ಸಮಾಜದ ಉನ್ನತಿಗೆ ದಾನ, ಧರ್ಮ ಮಾಡಿರಿ: ಅಮರೇಶ್ವರ ಸ್ವಾಮೀಜಿ

| Published : May 22 2024, 12:47 AM IST

ಸಾರಾಂಶ

ವೀರಭದ್ರ ಸ್ವಾಮಿಯ ವೀರಶೈವ ಸಮಾಜ ಮಾತ್ರವಲ್ಲದೇ ಎಲ್ಲಾ ಸಮುದಾಯವರು ಆರಾಧನೆ ಮತ್ತು ಮನೆ ದೇವರಾಗಿ ಪೂಜಿಸುತ್ತಾರೆ. ವೀರಭದ್ರನ ವೀರಗುಣಗಳ ಪ್ರತಿಬಿಂಬಿಸುವ ಆರಾಧನೆಯು ಕಟ್ಟು ನಿಟ್ಟಿನ ಆಚರಣೆಗಳು ಬಹು ಪ್ರಾಚೀನವಾದವು. ಕಾಯ, ವಾಚ ಮತ್ತು ಮನಸ್ಸಿನಿಂದ ಶ್ರೀ ಸ್ವಾಮಿಯಲ್ಲಿ ಬೇಡಿದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದು ಶಾಸ್ತ್ರಗಳು ತಿಳಿಸುತ್ತವೆ.

ಕನ್ನಡಪ್ರಭ ವಾರ್ತೆ ಸೊರಬ

ಪ್ರತಿಯೊಬ್ಬರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದಾನ, ಧರ್ಮ ಮಾಡುವ ಮನೋಭಾವ ರೂಢಿಸಿಕೊಂಡರೆ ಬದುಕು ಸಾರ್ಥಕತೆ ಪಡೆಯುತ್ತದೆ ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.

ಮಂಗಳವಾರ ತಾಲೂಕಿನ ಹಾಲಗಳಲೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಮಿತಿ ವತಿಯಿಂದ ಶ್ರೀದೇವರಿಗೆ ಹಮ್ಮಿಕೊಂಡ ಶತರುದ್ರಾಭಿಷೇಕ, ಕ್ಷೀರಾಭಿಷೇಕ, ಎಳನೀರು ಅಭಿಷೇಕ ಪೂಜಾ ಕಾರ್ಯಕ್ರಮದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಸಮಾಜದ ಏಳಿಗೆಗಾಗಿ ದಾನ, ಧರ್ಮದಲ್ಲಿ ತೊಡಗಿಸಿಕೊಳ್ಳಬೇಕು. ದುಡಿಮೆಯ ಕೊಂಚ ಭಾಗ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿನಿಯೋಗಿಸಿದರೆ ಆತ್ಮತೃಪ್ತಿಯು ದೊರೆಯುತ್ತದೆ ಜೊತೆಗೆ, ಮಕ್ಕಳಲ್ಲಿ ಉತ್ತಮ ಗುಣಗಳು ಬೆಳೆಯಲು ಅವಕಾಶವಾಗುತ್ತದೆ ಎಂದರು.

ವೀರಭದ್ರ ಸ್ವಾಮಿಯ ವೀರಶೈವ ಸಮಾಜ ಮಾತ್ರವಲ್ಲದೇ ಎಲ್ಲಾ ಸಮುದಾಯವರು ಆರಾಧನೆ ಮತ್ತು ಮನೆ ದೇವರಾಗಿ ಪೂಜಿಸುತ್ತಾರೆ. ವೀರಭದ್ರನ ವೀರಗುಣಗಳ ಪ್ರತಿಬಿಂಬಿಸುವ ಆರಾಧನೆಯು ಕಟ್ಟು ನಿಟ್ಟಿನ ಆಚರಣೆಗಳು ಬಹು ಪ್ರಾಚೀನವಾದವು. ಕಾಯ, ವಾಚ ಮತ್ತು ಮನಸ್ಸಿನಿಂದ ಶ್ರೀ ಸ್ವಾಮಿಯಲ್ಲಿ ಬೇಡಿದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದು ಶಾಸ್ತ್ರಗಳು ತಿಳಿಸುತ್ತವೆ ಎಂದರು.

ಜಡೆ ಸಂಸ್ಥಾನ ಮಠದ ಶ್ರೀ ಕುಮಾರಕೆಂಪಿನ ಸಿದ್ಧ ವೃಷಭೇಂದ್ರ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಅನೇಕ ಶರಣರು, ವಚನಕಾರರು ಸಮಾಜಕ್ಕೆ ಉತ್ತಮ ಸಂದೇಶಗಳ ನೀಡಿದ್ದಾರೆ. ಅವರ ಮಾರ್ಗದಲ್ಲಿ ಮುನ್ನೆಡೆದಾಗ ಸತ್ಪ್ರಜೆಗಳಾಗಲು ಸಾಧ್ಯ. ದೇಶವು ಧಾರ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತವಾದ್ದರಿಂದ ಜಗತ್ತಿನಲ್ಲಿಯೇ ಗುರುತಿಸಲ್ಪಡುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಶರಣರ ವಚನಗಳ ಆಲಿಸುವುದರಿಂದ ಮಾನಸಿಕವಾಗಿ ಶುದ್ಧವಾಗಲು ಸಾಧ್ಯ ಎಂದರು.

ದೇವಸ್ಥಾನದ ಅರ್ಚಕ ಪುಟ್ಟಪ್ಪ ಹಿತ್ಲರ್ ಪೂಜಾ ಕಾರ್ಯಗಳ ನೇತೃತ್ವ ವಹಿಸಿದ್ದರು. ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಲಕಪ್ಪ ನಡಹಳ್ಳೇರ್, ಪ್ರಧಾನ ಕಾರ್ಯದರ್ಶಿ ಶಿವಪ್ಪ ಹಿತ್ಲರ್, ಹೇಮಪ್ಪ ಹಂಚಿನ್, ಮುದ್ದಪ್ಪ, ಗ್ರಾಮದ ಪ್ರಮುಖರಾದ ಗೆದ್ದಪ್ಪ, ವೀರಭದ್ರಪ್ಪ, ಚಂದ್ರಪ್ಪ, ವಿರೂಪಾಕ್ಷಪ್ಪ, ಬಂಗಾರಪ್ಪ, ದೇವಪ್ಪ ಸೇರಿ ಗ್ರಾಮಸ್ಥರಿದ್ದರು.