ಸಾರಾಂಶ
ಹೊಸಕೋಟೆ: ರಕ್ತದಾನ ಮಾಡಿ ನೂರಾರು ಜೀವ ಉಳಿಸುವ ಪುಣ್ಯದ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಇನ್ಸ್‌ಪೆಕ್ಟರ್ ಅಶೋಕ್ ತಿಳಿಸಿದರು.ನಗರದ ಕನಕ ಭವನದಲ್ಲಿ ರಾಷ್ಟ್ರೋತ್ಥಾನ ರಕ್ತ ನಿಧಿ ಹಾಗೂ ನೇತಾಜಿ ರಕ್ತ ನಿಧಿಯ ಸಹಯೋಗದಲ್ಲಿ ಪ್ರೇರಣಾ ಪ್ರತಿಷ್ಟಾನದ ವತಿಯಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಮನುಷ್ಯ ಕಾಲಕಾಲಕ್ಕೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯ ಸಮತೋಲನದಲ್ಲಿರುತ್ತದೆ. ದೇಶದಲ್ಲಿ ರಕ್ತದ ಬೇಡಿಕೆ ಪ್ರಮಾಣ ಹೆಚ್ಚಾಗಿದ್ದು, ರಕ್ತದಾನಿಗಳು ಕೂಡ ಕಡಿಮೆ ಆಗಿದ್ದಾರೆ. ಆದರೆ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಆಯೋಜಿಸಿ ರಕ್ತ ಸಂಗ್ರಹಣೆಗೆ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ಶೇಷಣ್ಣ ಮಾತನಾಡಿ, ಪ್ರತಿ ದಿನ ಅಪಘಾತದಲ್ಲಿ ನೂರಾರು ಜನ ರಕ್ತದ ಕೊರತೆಯಿಂದ ಸಾವನಪ್ಪುತ್ತಿದ್ದಾರೆ. 18 ವರ್ಷ ಮೇಲ್ಪಟ್ಟ 50 ವರ್ಷಗಳ ಆರೋಗ್ಯವಂತ ಪುರುಷ ಅಥವಾ ಮಹಿಳೆ ಪ್ರತಿ ವರ್ಷಕ್ಕೊಮ್ಮೆ ರಕ್ತದಾನ ಮಾಡುವುದರಿಂದ ಅಪಘಾತದಲ್ಲಿ ರಕ್ತದ ಕೊರತೆಯಿಂದ ಸಾಯುವವರನ್ನು ಉಳಿಸಬಹುದಾಗಿದೆ ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸೇವಾ ಪ್ರಮುಖ್ ಗುರುರಾಜ್ ಕುಲಕರ್ಣಿ, ಜಿಲ್ಲಾ ಸಹ ಕಾರ್ಯವಾಹ ಜಗದೀಶ್, ಶ್ರೀಧರ್, ಪರಮೇಶ್ ಇದ್ದರು.