆಗೂ ತಲುಪಿ ಅಲ್ಲಿ ಪ್ರಮುಖ ಪಾತ್ರವಹಿಸಿದ್ದ ದಿ. ಜಗನ್ನಾಥರಾವ ಚಂಡ್ರಕಿ ಇವರೆಲ್ಲರೂ ಎನ್‌ವಿ ಶಾಲೆಯ ವಿದ್ಯಾರ್ಥಿಗಳು ಎಂಬುದು ಹೆಮ್ಮೆ. ಈ ಶಾಲೆಗೆ ಗಾಂಧೀಜಿ ಭೇಟಿ ನೀಡಿದ್ದು ಇತಿಹಾಸ. ಇದಲ್ಲದೆ ಲೋಕಮಾನ್ಯ ತಿಲಕರ ಮಾತುಗಳಿಂದ ಪ್ರೇರಣೆ ಹೊಂದಿ ಇಲ್ಲಿ ಆರಂಭವಾಗಿರುವ ಎನ್‌ವಿ ಸಂಸ್ಥೆಗೆ ಶತಮಾನ ತುಂಬಿ ಕಂಗೊಳಿಸುತ್ತಿದೆ. ಈ ಶಾಲೆಯ ವಿದ್ಯಾರ್ಥಿ ಅಮೆರಿಕ ಆರ್ಥಿಕ ನೀತಿಯಲ್ಲಿನ ಸಾಧನೆಯಿಂದ ಮತ್ತೆ ಎನ್‌ವಿ ಸಂಸ್ಥೆ ಸುದ್ದಿಯಲ್ಲಿದೆ.

ನೂತನ ವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿ

ಶತಮಾನ ಕಂಡಿರುವ ನೂತನ ವಿದ್ಯಾಲಯ ಸಂಸ್ಥೆಯಲ್ಲಿ ಓದಿ ಹೆಮ್ಮೆಯ ವಿದ್ಯಾರ್ಥಿಯಾಗಿದ್ದ ಡಾ. ಎಸ್‌.ಪಿ.ಕೊಠಾರಿ ಅವರು ಅಮೆರಿಕ ಆರ್ಥಿಕತೆಯ ಅತ್ಯುನ್ನತ ಸ್ಥಾನಮಾನ ಪಡೆದಿರುವುದು ಹೆಮ್ಮೆಯ ಸಂಗತಿ. ಅವರಿಗೆ ಭಾರತ ಸರ್ಕಾರ ಪದ್ಮ ಪುರಸ್ಕಾರ ನೀಡಿದಾಗಲೂ ಸಂತಸವಾಗಿತ್ತು. ಆಗ ಅವರನ್ನು ಮಾತನಾಡಿಸಿ ಶುಭ ಕೋರಿದ್ದೇವೆ. ಅವರನ್ನು ಅಭಿನಂದಿಸಿ ಕಲಬುರಗಿಯ ನೂತನ ವಿದ್ಯಾಲಯಕ್ಕೆ ಬರಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಇಂತಹ ಸಂಗತಿಗಳು ನಮ್ಮ ಮಕ್ಕಳಿಗೆ, ಕಲಬುರಗಿ ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆ.

-ಅಭಿಜಿತ್‌ ದೇಶಮುಖ, ಕಾರ್ಯದರ್ಶಿ, ನೂತನ ವಿದ್ಯಾಲಯ ಸಂಸ್ಥೆ, ಕಲಬುರಗಿ