ಸಾರಾಂಶ
ನಮ್ಮ ನೊಳಂಬ ಸಮಾಜದ ಏಳಿಗೆಗಾಗಿ ಸಮಾಜದ ಎಲ್ಲರೂ ಪಣತೊಟ್ಟು ಒಗ್ಗಟ್ಟು, ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹಳೇಬೀಡು ಪುಷ್ಪಗಿರಿ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭವಾರ್ತೆ ತಿಪಟೂರು
ನಮ್ಮ ನೊಳಂಬ ಸಮಾಜದ ಏಳಿಗೆಗಾಗಿ ಸಮಾಜದ ಎಲ್ಲರೂ ಪಣತೊಟ್ಟು ಒಗ್ಗಟ್ಟು, ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹಳೇಬೀಡು ಪುಷ್ಪಗಿರಿ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲೂಕಿನ ಕೆ.ಬಿ.ಕ್ರಾಸ್‌ನಲ್ಲಿರುವ ರಂಭಾಪುರಿ ವಿದ್ಯಾಸಂಸ್ಥೆಯಲ್ಲಿ ನಡೆದ ನೊಳಂಬ ಸಂಗಮ ಜಾತ್ರೆ ಸಮಾವೇಶ-೨೫ ರ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ರಾಜ್ಯದ ಎಲ್ಲಿಯೇ ಸಮಾಜದ ಕಾರ್ಯಕ್ರಮಗಳು ನಡೆದರೆ ಸಮಾಜ ಬಂಧುಗಳು ತಮ್ಮ ಒಂದು ದಿನವನ್ನು ಆ ಕಾರ್ಯಕ್ರಮಕ್ಕೆ ಮೀಸಲಿಡಬೇಕು. ಯಾವುದೇ ಉನ್ನತ ಕ್ಷೇತ್ರದ ಸ್ಥಾನದಲ್ಲಿರುವವರು ತಮ್ಮ ದುಡಿಮೆಯಲ್ಲಿ ಕನಿಷ್ಟ ಶೇ.೧ರಷ್ಟು ಹಣವನ್ನು ಸಮಾಜದ ಅಭಿವೃದ್ಧಿಗಾಗಿ ಮೀಸಲಿಡಬೇಕು ಹಾಗೂ ಸಮಾಜದ ವಿದ್ಯಾ ಸಂಸ್ಥೆಗಳು ತಮ್ಮ ವಿದ್ಯಾಸಂಸ್ಥೆಗಳಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಅಥವಾ ಇನ್ಯಾವುದೇ ಉನ್ನತ ಕೋರ್ಸ್‌ನ ಶೇ.೧೦ರಷ್ಟು ಸೀಟುಗಳನ್ನು ಸಮಾಜದವರಿಗೆ ಮೀಸಲಿಡುವಂತಾದರೆ ಸಮಾಜಗ ಬಂಧುಗಳು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಹುದು ಎಂದು ತಿಳಿಸಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ತುಮಕೂರು ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಸ್ವಾಮೀಜಿಯವರು ಹೇಳಿದಂತೆ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಸಮಾಜದವರಿಗೆ ಯಾವಾಗಲೂ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಸಿದ್ಧರಾಮ ಜಯಂತಿಯಂತಹ ದೊಡ್ಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಒಗ್ಗಟ್ಟಿನ ಸಂಕೇತ ಪ್ರದರ್ಶಿಸುತ್ತಿರುವ ಸಮಾಜ ನಮ್ಮದು. ನಮ್ಮ ಸಮಾಜದ ವಿದ್ಯಾರ್ಥಿಗಳು ಕೈಗಾರಿಕಾ ಕ್ಷೇತ್ರ, ಸಂಶೋಧನಾ ಕ್ಷೇತ್ರದಲ್ಲಿ ಕೂಡಾ ಮುಂದೆ ಬರಬೇಕು. ಅದೇ ರೀತಿ ಉನ್ನತ ಅಧಿಕಾರಿಗಳಾಗಿ ಕೂಡ ಬರಬೇಕಿದೆ. ರಾಜ್ಯದ ಅನೇಕ ಕಡೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ತೆರೆಯುವ ಮೂಲಕ ನಮ್ಮ ಸಮಾಜದವರಿಗೆ ಉದ್ಯೋಗ ಗಳಿಸಲು ದಾರಿತೋರಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ನೊಳಂಬ ಸಮಾಜ ಸಹ ಮೆರಿಟ್ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಉತ್ತಮ ಕಾರ್ಯ. ಹಿಂದೆ ತುಮಕೂರಿನ ಸಿದ್ದಗಂಗಾ ಹಾಗೂ ಗೋಡೇಕೆರೆ ಮಠಗಳು ಅನ್ನ ಮತ್ತು ವಿದ್ಯಾ ದಾಸೋಹ ನೀಡಿರದಿದ್ದರೆ ವಿದ್ಯಾ ಕ್ಷೇತ್ರದಲ್ಲಿ ನಮ್ಮ ಸಮಾಜ ಬಹಳ ಹಿಂದುಳಿಯುತ್ತಿತ್ತು ಎಂದರು. ನೊಳಂಬ ಸ್ವಯಂಸೇವಕಸಂಘದ ಅಧ್ಯಕ್ಷ ಡಾ. ಧನಂಜಯ್ ಮಾತನಾಡಿ ರಾಜ್ಯದ ಎಲ್ಲಾ ತಾಲೂಕು, ಹೋಬಳಿ ಮಟ್ಟದಲ್ಲಿ ನಮ್ಮ ನೊಳಂಬ ಸಮಾಜವನ್ನು ಒಗ್ಗೂಡಿಸುವ ಕಾರ್ಯ ನಡೆಯುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಅಪಾರ ನೊಳಂಬ ಸಮಾಜದವರಿದ್ದು ಈ ಬಾರಿ ತುಮಕೂರು ಜಿಲ್ಲೆಯಲ್ಲಿಯೇ ನೊಳಂಬ ಜಾತ್ರೆ ಮಾಡುತ್ತಿದ್ದೇವೆ. ಮುಂದೆ ನೊಳಂಬ ಸಮಾಜದ ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾಬ್ಯಾಸ ಹಾಗೂ ಹಾಸ್ಟಲ್ ಸೌಲಭ್ಯ ಕಲ್ಪಸಲು ಪ್ರಯತ್ನಿಸುತ್ತೇವೆ ಎಂದರು.ನೊಳಂಬ ಸಮಾಜದ ನಾನೂರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾರಂಭದಲ್ಲಿ ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಮಹಾಸ್ವಾಮೀಜಿ, ಕೇದಿಗೆ ಮಠಾಧ್ಯಕ್ಷ ಜಯಚಂದ್ರಶೇಖರ ಸ್ವಾಮೀಜಿ, ಚಿದಾನಂದಾಶ್ರಮದ ಅಭಿನವ ಬಸವಲಿಂಗಸ್ವಾಮೀಜಿ, ಬೇಲೂರು ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಭಾರತೀಯ ಕಂದಾಯ ಸೇವೆಯ ಸೌಮ್ಯ ಸುಧಾಕರ್, ಮುಖಂಡರಾದ ರಾಯಸಂದ್ರ ರವಿ, ಚಿನ್ಮಯ್ ಚಿಗಟೇರಿ, ಪರಮೇಶ್ವರಪ್ಪ, ನವಿಲೆ ಪರಮೇಶ್ ಮುಂತಾದವರು ಉಪಸ್ಥಿತರಿದ್ದರು.