ಸಾರಾಂಶ
ಹನಿ ರಕ್ತದಿಂದ ಮತ್ತೊಂದು ಜೀವ ಉಳಿಸಬಹುದು. ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ. ಹೀಗಾಗಿ ದಾನದಿಂದ ಮಾತ್ರ ಪಡೆಯಬಹುದು ಎಂಬುದನ್ನು ನಾಗರಿಕರು ಅರಿತುಕೊಳ್ಳಬೇಕು.
ಯಲಬುರ್ಗಾ:
ರಕ್ತದಾನ ಅತ್ಯಂತ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಿದ್ಲಿಂಗಪ್ಪ ಶ್ಯಾಗೊಟಿ ಹೇಳಿದರು.ತಾಲೂಕಿನ ಹೊಸಳ್ಳಿ ಗ್ರಾಮದ ಶ್ರೀಶರಣಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಭಾರತೀಯ ರೆಡ್ ಸಂಸ್ಥೆ ಹಾಗೂ ಗ್ರಾಮದ ನಾನಾ ಸಂಘಟನೆಗಳ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹನಿ ರಕ್ತದಿಂದ ಮತ್ತೊಂದು ಜೀವ ಉಳಿಸಬಹುದು. ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ. ಹೀಗಾಗಿ ದಾನದಿಂದ ಮಾತ್ರ ಪಡೆಯಬಹುದು ಎಂಬುದನ್ನು ನಾಗರಿಕರು ಅರಿತುಕೊಳ್ಳಬೇಕು ಎಂದರು.
ವಕೀಲರ ಸಂಘದ ಮಾಜಿ ತಾಲೂಕಾಧ್ಯಕ್ಷ ಎಸ್.ಎನ್. ಶ್ಯಾಗೋಟಿ ಮಾತನಾಡಿ, ರಕ್ತದಾನದಿಂದ ದೇಹದಲ್ಲಿ ಕೊಬ್ಬಿನಾಂಶ ಕಡಿಮೆಯಾಗಿ ಆರೋಗ್ಯ ಸುಧಾರಿಸಲಿದೆ. ಜತೆಗೆ ಹೃದಯಾಘಾತ ಪ್ರಮಾಣ ಕಡಿಮೆಯಾಗಲಿದೆ. ಜತೆಗೆ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲಿದೆ ಎಂದ ಅವರು, ಯುವಕರು ದುಶ್ಚಟಗಳಿಗೆ ಬಲಿಯಾಗುವ ಬದಲು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡು ಬದುಕಿನ ಮೌಲ್ಯ ಹೆಚ್ಚಿಸಕೊಳ್ಳಬೇಕು ಎಂದು ಕರೆ ನೀಡಿದರು.ಗ್ರಾಪಂ ಸದಸ್ಯ ನೀಲನಗೌಡ ತೊಂಡಿಹಳ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಡಾ. ಶಿವಕುಮಾರ ದಿವಟರ್ ಮಾತನಾಡಿ, ಮನುಷ್ಯ ಮಾನವೀಯ ದೃಷ್ಟಿಯಿಂದ ರಕ್ತದಾನ ಮಾಡಿದರೆ ಮಾತ್ರ ಇನ್ನೊಬ್ಬರ ಜೀವಕ್ಕೆ ಆಧಾರವಾಗಬಹುದು. ರಾಜ್ಯದ ಹಲವಾರು ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿದ್ದು, ಯುವಕರು ಸ್ವಯಂ ಪ್ರೇರಿತ ರಕ್ರದಾನಕ್ಕೆ ಮುಂದಾಗಬೇಕು. ಈ ಮೂಲಕ ಜೀವ ಉಳಿಸುವ ಪುಣ್ಯಕಾರ್ಯಕ್ಕೆ ಕೈಜೋಡಿಸಬೇಕೆಂದರು.
ಈ ವೇಳೆ ಪ್ರಾಚಾರ್ಯ ಮಂಜುನಾಥ ಹಡಗಲಿ, ಸಹಕಾರಿ ಕೃಷಿ ಪತ್ತಿನ ಸಂಘದ ನಿರ್ದೇಶಕ ಶರಣಪ್ಪಗೌಡ, ಸಂತೋಷ ಶಿರೂರ, ವೀರನಗೌಡ ಹನುಮಂತಗೌಡ್ರ, ಶೇಖರಗೌಡ ಪಾಟೀಲ ಇದ್ದರು.